

ನರೇಗಲ್ಲ: ಮನುಷ್ಯನಲ್ಲಿ ಅರಿವು ಮತ್ತು ಅಜ್ಞಾನ ಎರಡೂ ಮನೆ ಮಾಡಿವೆ. ಅರಿವಿನ ಬೆಳಕು ಹೆಚ್ಚಾದಾಗ ಅಜ್ಞಾನ ಇರುವುದಿಲ್ಲ. ಅಂತರಂಗ, ಬಹಿರಂಗ ಶುದ್ಧಿಗೆ ಧರ್ಮಾಚರಣೆ ಮುಖ್ಯವಾಗಿದೆ ಎಂದು ರೋಣ ಗುಲಗಂಜಿಮಠದ ಗುರುಪಾದ ಸ್ವಾಮೀಜಿ ಹೇಳಿದರು.
ಲಿಂ. ಸೋಮಶೇಖರ ಶಿವಾಚಾರ್ಯರ ತೃತೀಯ ಪುಣ್ಯಸ್ಮರಣೋತ್ಸವ ನಿಮಿತ್ತ ಅಬ್ಬಿಗೇರಿ ಹಿರೇಮಠದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜಗದ್ಗುರು ರುದ್ರಮುನಿ ಭಗವತ್ಪಾದರ ಚರಿತ್ರೆ’ ಪ್ರವಚನ ಸಮಾರಂಭ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಭೌತಿಕ ಬದುಕು ಬೆಳೆದಿದ್ದರೂ ಆಂತರಿಕ ಬದುಕು ದುರ್ಬಲಗೊಳ್ಳುತ್ತಿದೆ. ಕರುಣೆ, ವಾತ್ಸಲ್ಯ, ಪ್ರೀತಿಯಿಂದ ಬಾಳಬೇಕಾದ ಮನುಷ್ಯ ಬದುಕಿನಲ್ಲಿ ಸಮಸ್ಯೆಗಳನ್ನು ಸೃಷ್ಟಿಸಿ ಅಶಾಂತಿ ಅತೃಪ್ತಿಗೆ ಕಾರಣವಾಗುತ್ತಿರುವುದು ನೋವಿನ ಸಂಗತಿ. ವೀರಶೈವ ಧರ್ಮ ಸಂಪುಟದಲ್ಲಿ ಜಗದ್ಗುರು ರೇಣುಕಾಚಾರ್ಯರು ಮನ ಪರಿವರ್ತನೆ ಮತ್ತು ಸಂಸ್ಕಾರದ ಮೂಲಕ ಬದುಕಿಗೊಂದು ಮೌಲ್ಯ ಬರುವಂತೆ ತೋರಿದ ದಾರಿಯನ್ನು ಮರೆಯುವಂತಿಲ್ಲ ಎಂದರು.
ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ವೀರಭದ್ರ ಸ್ವಾಮೀಜಿ, ಬಸಲಿಂಗಯ್ಯ ಶಾಸ್ತ್ರಿಹಿರೇಮಠ, ಶರಣಯ್ಯ ಶಾಸ್ತ್ರಿ ಅರಳೆಲೆಮಠ, ಮಲ್ಲಯ್ಯ ಹಿರೇಮಠ, ಬಸವರಾಜ ಹನಮನಾಳ, ಶಿವಾನಂದ ಕಮ್ಮಾರ ಇತರರಿದ್ದರು.