

ಚಳ್ಳಕೆರೆ: ತಾಲೂಕಿನಲ್ಲಿ ಮಳೆ ಕೊರತೆಯಿಂದ ಶೇಂಗಾ ಬೆಳೆ ಸಂಪೂರ್ಣ ಒಣಗುತ್ತಿದ್ದು, ಆತಂಕಗೊಂಡಿರುವ ಕೃಷಿಕರು ದೇವರ ಮೊರೆ ಹೋಗಿದ್ದಾರೆ.
ವರುಣನ ಕೃಪೆಗಾಗಿ ಗೋಪನಹಳ್ಳಿಯಲ್ಲಿ ಬುಧವಾರ ಮಹಿಳೆಯರು ವಿಶೇಷ ಪೂಜೆ ನೆರವೇರಿಸಿದರು.
ಶೇಂಗಾ ಬಿತ್ತನೆ ಮಾಡಿದಾಗಿನಿಂದ ಸಕಾಲಕ್ಕೆ ಮುಂಗಾರು ಮಳೆ ಬಂದಿಲ್ಲ. ಎರಡು ತಿಂಗಳ ಶೇಂಗಾ ಬೆಳೆ ಒಣಗುತ್ತಿದೆ. ಮಳೆಯಾಶ್ರಿತ ಶೇಂಗಾ ಬೆಳೆಯನ್ನು ನಂಬಿಕೊಂಡಿರುವ ರೈತಾಪಿ ವರ್ಗಕ್ಕೆ ಸಂಕಷ್ಟ ಎದುರಾಗಿದೆ.
ಇದರಿಂದ ಪಾರು ಮಾಡಲು ಬೇಗನೆ ಬಾರೊ ಮಳೆರಾಯ ಎಂದು ಪೂಜೆ ನಡೆಸಿರುವ ಗೋಪನಹಳ್ಳಿ ಗ್ರಾಮದ ಮಹಿಳೆಯರು, ನೀರು ತುಂಬಿದ ತಂಬಿಗೆ ಒಳಗೆ ಕಪ್ಪೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗ್ರಾಮದ ಬುಡ್ಡೆಕಲ್ಲಿಗೆ ಐದು ತರದ ಹೂವು ಇರಿಸಿ ಅರಿಶಿನ-ಕುಂಕುಮ ಹಚ್ಚಿ 5 ಕೊಡ ನೀರು ಹಾಕಿ ಪೂಜೆ ಸಲ್ಲಿಸಿದರು.