

ನಾಗಮಂಗಲ: ತಾಲೂಕಿನ ಗಡಿಭಾಗದಲ್ಲಿರುವ ಬೆಳ್ಳೂರು ಹೋಬಳಿಯ ಗೊಂದಿಹಳ್ಳಿಯ ಶ್ರೀ ಸತ್ಯ ಶನೈಶ್ಚರಸ್ವಾಮಿ ದೇವಾಲಯಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಪತ್ನಿ ಚೆನ್ನಮ್ಮ ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಾಲಯದ ಉದ್ಘಾಟನೆ ಸಂದರ್ಭ ಆಗಮಿಸದ ಕಾರಣ ಆಗಮಿಸಿದ್ದ ದೊಡ್ಡಗೌಡರು, ಶನಿದೇವರಿಗೆ ಅಭಿಷೇಕದೊಂದಿಗೆ ವಿಶೇಷ ಪೂಜೆ ಸಲ್ಲಿಸಿದರು. ಸುಮಾರು 2 ಗಂಟೆಗಳ ಕಾಲ ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯದ ಪ್ರಧಾನ ಅರ್ಚಕ ಕುಮಾರಸ್ವಾಮಿ ಪೂಜೆ ನೆರವೇರಿಸಿದರು.
ನವಗ್ರಹಗಳಿಗೆ ಪ್ರದಕ್ಷಿಣೆ ಹಾಕಿದ ಎಚ್‌ಡಿಡಿ
ಶನೈಶ್ಚರನಿಗೆ ಪೂಜೆ ಸಲ್ಲಿಸಿದ ನಂತರ ದೇವಾಲಯ ಆವರಣದಲ್ಲಿರುವ ನವಗ್ರಹಗಳಿಗೆ ಎಚ್‌ಡಿಡಿ ದಂಪತಿ ಪೂಜೆ ಸಲ್ಲಿಸಿದರು. ನವಗ್ರಹ ವಿಗ್ರಹಗಳ ಸುತ್ತ ಮೂರು ಬಾರಿ ಪ್ರದಕ್ಷಿಣೆ ಹಾಕಿದ ಬಳಿಕ ದೇವಾಲಯ ಸುತ್ತ ಪ್ರದಕ್ಷಿಣೆ ಹಾಕಿದರು. ದೇವೇಗೌಡರಿಗೆ ಗ್ರಾಮದ ಮಹಿಳೆಯರು ಪೂರ್ಣಕುಂಭ ಸ್ವಾಗತ ಕೋರಿದರು. ಬಳಿಕ ದೇವಸ್ಥಾನದ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಆಗಮನ ಕುರಿತಾಗಿ ಯಾರಿಗೂ ತಿಳಿಸದಂತೆ ಸೂಚನೆ
ಜೆಡಿಎಸ್‌ನ ರಾಷ್ಟ್ರೀಯ ವರಿಷ್ಠರು ದೇವಾಲಯಕ್ಕೆ ಆಗಮಿಸಿದ್ದರೂ ಪಕ್ಷದ ಮುಖಂಡರು ಅಥವಾ ನಾಯಕರು ಆಗಮಿಸದಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಯಿತು. ಆದರೆ ದೇವೇಗೌಡರು ಪೂಜೆಯಲ್ಲಿ ಪಾಲ್ಗೊಳ್ಳುವ ವಿಚಾರವನ್ನು ಯಾರಿಗೂ ತಿಳಿಸದಂತೆ ಟ್ರಸ್ಟ್‌ನವರಿಗೆ ಸೂಚಿಸಿದ್ದರು ಎಂದು ಗ್ರಾಮಸ್ಥರೊಬ್ಬರು ವಿಜಯವಾಣಿಗೆ ತಿಳಿಸಿದರು.
ಕಾಳಿಂಗನಹಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಸುರೇಶ್, ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಕುಮಾರಸ್ವಾಮಿ, ಉಪಾಧ್ಯಕ್ಷ ನರಸಿಂಹಮೂರ್ತಿ, ಸ್ಥಳೀಯರಾದ ದಿಲೀಪ್, ರಾಮು ಇದ್ದರು.