

ನರಗುಂದ: ಕಳೆದ ತಿಂಗಳಿನಲ್ಲಿ ತಾಲೂಕಿನ ಮಲಪ್ರಭೆ ತಟದ ಭಾಗದ ಗ್ರಾಮಸ್ಥರಿಗೆ ತೊಂದರೆ ನೀಡಿದ ಮಲಪ್ರಭೆ ನದಿ ನೀರಿನ ಪ್ರವಾಹ ಮತ್ತೆ ಅದೇ ಸ್ಥಿತಿಯಲ್ಲಿ ಮುಂದುವರೆಯುವ ಸಾಧ್ಯತೆ ಕಂಡು ಬರುತ್ತಿದೆ.
ಮಲಪ್ರಭೆ ಮೇಲ್ಭಾಗದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿರುವುದರಿಂದ ಮಲಪ್ರಭೆ ಒಳ ಹರಿವು 11 ಸಾವಿರ ಕ್ಯೂಸೆಕ್‌ಗಿತಂಲೂ ಹೆಚ್ಚು ಸಂಗ್ರಹಗೊಳ್ಳುತ್ತಿದೆ. ಹೀಗಾಗಿ, ಮಲಪ್ರಭೆಯಿಂದ ಹೆಚ್ಚುವರಿ ಅಂದಾಜು 15 ಸಾವಿರ ಕೂಸೆಕ್ ನೀರನ್ನು ಆ. 27ರಿಂದ ಹೊರಬಿಡಲಾಗುತ್ತಿದೆ. ಪರಿಣಾಮ ತಾಲೂಕಿನ ನದಿ ತಟದ ಭಾಗದ ಜನತೆಗೆ ಸಂಕಷ್ಟ ಎದುರಾಗಿದೆ.
ತಾಲೂಕಿನ ಲಖಮಾಪುರ ಗ್ರಾಮಸ್ಥರು ನೀರಿನ ಪ್ರವಾಹದಿಂದ ತೊಂದರೆಪಡುವಂಥ ಸ್ಥಿತಿ ಆಗಾಗ ಕಂಡು ಬರುತ್ತಿದೆ. 2009 ಮತ್ತು 2012ರಲ್ಲಿ ಈ ರೀತಿ ನಾಲ್ಕಾರು ಬಾರಿ ನೀರಿನ ಪ್ರವಾಹದಿಂದ ಜನರು ಕಂಗೆಟ್ಟಿದ್ದಾರೆ. ಈಗಲೂ ಅವರು ನೀರಿನ ಪ್ರವಾಹದ ದುಗಡ ಅನುಭವಿಸುತ್ತಲೇ ಇದ್ದಾರೆ. ಕಳೆದ ತಿಂಗಳು ಮಲಪ್ರಭೆ ಪ್ರವಾಹ ಸಂದರ್ಭದಲ್ಲಿ ಲಖಮಾಪುರ ಗ್ರಾಮದ ಬಳಿ ನಾಲ್ಕಾರು ಮನೆಗಳಿಗೆ ನೀರು ನುಗ್ಗಿ ಕುಟುಂಬಸ್ಥರ ಜೀವನ ತೊಂದರೆಗೆ ಸಿಲುಕಿತ್ತು. ಆ ಮನೆಗಳ ಕುಟುಂಬಸ್ಥರಿಗೆ ಬೆಳ್ಳೆರಿಯಲ್ಲಿ ಕಾಳಜಿ ಕೇಂದ್ರದ ವ್ಯವಸ್ಥೆ ಮಾಡಲಾಗಿತ್ತು. ತೊಂದರೆಗೀಡಾದ ನಾಲ್ಕು ಕುಟುಂಬಗಳಿಗೆ ತಲಾ 5 ಸಾವಿರ ರೂ.ದಂತೆ ಎಸ್‌ಡಿಆರ್‌ಎಫ್‌ದಿಂದ ಪರಿಹಾರ ನೀಡಲಾಗಿದೆ. ಲಖಮಾಪುರದ ನಾಲ್ಕು ಕುಂಟುಂಬಗಳಿಗೆ ಮತ್ತು ಕೊಣ್ಣೂರಿನ ಒಂದು ಕುಟುಂಬಕ್ಕೆ ಪರಿಹಾರ ನೀಡಲಾಗಿದೆ. ಕಳೆದ ತಿಂಗಳು ಬಂದ ಪ್ರವಾಹ ಈಗಲೂ ಕಾಣಿಸಿಕೊಂಡಲ್ಲಿ ಸಮಸ್ಯೆ ಮತ್ತಷ್ಟು ಬಿಗಡಾಯಿಸಲಿದೆ ಎಂಬುದು ಗ್ರಾಮಸ್ಥರ ಅಳಲು.
ಈ ಕುರಿತು ಮಾಹಿತಿ ನೀಡಿದ ತಹಸೀಲ್ದಾರ್ ಶ್ರೀಶೈಲ ತಳವಾರ, ಮಲಪ್ರಭೆ ಮೇಲ್ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಮಲಪ್ರಭೆ ಆಣೆಕಟ್ಟಿಗೆ ಹೆಚ್ಚಿನ ನೀರು ಸಂಗ್ರಹವಾಗುತ್ತಿದೆ. ಆ. 27ರಿಂದ ಹೆಚ್ಚಿನ ನೀರನ್ನು ನದಿಗೆ ಹರಿಬಿಡಲಾಗುತ್ತಿದೆ. ನರಗುಂದ ತಾಲೂಕಿನ 8 ಗ್ರಾಮಗಳ ಜನತೆ ಆಗಾಗ ಪ್ರವಾಹ ಸಂದರ್ಭದಲ್ಲಿ ತೊಂದರೆಪಡುವ ಸ್ಥಿತಿ ಎದುರಾಗಿದೆ. ಕಳೆದ ತಿಂಗಳ ಉಂಟಾಗಿದ್ದ ಪ್ರವಾಹದಿಂದ ಹಾನಿಗೆ ಸಂಬಂಧಿಸಿದಂತೆ ಕಂದಾಯ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಬೆಳೆಹಾನಿ ಕುರಿತು ವರದಿ ಮಾಡಿದೆ. ಜಿಲ್ಲಾಧಿಕಾರಿಗಳಿಗೆ ವರದಿ ಕಳುಹಿಸಲಾಗುತ್ತಿದೆ ಎಂದರು.
ಹೆಚ್ಚಿನ ಮಳೆಯಿಂದ ಕಳೆದ ತಿಂಗಳು ಆದ ಘಟನೆಗಳಲ್ಲಿ ನರಗುಂದ, ಅರಿಷಿನಗೋಡಿ, ಹದ್ಲಿ, ನರಗುಂದ ಕಸಬಾ, ಮದಗುಣಕಿ, ಸಿದ್ದಾಪೂರ, ಜಗಾಪೂರ ಹಾಗೂ ಚಿಕ್ಕನರಗುಂದ ಗ್ರಾಮಗಳಲ್ಲಿ 11 ಮನೆಗಳು ಭಾಗಶಃ ಬಿದ್ದಿವೆ. ಆಗಸ್ಟ್ 2ನೇ ವಾರದಲ್ಲಿ ಬಿದ್ದಿರುವ ಮನೆಗಳ ಮಾಲೀಕರಿಂದ ಅರ್ಜಿ ಪಡೆದು 30 ಸಾವಿರ ರೂ. ಪರಿಹಾರ ನೀಡಲಾಗಿದೆ. ಆ. 27ರಿಂದ ಹೆಚ್ಚಿನ ನೀರು ಮಲಪ್ರಭೆಗೆ ಹರಿದು ಬರುತ್ತಿರುವುದರಿಂದ ನದಿ ತಟದ ಭಾಗದ ಜನತೆ, ಜಾನುವಾರುಗಳ ರಕ್ಷಣೆಗೆ ಕ್ರಮ ವಹಿಸಲಾಗಿದೆ ಎಂದರು.