ಕಂತೆ ಮಹದೇಶ್ವರಸ್ವಾಮಿ ಬೆಟ್ಟದಲ್ಲಿ ಆರಾಧನಾ ಮಹೋತ್ಸವ

Kappasoge
Published on

ಕಪ್ಪಸೋಗೆ: ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಹೋಬಳಿ ಮಂಗಳೂರು ಸಮೀಪದ ಶ್ರೀ ಕಂತೆ ಮಹದೇಶ್ವರ ಬೆಟ್ಟದಲ್ಲಿ ಲಿಂಗೈಕ ನಿರಂಜನ ಶ್ರೀ ಚಿದಾನಂದ ನಂಜುಂಡ ಶಿವಯೋಗಿಂದ್ರ ಶಿವಯೋಗಿ ಅವರ ಗಣಾರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆಯಿಂದಲೇ ಶ್ರೀ ಚಿದಾನಂದ ನಂಜುಂಡ ಶಿವಯೋಗಿಂದ್ರ ಶಿವಯೋಗಿಗಳು ಹಾಗೂ ಶ್ರೀ ಮಹದೇಶ್ವರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ ನೆರವೇರಿಸಿ, ವಿವಿಧ ಹೂಗಳಿಂದ ಅಲಂಕರಿಸಿ, ಮಹಾ ಮಂಗಳಾರತಿ ಸೇರಿದಂತೆ ಶ್ರೀ ಮಹಾಂತ ದೇಶಿ ಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಧಾರ್ಮಿಕ ಕೈಂಕರ್ಯ ನೆರವೇರಿತು. ನಂತರ ಶ್ರೀ ಮಹದೇಶ್ವರ ಹಾಗೂ ನಂಜುಂಡ ಶಿವಯೋಗಿ ಮೂರ್ತಿಗಳನ್ನು ವಿವಿಧ ಹೂಗಳಿಂದ ಅಲಂಕರಿಸಿ, ಹುಲಿವಾಹನದ ಪಲ್ಲಕ್ಕಿಯಲ್ಲಿ ಶ್ರೀ ಮಹದೇಶ್ವರ ಹಾಗೂ ನಂಜುಂಡ ಶಿವಯೋಗಿಗಳ ಉತ್ಸವ ಮೂರ್ತಿಗಳನ್ನು ಇಟ್ಟು ನಂದಿಧ್ವಜ, ವೀರಗಾಸೆ ಕುಣಿತ, ಕಂಸಾಳೆ, ಪೂಜಾ ಕುಣಿತ, ತಮಟೆ, ಮಂಗಳವಾದ್ಯಗಳೊಂದಿಗೆ ದೇವಸ್ಥಾನದ ಸುತ್ತ ಪ್ರದಕ್ಷಣೆ ಹಾಕಲಾಯಿತು. ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತಾದಿಗಳು ಮುಂಜಾನೆಯಿಂದ ರಾತ್ರಿವರೆಗೂ ಆಗಮಿಸಿ ದೇವರ ಪ್ರದರ್ಶನ ಪಡೆದರು.

ಆರಾಧನಾ ಮಹೋತ್ಸವಕ್ಕೆಬರುವ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಮಾಡಲಾಯಿತು. ದೇವನೂರಿನ ಗುರು ಮಲ್ಲೇಶ್ವರ ಮಹಾ ಸಂಸ್ಥಾನ ದಾಸೋಹ ಮಠಾಧ್ಯಕ್ಷ ಮಹಾಂತ ಸ್ವಾಮೀಜಿ, ಸಂಗಮ ಕ್ಷೇತ್ರದ ಕಾರ್ಯ ಸ್ವಾಮಿ ಶಿವಯೋಗಿಗಳವರ ಮಠಾದಕ್ಷ ಮಹೇಶ್ವರ ಸ್ವಾಮೀಜಿ, ಗೌಡಹಳ್ಳಿವಿರಕ್ತ ಮಠಾಧ್ಯಕ್ಷ ಮರಿ ತೋಂಟದಾರ್ಯ ಸ್ವಾಮೀಜಿ, ವಾದನಹಳ್ಳಿ ಉಕ್ಕಿನಕಂತೆ ಮಠಾಧ್ಯಕ್ಷ ಸಾಂಬ ಸದಾಶಿವ ಸ್ವಾಮೀಜಿ, ಸೂರಳ್ಳಿ ವಿರಕ್ತ ಮಠಾಧ್ಯಕ್ಷ ಕೆಂಡಗಣ್ಣ ಸ್ವಾಮೀಜಿ, ಹಂಚಿಪುರ ಪಟ್ಟದ ಮಠಾಧ್ಯಕ್ಷ ಚನ್ನಬಸವ ಸ್ವಾಮೀಜಿ, ಮೈಸೂರು ಕುದೇರುಮಠಾಧ್ಯಕ್ಷ ಇಮ್ಮಡಿ ಗುರುಲಿಂಗ ಸ್ವಾಮೀಜಿ, ಇಒ ಶೇಖರ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net