ಬಿಗಡಾಯಿಸುತ್ತಿದೆ ತ್ಯಾಜ್ಯ ಸಮಸ್ಯೆ : ಎಸ್‌ಎಲ್‌ಆರ್‌ಎಂ ಘಟಕ ರೋಗ ಉತ್ಪತ್ತಿ ತಾಣ ; ಸಾಂಕ್ರಾಮಿಕ ಕಾಯಿಲೆ ಭೀತಿ

waste
ಗಂಗೊಳ್ಳಿ ಮೀನುಗಾರಿಕಾ ಬಂದರು ಸಮೀಪ ನಿರ್ಮಾಣಗೊಂಡಿರುವ ಎಸ್‌ಎಲ್‌ಆರ್‌ಎಂ ಘಟಕ ವಠಾರದಲ್ಲಿ ತುಂಬಿ ತುಳುಕುತ್ತಿರುವ ತ್ಯಾಜ್ಯದ ರಾಶಿ.
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಗಂಗೊಳ್ಳಿ ಗ್ರಾಪಂ ಮೀನುಗಾರಿಕಾ ಬಂದರು ಪ್ರದೇಶ ಸಮೀಪದಲ್ಲಿರುವ ಘನ ಮತ್ತು ದ್ರವ ಸಂಪನ್ಮೂಲ ಘಟಕದ ಸುತ್ತ ತ್ಯಾಜ್ಯ ತುಂಬಿ ತುಳುಕುತ್ತಿದ್ದು, ಎಸ್‌ಎಲ್‌ಆರ್‌ಎಂ ಘಟಕ ಸಾಂಕ್ರಾಮಿಕ ರೋಗ ಉತ್ಪನ್ನ ತಾಣವಾಗಿ ಮಾರ್ಪಡುತ್ತಿದೆ. ಗಂಗೊಳ್ಳಿ ಗ್ರಾಪಂ ಘಟಕದ ಸುತ್ತಲೂ ಮಿನಿ ಬೀಡಿನಗುಡ್ಡೆಯಂತೆ ಕಾಣಿಸುತ್ತಿದ್ದು, ತ್ಯಾಜ್ಯ ಮಳೆಯ ನೀರಿನಲ್ಲಿ ಕೊಳೆತು ನಾರುತ್ತಿದೆ.

ಪ್ರಾಣಿಗಳಿಗೆ ಅಪಾಯ

ದನ, ನಾಯಿ ಪ್ರಾಣಿ ಪಕ್ಷಿಗಳು ತ್ಯಾಜ್ಯ ತಿನ್ನುತ್ತಿದ್ದು ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಇದಕ್ಕೂ ಮಿಗಿಲಾಗಿ ಅಲ್ಲಲ್ಲಿ ಬಿದ್ದಿರುವ ತ್ಯಾಜ್ಯ ಕೊಳೆತು ಸಾಂಕ್ರಾಮಿಕ ರೋಗ ಉತ್ಪತ್ತಿ ಹಾಗೂ ರೋಗ ಹರಡುವ ಸಾಧ್ಯತೆ ಇದೆ. ಗಂಗೊಳ್ಳಿಯಲ್ಲಿ ತ್ಯಾಜ್ಯ ಸಂಗ್ರಹ ಕಾರ್ಯ ನಡೆಯುತ್ತಿದ್ದರೂ ಘಟಕದಲ್ಲಿ ಸಾಕಷ್ಟು ಸ್ಥಳ ಇಲ್ಲದಿರುವುದರಿಂದ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ.

ತ್ಯಾಜ್ಯ ಕೊಂಪೆ

ಕಳೆದ ಸುಮಾರು ಎರಡು ವರ್ಷಗಳಿಂದ ಇಲ್ಲಿನ ಘನ ಮತ್ತು ದ್ರವ ಸಂಪನ್ಮೂಲ ಘಟಕದ ಕಾರ್ಯನಿರ್ವಹಣೆ ಖಾಸಗಿ ಎನ್‌ಜಿಒ ಸಂಸ್ಥೆ ಟಿಪ್ಸ್‌ಗೆ ವಹಿಸಿಕೊಡಲಾಗಿದೆ. ಪ್ರತಿನಿತ್ಯ ಸುಮಾರು 1300ಕ್ಕೂ ಮಿಕ್ಕಿ ಮನೆ ಮತ್ತು ವಾಣಿಜ್ಯ ಮಳಿಗೆಗಳಿಂದ ತ್ಯಾಜ್ಯ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಆದರೆ ತ್ಯಾಜ್ಯ ವಿಲೇವಾರಿ ಸಮಸ್ಯೆ ಮುಂದುವರಿದಿದ್ದು, ಘನ ಮತ್ತು ದ್ರವ ಸಂಪನ್ಮೂಲ ಘಟಕ ತ್ಯಾಜ್ಯದ ಕೊಂಪೆಯಾಗಿ ಮಾರ್ಪಟ್ಟಿದೆ.

ವಿಲೇವಾರಿ ಸಮಸ್ಯೆ

ಕಾಂಪೋಸ್ಟ್ ಗುಂಡಿಯಲ್ಲಿ ಗೊಬ್ಬರ ತುಂಬಿದ್ದರೂ ಅದನ್ನು ತೆಗೆಯುವ ಕೆಲಸ ನಡೆದಿಲ್ಲ. ತ್ಯಾಜ್ಯ ಸಂಗ್ರಹಣೆ ಸಂದರ್ಭ ಜನರು ಹೆಚ್ಚಾಗಿ ಪ್ಯಾಂಪರ್ಸ್‌ ತ್ಯಾಜ್ಯ ನೀಡುತ್ತಿದ್ದು ಇದನ್ನು ವಿಲೇವಾರಿ ಮಾಡಲು ಸಾಧ್ಯವಾಗದೆ ಸಮಸ್ಯೆ ಎದುರಿಸುತ್ತಿದೆ. ಘಟಕದ ಎದುರಿನಲ್ಲೇ ವಿಲೇವಾರಿ ಮಾಡಲು ಸಾಧ್ಯವಾಗದ ಪ್ಯಾಂಪರ್ಸ್‌ ಮತ್ತಿತರ ತ್ಯಾಜ್ಯ ರಾಶಿ ಹಾಕಲಾಗಿದೆ.

ಡೆಂಘೆ, ಮಲೇರಿಯಾ ವರದಿ

ಎಸ್‌ಎಲ್‌ಆರ್‌ಎಂ ಘಟಕದ ಸುತ್ತಲೂ ಬಿದ್ದಿರುವ ತ್ಯಾಜ್ಯಗಳು ಗ್ರಾಮಸ್ಥರ ಕಣ್ಣು ಕುಕ್ಕಿಸುವಂತೆ ಮಾಡುತ್ತಿದೆ. ಕಳೆದ ಒಂದು ತಿಂಗಳ ಹಿಂದೆ ಸುಮಾರು 20ಕ್ಕೂ ಮಿಕ್ಕಿ ಮಾರಕ ಡೆಂಘೆ ಪ್ರಕರಣ ಗಂಗೊಳ್ಳಿಯಲ್ಲಿ ವರದಿಯಾಗಿದ್ದು, ಮಲೇರಿಯಾ ಫೈಲೇರಿಯಾ ಪ್ರಕರಣ ಕೂಡ ವರದಿಯಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿಗಳು ಈಗಾಗಲೇ ನೋಟಿಸ್ ನೀಡಿ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದ್ದು, ಸ್ಥಳೀಯಾಡಳಿತ ಕೂಡ ಘಟಕದ ಸುತ್ತಲೂ ಸ್ವಚ್ಛತೆ ಕಾಪಾಡುವಂತೆ ನಿರ್ದೇಶನ ನೀಡಿದೆ. ಆದರೆ ಎಸ್‌ಎಲ್‌ಆರ್‌ಎಂ ಘಟಕದ ಸುತ್ತಲೂ ತುಂಬಿ ತುಳುಕುತ್ತಿರುವ ತ್ಯಾಜ್ಯ ಸ್ಥಳೀಯಾಡಳಿತದ ತಲೆಬಿಸಿ ಹೆಚ್ಚಿಸಿದೆ.

ಗಂಗೊಳ್ಳಿ ಗ್ರಾಪಂ ಘನ ಮತ್ತು ದ್ರವ ಸಂಪನ್ಮೂಲ ಘಟಕಕ್ಕೆ ಭೇಟಿ ನೀಡಿ ಸ್ವಚ್ಛತೆ ಕಾಪಾಡುವಂತೆ ಹಾಗೂ ತ್ಯಾಜ್ಯ ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ನೋಟೀಸ್ ನೀಡಲಾಗಿದೆ ಮತ್ತು ಸ್ಥಳೀಯಾಡಳಿತದ ಗಮನಕ್ಕೂ ತರಲಾಗಿದೆ. ಆದರೆ ಘಟಕದ ಸುತ್ತಲೂ ಸ್ವಚ್ಛತೆ ನಡೆಸದಿರುವುದು ಹಾಗೂ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮಾಡದಿರುವ ಬಗ್ಗೆ ಮತ್ತೊಮ್ಮೆ ಗ್ರಾಪಂ ಗಮನಕ್ಕೆ ತರಲಾಗುವುದು.-ಡಾ.ಅಮಿತಾ, ವೈದ್ಯಾಧಿಕಾರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಗಂಗೊಳ್ಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net