ಪುರಂದರದಾಸರು, ತ್ಯಾಗರಾಜರ ಆರಾಧನಾ ಮಹೋತ್ಸವ

10kls1
ಶ್ರೀಕ್ಷೇತ್ರ ಹೊರನಾಡಿನಲ್ಲಿ ಆದಿಗುರು ಶ್ರೀ ಪುರಂದರದಾಸ ಹಾಗೂ ಸದ್ಗುರು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ ನಡೆಯಿತು.
Published on

ಕಳಸ: ದೈವಾನುಗ್ರಹ, ದೇವತಾನುಗ್ರಹ ಬೇಕಾದರೆ ಯಾವುದಾದರೊಂದು ಉಪಾಸನೆ ನಮ್ಮ ಜೀವನದಲ್ಲಿ ಇರಬೇಕು. ಆ ಉಪಾಸನೆ ಪ್ರತಿಯೊಬ್ಬ ಜೀವಿಯ ವಿಕಾಸಕ್ಕೆ ಕಾರಣವಾಗಬೇಕು ಎಂದು ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಜಿ.ಭೀಮೇಶ್ವರ ಜೋಷಿ ಹೇಳಿದರು.

ಶ್ರೀ ಕ್ಷೇತ್ರ ಹೊರನಾಡಿನಲ್ಲಿ ಭಾನುವಾರ ಏರ್ಪಡಿಸಿದ್ದ 15ನೇ ವರ್ಷದ ಆದಿಗುರು ಶ್ರೀ ಪುರಂದರದಾಸ ಹಾಗೂ ಸದ್ಗುರು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶ್ರೀ ರಾಮನ ಅನುಗ್ರಹಕ್ಕೆ ತ್ಯಾಗರಾಜರು ಪಾತ್ರರಾಗಿದ್ದರು. ತ್ಯಾಗರಾಜರು ಶ್ರೀರಾಮನನ್ನು ದರ್ಶಿಸಿ ತನ್ನನ್ನು ತಾನು ಸಮರ್ಪಣೆ ಮತ್ತು ತ್ಯಾಗವನ್ನು ಮಾಡಿಕೊಂಡ ಪರಿಣಾಮ ತ್ಯಾಗರಾಜರಿಗೆ ಶ್ರೀ ರಾಮನ ದರ್ಶನವಾಯಿತು. ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾದ ದಾಸ ಶ್ರೇಷ್ಠ ಪುರಂದರದಾಸರು, ಸಂಗೀತಕ್ಕೆ ತಮ್ಮನ್ನು ತಾವು ಸಂಪೂರ್ಣ ಸಮರ್ಪಣೆ ಮಾಡಿಕೊಂಡು ಸಂಗೀತದ ಪಿತಾಮಹ ಎಂದು ಬಿರುದಾಂಕಿತರಾದರು ಎಂದರು.
ಈ ಆರಾಧನೆ ಅವರಿಗೆ ಸಲ್ಲಿಸುವ ಕೃತಜ್ಞತೆ ಅಲ್ಲ. ಇದು ವೇದೋಪಾಸನೆ, ದೇವೋಪಾಸನೆ, ನಾದೋಪಾಸನೆ, ಸಂಸ್ಕಾರ-ಸಂಸ್ಕೃತಿಯ ಉಪಾಸನೆ ಆಗಿದೆ. ಇದು ಭಾರತದ ಭವ್ಯ ಪರಂಪರೆಯಲ್ಲಿ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ವಿದ್ವಾನ್ ತಿರುಮಲೆ ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿದರು. ಸಂಗೀತ ಕ್ಷೇತ್ರದಲ್ಲಿ ಸಾಧನೆ ಗಮನಿಸಿ ಉಡುಪಿಯ ಗೋಪಾಲಕೃಷ್ಣನ್ ಚೆಣೈ(ಹಾಡುಗಾರಿಕೆ), ರಘುರಾಮ್ ಹೊಸಳ್ಳಿ(ವಯಲಿನ್), ಕಾಂಚನ ಈಶ್ವರ ಭಟ್ ಬಜತ್ತೂರು(ಮೃದಂಗ) ಅವರನ್ನು ಶ್ರೀಕ್ಷೇತ್ರದಿಂದ ಸನ್ಮಾನಿಸಲಾಯಿತು.
ಬೆಳಗ್ಗೆಯಿಂದ ಸಂಜೆಯವರೆಗೆ ನಡೆದ ಕಾರ್ಯಕ್ರಮದಲ್ಲಿ ಪುಂಡರೀಕ ಭಾಗವತ ಹಳುವಳ್ಳಿ ಅವರ ಹಾಡುಗಾರಿಕೆ, ಸ್ಥಳೀಯ ಕಲಾವಿದರಿಂದ ಸಂಗೀತ ಕಾರ್ಯಕ್ರಮ, ವಿದ್ವಾನ್ ಶ್ರೀವತ್ಸ ಚನ್ನಗಿರಿ ಅವರಿಂದ ಕೊಳಲು ವಾದನ, ಮಂಗಳೂರಿನ ವಿಶ್ವಾಸ್ ಕೃಷ್ಣ, ಶ್ರೇಷ್ಠಲಕ್ಷ್ಮೀ ಅವರಿಂದ ದ್ವಂದ್ವ ವಯಲಿನ್ ವಾದನ, ಉಡುಪಿಯ ಗೋಪಾಲಕೃಷ್ಣನ್ ಚೆನ್ನೈ ಹಾಗೂ ತಿರುಮಲೆ ಶ್ರೀನಿವಾಸ್ ಬೆಂಗಳೂರು ಅವರಿಂದ ಹಾಡುಗಾರಿಕೆ, ರಘರಾಮ್ ಹೊಸಳ್ಳಿ ವಯಲಿನ್, ಕಾಂಚನ ಈಶ್ವರ ಭಟ್ ಬಜತ್ತೂರು ಮೃದಂಗ ಸಾಥ್ ನೀಡಿದರು.
ಪುರಂದರದಾಸರ ಕೀರ್ತನೆಯ ಭಜನಾ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ನೀಡಲಾಯಿತು. ದೇವಸ್ಥಾನದ ಟ್ರಸ್ಟಿಗಳಾದ ರಾಜಲಕ್ಷ್ಮೀ ಜೋಷಿ, ರಾಜಗೋಪಾಲ ಜೋಷಿ, ಗಿರಿಜಾ ಶಂಕರ್ ಜೋಷಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net