ಮನೆಯಲ್ಲೇ ಅಯ್ಯಪ್ಪನ ಆರಾಧಿಸಿ ; ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅಧ್ಯಕ್ಷ ಶೇಖರ್ ಸಲಹೆ

04Tmk_Shabari_Malai
Published on

ತುಮಕೂರು: ಕರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಅಯ್ಯಪ್ಪ ಯಾತ್ರೆ ಭುವನಂ ಸನ್ನಿಧಾನಂ ಎಂಬಂತೆ ಆಗಿದ್ದು,

ಮನೆಯಲ್ಲಿಯೇ ಇದ್ದುಕೊಂಡು ಅಯ್ಯಪ್ಪನ ಸ್ಮರಣೆ ಮಾಡುವಂತೆ ಭಕ್ತರಿಗೆ ಮನವಿ ಮಾಡಲಾಗಿದೆ ಎಂದು ಶಬರಿ ಮಲೈ ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಹೇಳಿದರು.

ಚಿಕ್ಕತೊಟ್ಲುಕೆರೆಯ ಆಟವಿ ಶಿವಯೋಗಿ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಅಯ್ಯಪ್ಪ ಸೇವಾ ಸಮಾಜಂನ ರಾಜ್ಯಮಟ್ಟದ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಕರೊನಾ ಹಿನ್ನೆಲೆಯಲ್ಲಿ 8 ತಿಂಗಳಿನಿಂದ ಆನ್‌ಲೈನ್ ಸಭೆ ನಡೆಸಿ, ಸಂಘದ ಚಟುವಟಿಕೆಗಳನ್ನು ನಡೆಸಲಾಗುತ್ತಿತ್ತು. ಈಗ ಸರ್ಕಾರದ ನಿಯಮದಂತೆ ಪರಸ್ಪರ ಅಂತರ ಕಾಯ್ದುಕೊಂಡು ಸಭೆ ನಡೆಸಲಾಗುತ್ತಿದೆ ಎಂದರು.

ಶಬರಿಮಲೈಗೆ ಕೇರಳಿಗರಿಗಿಂದ ದಕ್ಷಿಣ ಭಾರತದ ಇತರ ರಾಜ್ಯಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಯಾತ್ರೆ ಕೈಗೊಳ್ಳುತ್ತಾರೆ. ಸಾವಿರ ಸಂಖ್ಯೆಯಲ್ಲಿದ್ದ ಯಾತ್ರಾತ್ರಿಗಳ ಸಂಖ್ಯೆ ಈಗ ಕೋಟಿಗೆ ತಲುಪಿದೆ. ಆದರೆ, 10 ವರ್ಷಗಳಿಗೆ ಹೊಲಿಕೆ ಮಾಡಿದರೆ ಯಾತ್ರಾತ್ರಿಗಳಿಗೆ ಅಂತಹ ವ್ಯವಸ್ಥೆ ಇರಲಿಲ್ಲ. ಶಬರಿ ಮಲೈಗೆ ಬರುವ ಭಕ್ತರಿಗೆ ಮೊದಲು ಅನ್ನದಾನ ಏರ್ಪಡಿಸುವ ಮೂಲಕ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಯಿತು ಎಂದು ತಿಳಿಸಿದರು.

ಅಯ್ಯಪ್ಪ ಸೇವಾ ಸಮಾಜಂನ ರಾಜ್ಯಾಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಶೇಖರ್ ರಾಷ್ಟ್ರೀಯ ಅಧ್ಯಕ್ಷರಾದ ನಂತರ ಮತ್ತಷ್ಟು ವ್ಯವಸ್ಥಿತವಾಗಿ ಯಾತ್ರಾತ್ರಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. 18 ಜಿಲ್ಲೆಯ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದು, ಉಳಿದವರು ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

ಅಟವಿ ಶಿವಯೋಗಿ ಸುಕ್ಷೇತ್ರದ ಶ್ರೀ ಅಟವಿ ಶಿವಲಿಂಗ ಸ್ವಾಮೀಜಿ ಆಶೀರ್ವಚನ ನೀಡಿದರು. ಅಯ್ಯಪ್ಪ ಸೇವಾ ಸಮಾಜಂ ಪ್ರಧಾನ ಕಾರ್ಯದರ್ಶಿ ಕೃಷ್ಣಯ್ಯ, ಜಿಲ್ಲಾ ಕಾರ್ಯದರ್ಶಿ ಸತ್ಯನಾರಾಯಣ್, ರಾಜ್ಯ ಖಜಾಂಚಿ ನರಸಿಂಹಸ್ವಾಮಿ, ಜಿಲ್ಲಾ ಅಧ್ಯಕ್ಷ ನಾಗೇಂದ್ರಣ್ಣ, ರಾಜ್ಯ ಉಪಾಧ್ಯಕ್ಷ ಸಂಪತ್ ಗುರುಸ್ವಾಮಿ, ರಾಜ್ಯ ಉಪಾಧ್ಯಕ್ಷ ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.

ರಾಷ್ಟ್ರೀಯ ಭಾವೈಕ್ಯತೆಯ ಸಂಗಮ: ಶಬರಿಮಲೈಗೆ ಹರಿ, ಹರ ಇಬ್ಬರೂ ಭಕ್ತರು ಯಾತ್ರೆ ಕೈಗೊಳ್ಳುತ್ತಾರೆ. ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂಬ ಸದುದ್ದೇಶದಿಂದ ಅಯ್ಯಪ್ಪ ಸೇವಾ ಸಮಿತಿ ರಚಿಸಲಾಗಿದೆ. ರಾಜ್ಯದ 23 ಜಿಲ್ಲೆಗಳಲ್ಲಿ ಸಕ್ರಿಯವಾಗಿ ಸಂಘಟನೆ ಇದ್ದು, ದಕ್ಷಿಣಭಾರತ ಎಲ್ಲ ರಾಜ್ಯಗಳ ಭಕ್ತರು ಶಬರಿಮಲೈ ಯಾತ್ರೆ ಕೈಗೊಳ್ಳುತ್ತಿದ್ದು, ಇದು ರಾಷ್ಟ್ರೀಯ ಭಾವೈಕ್ಯತೆಯ ಸಂಗಮವೆನಿಸಿದೆ ಎಂದು ಹಿರಿಯ ಅಯ್ಯಪ್ಪ ಭಕ್ತ, ನಟ ಶಿವರಾಂ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net