

ಪಿರಿಯಾಪಟ್ಟಣ: ಹೊಸ ವರ್ಷದ ಪ್ರಯುಕ್ತ ತಾಲೂಕಿನ ವಿವಿಧ ದೇವಾಲಯದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಶಕ್ತಿ ದೇವತೆಗಳಾದ ಶ್ರೀ ಮಸಣಿಕಮ್ಮ ಮತ್ತು ಕನ್ನಂಬಾಡಿಯಮ್ಮ ದೇವಾಲಯಕ್ಕೆ ಭಕ್ತರ ದಂಡೆ ಹರಿದು ಬಂದಿತ್ತು. ಮಸಣಿಕಮ್ಮ ದೇವಾಲಯದಲ್ಲಿ ಅರ್ಚಕ ಹರೀಶ್ ನೇತೃತ್ವದಲ್ಲಿ ಮುಂಜಾನೆಯಿಂದಲೇ ಅಮ್ಮನವರಿಗೆ ಹಲವು ಬಗೆಯ ಅಭಿಷೇಕ ನೆರವೇರಿತು. ಕುಂಕುಮಾರ್ಚನೆ ಬಳಿಕ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಭಕ್ತರು ಬಿರು ಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಕನ್ನಂಬಾಡಿಯಮ್ಮ ದೇವಾಲಯದಲ್ಲಿ ಅರ್ಚಕ ವೇಣುಗೋಪಾಲ್ ಅವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನೆರವೇರಿತು.
ತಾಲೂಕಿನ ಬೆಕ್ಕರೆ ಗ್ರಾಮದ ಶ್ರೀ ಬಾಲಚಂದ್ರ ಬಸವೇಶ್ವರಸ್ವಾಮಿ ದೇವಾಲಯದಲ್ಲಿ ಅರ್ಚಕ ಬಸವರಾಜ್, ಪಟ್ಟಣದ ಕಾಳಿಕಾಂಬ ದೇವಾಲಯದಲ್ಲಿ ಅರ್ಚಕ ಚಂದ್ರಶೇಖರ್, ನವಗ್ರಹ ದೇವಾಲಯದಲ್ಲಿ ಅರ್ಚಕ ಪರಶಿವಮೂರ್ತಿ, ಲಕ್ಷ್ಮಿದೇವಿ ದೇವಾಲಯದಲ್ಲಿ ಅರ್ಚಕ ಗೋಪಾಲ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ನಡೆಯಿತು.
ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೇಂಟ್ ಮೇರಿಸ್ ಚರ್ಚ್‌ನಲ್ಲಿ ಹೊಸ ವರ್ಷದ ಅಂಗವಾಗಿ ಮಂಗಳವಾರ ರಾತ್ರಿ ಮತ್ತು ಬುಧವಾರ ಬೆಳಗ್ಗೆ ಕ್ರಿಶ್ಚಿಯನ್ ಸಮುದಾಯದವರು ವಿಶೇಷ ಪ್ರಾರ್ಥನೆ ಸಲ್ಲಿಸಿ ಮತ್ತು ಯೇಸುವಿನ ಭಜನೆ ಮಾಡಿದರು. ಚರ್ಚ್ ಉಸ್ತುವಾರಿ ಫಾ.ಜಾನ್ ಪೌಲ್, ಚರ್ಚ್‌ನ ಪಾಲನಾ ಸಮಿತಿ ಪದಾಧಿಕಾರಿಗಳು ಇದ್ದರು.