ಶ್ರದ್ಧಾ ಭಕ್ತಿಯಿಂದ ದೇವರ ಆರಾಧಿಸಿ

18sgr1
ಶ್ರೀನಿವಾಸ ಕಲ್ಯಾಣ ಅಂಗವಾಗಿ ಸಾಗರ ಮಧ್ವ ಸಂಘದಿಂದ ಆಯೋಜಿಸಿದ್ದ ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದ ಭಕ್ತ ವೃಂದ.
Published on

ಸಾಗರ: ಎಲ್ಲರು ಸುಖ ಸಮೃದ್ಧಿಯಿಂದ ಜೀವನ ನಡೆಸುವ ಆಶಯ ಇರಬೇಕು. ಧಾರ್ಮಿಕ ಕಾರ್ಯಕ್ರಮಗಳು ಲೋಕಕಲ್ಯಾಣಾರ್ಥ ನಡೆಸಿದಾಗ ಅರ್ಥ ಕಂಡುಕೊಳ್ಳುತ್ತವೆ ಎಂದು ಸಾಗರ ಮಧ್ವ ಸಂಘದ ಅಧ್ಯಕ್ಷ ಡಾ. ಜಿ.ವಿ.ಕಲ್ಲಾಪುರ್ ಹೇಳಿದರು.

ಮಧ್ವ ಸಂಘದಿಂದ ಆಯೋಜಿಸಿದ್ದ ಶ್ರೀನಿವಾಸ ಕಲ್ಯಾಣದ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿ, ನಮ್ಮಲ್ಲಿ ಮಂಗಳ ಕಾರ್ಯಗಳನ್ನು ಆರಂಭಿಸುವಾಗ ಶ್ರೀನಿವಾಸ ಕಲ್ಯಾಣ, ಜಾಂಬವತಿ ಕಲ್ಯಾಣ, ಗಿರಿಜಾ ಕಲ್ಯಾಣದಂತಹ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತದೆ ಎಂದು ತಿಳಿಸಿದರು.
ಕಲಿಯುಗದಲ್ಲಿ ಬೇಡಿದ ವರ ನೀಡುವ ಶ್ರೀನಿವಾಸ ದೇವರನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಬೇಕು. ನಮ್ಮ ಸಮಾಜದಿಂದ ಪ್ರತಿವರ್ಷ ಶ್ರೀನಿವಾಸ ಕಲ್ಯಾಣವನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ರಾಮಾಯಣ, ಮಹಾಭಾರತ ಗ್ರಂಥಗಳನ್ನು ಹೊಸ ತಲೆಮಾರಿಗೆ ಪರಿಚಯಿಸುವ ಕೆಲಸ ಆಗಬೇಕಿದೆ ಎಂದರು.
ಪಂಡಿತ್ ಶ್ರೀನಿಧಿ ಗುಡಿ ಆಚಾರ್ ಮಾತನಾಡಿ, ಭಗವಂತನ ಸಾಕ್ಷಾತ್ಕಾರ ಎನ್ನುವುದು ಸುಲಭವಲ್ಲ, ಅದು ಸಿದ್ಧಿಯಾಗಬೇಕು ಎಂದರೆ ನಾವು ಆಡಂಬರ ಹಾಗೂ ಸ್ವಾರ್ಥದಿಂದ ಹೊರಬರಬೇಕು. ಪುಣ್ಯ ಸಂಪಾದಿಸಲು ಬದ್ಧತೆ ಬೇಕು. ಭಗವಂತ ಕೊಟ್ಟಿದರಲ್ಲಿ ಯತಾನುಶಕ್ತಿ ದಾನ ಮಾಡುವ ಮನೋಪ್ರವೃತ್ತಿ ಹೊಂದಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ನಾವು ನಮ್ಮ ಕುಟುಂಬ ಎನ್ನುವ ಪರಿಧಿಯೊಳಗೆ ಬದುಕು ಸಾಗಿಸುವವರ ಸಂಖ್ಯೆ ಹೆಚ್ಚುತ್ತಿದೆ. ಸಾಗರ ಮಧ್ವ ಸಂಘ ಶ್ರೀನಿವಾಸ ಕಲ್ಯಾಣ ಕಾರ್ಯಕ್ರಮವನ್ನು ಶ್ರದ್ಧಾ-ಭಕ್ತಿಯಿಂದ ಲೋಕಕಲ್ಯಾಣಾರ್ಥಕ್ಕಾಗಿ ನಡೆಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಶುಕ್ರವಾರ ಶ್ರೀನಿವಾಸ ದೇವರನ್ನು ಮಂಗಳ ವಾದ್ಯಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯೊಂದಿಗೆ ಕರೆ ತರಲಾಯಿತು. ಆನಂದಪುರದ ರಿದಂ ನೃತ್ಯ ತಂಡ ಭಕ್ತಿ ಸಂಗೀತಕ್ಕೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆಯಿತು.
ಆನಂದಪುರದ ಪ್ರಾಣೇಶಾಚಾರ್ ಹಾಗೂ ನಾಗಭೂಷಣ್ ದಂಪತಿಗಳು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಸಾಗರ ಮಧ್ವ ಸಂಘದ ಪ್ರಧಾನ ಕಾರ್ಯದರ್ಶಿ ಬದ್ರಿನಾಥ್, ವೈ.ಮೋಹನ್, ಶ್ರೀಶಾಚಾರ್, ವಿದ್ವಾನ್ ಪಿ.ಎಲ್.ಗಜಾನನ ಭಟ್, ಆನಂದ ಕಲ್ಯಾಣಿ, ಮುರಳೀಧರ ಹತ್ವಾರ್, ಶಾಂತಮೂರ್ತಿ, ಮಂಜುಳಾ, ಮೋಹನ್ ಅಳಗಂ ಭಟ್, ಸಹನಾ ಕಲ್ಯಾಣಿ, ವಾದಿರಾಜ್, ರಾಘವೇಂದ್ರ ಕಲ್ಲಾಪುರ್, ಕೆ.ಎಚ್.ಸುಧೀಂದ್ರ, ವೈದೇಹಿ, ವೆಂಕಟೇಶ ಕಟ್ಟಿ, ಕೆಳದಿ ವಾಸು, ಭಾಗ್ಯಲಕ್ಷ್ಮೀ, ರೇವತಿ ಹತ್ವಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net