ಸಾಂಕ್ರಾಮಿಕ ರೋಗ ಉಲ್ಭಣ ಆತಂಕ!

health
Health awareness
Published on

ಜಿಲ್ಲಾ ಆರೋಗ್ಯ ಇಲಾಖೆ ನಿಗಾ

ಜಿಲ್ಲೆಯಲ್ಲಿ ಡೆಂಘೆ ನಿಯಂತ್ರಣ

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಹವಾಮಾನ ವೈಪರಿತ್ಯದಿಂದ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುವ ಆತಂಕ ಎದುರಾಗಿದ್ದು, ನಿಯಂತ್ರಣಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಿದೆ.

ಸಾಮಾನ್ಯವಾಗಿ ಮಳೆಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ, ಚಿಕೂನ್‌ಗುನ್ಯಾ, ಡೆಂಘೆಯಂತ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಈ ಹಿನ್ನೆಲೆಯಲ್ಲಿ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ಔಷಧಗಳ ದಾಸ್ತಾನು ಜತೆಗೆ ಶೀಘ್ರ ಚಿಕಿತ್ಸೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುನೀಲ್‌ಕುಮಾರ್ ಸೂಚಿಸಿದ್ದಾರೆ. ಕಳೆದ ಎರಡು ದಿನದ ಹಿಂದೆ ತಾಲೂಕು ಆರೋಗ್ಯಾಧಿಕಾರಿಗಳ ಸಭೆ ನಡೆಸಿದ್ದು, ಸಾಂಕ್ರಾಮಿಕ ರೋಗ ತಡೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾರ್ಗಸೂಚಿಗಳನ್ನು ತಿಳಿಸಿದ್ದಾರೆ.

ಮಳೆ ನಿಂತ ಮೇಲೆ ಕಾಯಿಲೆ: ಸಾಮಾನ್ಯವಾಗಿ ಜೋರು ಮಳೆ ಸುರಿಯುವ ಸಮಯದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವುದಿಲ್ಲ, ಮಳೆ ನಿಂತು ಎರಡ್ಮೂರು ದಿನದ ಬಳಿಕ ಬಿಸಿಲಿನ ವೇಳೆ ವೈರಸ್‌ಗಳು ಸಕ್ರಿಯವಾಗುತ್ತವೆ ಎಂಬ ಕಾರಣಕ್ಕೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಆರೋಗ್ಯಾಧಿಕಾರಿಗಳಿಗೆ ಜಿಲ್ಲಾಡಳಿತ ಸೂಚನೆ ನೀಡಿದೆ.

ಕುಡಿವ ನೀರಿನ ಬಗ್ಗೆ ಎಚ್ಚರ:

ಗಾಳಿ ಜತೆಗೆ ಹೆಚ್ಚಿನ ಪ್ರಮಾಣದಲ್ಲಿ ಕುಡಿವ ನೀರಿನ ಮೂಲಕ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ಸಾರ್ವಜನಿಕರು ಕುಡಿವ ನೀರಿನ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ, ಶುದ್ಧ ಕುಡಿವ ನೀರಿನ ಘಟಕಗಳ ಮೂಲಕ ನೀರು ಪಡೆಯಬೇಕು ಸಾಧ್ಯವಾದರೆ ಕುದಿಸಿ ಆರಿಸಿದ ನೀರಿನ ಸೇವನೆಯಿಂದ ಸಾಂಕ್ರಾಮಿಕ ರೋಗಗಳಿಂದ ರಕ್ಷಣೆ ಪಡೆಯಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶುದ್ಧ ಕುಡಿವ ನೀರಿನ ಘಟಕಗಳಲ್ಲಿನ ನೀರಿನ ಗುಣಮಟ್ಟ ತಪಾಸಣೆಯೂ ಚುರುಕುಗೊಳಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಡೆಂಘೆ ನಿಯಂತ್ರಣ: ಮಳೆ ಸಂದರ್ಭದಲ್ಲಿ ಡೆಂಘೆ ಜ್ವರ ಪ್ರಕರಣಗಳು ಏರಿಕೆಯಾಗುವ ಸಾಧ್ಯತೆಯಿಂದಾಗಿ ಈಡಿಸ್ ಲಾರ್ವಾ ಉತ್ಪತ್ತಿ ತಾಣ ನಾಶ ಚಟುವಟಿಕೆಗೆ ಮುಂದುವರೆಸಲಾಗಿದೆ.

ಪ್ರತಿ ಗುರುವಾರ ಲಸಿಕಾ ದಿನವಾಗಿರುವಂತೆ ಪ್ರತಿ ಶುಕ್ರವಾರ ಈಡಿಸ್ ಸೊಳ್ಳೆ ನಿರ್ಮೂಲನಾ ದಿನವನ್ನಾಗಿ ಆಚರಿಸಲಾಗುತ್ತಿದೆ, ಪ್ರತಿ ಶುಕ್ರವಾರ ಸಾರ್ವಜನಿಕರು ತಮ್ಮ ಮನೆಗಳಲ್ಲಿ, ಸಿಬ್ಬಂದಿ ವರ್ಗದವರು ಕಚೇರಿಗಳಲ್ಲಿ, ಶಾಲಾ ಕಾಲೇಜುಗಳು ಇತ್ಯಾದಿಗಳಲ್ಲಿ ನೀರು ತುಂಬುವ ಹೆಚ್ಚು ದಿನಗಳವರೆಗೆ ಶೇಖರಣೆಯಾಗುವ ಪರಿಕರಗಳನ್ನು ಸ್ವಚ್ಛಗೊಳಿಸಬೇಕು. ಮಳೆ ನೀರು ಸಂಗ್ರಹವಾಗುವ ಘನತ್ಯಾಜ್ಯ ವಸ್ತುಗಳ ವಿಲೇವಾರಿ ಮಾಡುವುದರ ಮೂಲಕ ಡೆಂಘೆ ಜ್ವರ ನಿಯಂತ್ರಣ ಕ್ರಮದಲ್ಲಿ ಅತಿ ಮುಖ್ಯವಾದ ಈಡಿಸ್ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಾಶ ಮಾಡುವುದರಿಂದ ಡೆಂಘೆ ನಿಯಂತ್ರಣ ಮಾಡುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

325 ಪರೀಕ್ಷೆ: ಜನವರಿಯಿಂದ ಇದುವರೆ ಗ್ರಾಮಾಂತರ ಜಿಲ್ಲೆಯ ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ ದೇವನಹಳ್ಳಿ ವ್ಯಾಪ್ತಿಯಲ್ಲಿ 467 ಶಂಕಿತ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ 325 ಮಂದಿ ತಪಾಸಣೆ ನಡೆಸಿದ್ದು, 15 ಮಂದಿಯಲ್ಲಿ ಡೆಂಘೆ ದೃಢಪಟ್ಟಿದೆ. ಇವರೆಲ್ಲರಿಗೂ ಸಕಾಲದಲ್ಲಿ ಚಿಕಿತ್ಸೆ ದೊರಕಿಸಿಕೊಟ್ಟಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಜಿಲ್ಲಾ ಆರೋಗ್ಯ ಇಲಾಖೆ ತಿಳಿಸಿದೆ.

ಮಾರಣಾಂತಿಕವಾಗಿರುವ ಡೆಂಘೆ ನಿರ್ಮೂಲನೆಗೆ ಸೊಳ್ಳೆಗಳ ನಿಯಂತ್ರಣ ಅವಶ್ಯಕ, ಗ್ರಾಮಾಂತರ ಜಿಲ್ಲೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಡೆಂಘೆ ಸೋಂಕು ನಿಯಂತ್ರಣದಲ್ಲಿದೆ ಆದರೂ ಮುಂಜಾಗ್ರತಾ ಕ್ರಮವಾಗಿ ಎಲ್ಲ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡೆಂಘೆ ತಪಾಸಣೆ ಹಾಗೂ ತುರ್ತು ಚಿಕಿತ್ಸೆಗೆ ಕ್ರಮಕೈಗೊಳ್ಳಲಾಗಿದೆ. ಸಾರ್ವಜನಿಕರು ಜ್ವರ ಮತ್ತಿತರ ಡೆಂಘೆ ಲಕ್ಷಣ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಬೇಕು.

ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ

ಪ್ರಸ್ತುತ ಮಳೆಸುರಿಯುತ್ತಿದ್ದು, ಮಳೆ ನಿಂತ ಮೇಲೆ ಎರಡ್ಮೂರು ದಿನಗಳ ನಂತರದಲ್ಲಿ ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ, ಈ ಹಿನ್ನೆಲೆಯಲ್ಲಿ ಈಗಾಗಲೇ ಎಲ್ಲ ತಾಲೂಕು ಆರೋಗ್ಯಾಧಿಕಾರಿಗಳ ಸಭೆ ನಡೆಸಿದ್ದು, ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ ಡೆಂಘೆ ಪ್ರಕರಣಗಳು ನಿಯಂತ್ರಣದಲ್ಲಿದೆ. ಯಾವುದೇ ರೋಗಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿಯಾಗಬೇಕು.

ಡಾ.ಸುನೀಲ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net