

ದೇವದುರ್ಗ: ಮಕ್ಕಳಲ್ಲಿ ಕಂಡುಬರುವ ಜಂತುಹುಳು ಬಾಧೆ ಬಗ್ಗೆ ಪಾಲಕರು ನಿರ್ಲಕ್ಷ್ಯ ಮಾಡದೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಅಲ್ಬೆಡೊಂಜೋಲ್ ಮಾತ್ರೆ ತಪ್ಪದೆ ತೆಗೆದುಕೊಳ್ಳಬೇಕು ಎಂದು ಆಯುಷ್ ವೈದ್ಯಾಧಿಕಾರಿ ನಿರ್ಮಲಾದೇವಿ ಹೇಳಿದರು.
ಪಟ್ಟಣದ ಖೇಣೇದ ಮುರಿಗೆಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ರಾಷ್ಟ್ರೀಯ ಜಂತುಹುಳು ನಿವಾರಣೆ ಕಾರ್ಯಕ್ರಮ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.
ಡಿ.9ರಿಂದ 16ರವರೆಗೆ ಜಂತುಹುಳು ನಿವಾರಣೆ ಅಭಿಯಾನ ನಡೆಯಲಿದೆ. ಒಂದುವರ್ಷದಿಂದ 19ವರ್ಷವರೆಗಿನವರಿಗೆ ತಪ್ಪದೆ ಮಾತ್ರೆ ನೀಡಬೇಕು. ವೈದ್ಯರು ನೀಡುವ ಸಲಹೆಗಳನ್ನು ತಪ್ಪದೆ ಪಾಲನೆ ಮಾಡಬೇಕು. ಜಂತುಹುಳು ಬಾಧೆಯಿಂದ ರಕ್ತಹೀನತೆ, ಅಪೌಷ್ಟಿಕ, ಕಲಿಕೆಯಲ್ಲಿ ಹಿಂದುಳಿಯುಳುವಿಕೆ, ತೂಕದಲ್ಲಿ ಇಳಿಕೆ, ನಿಶಕ್ತಿ ಸೇರಿ ನಾನಾ ರೋಗಗಳು ಆವರಿಸಲಿವೆ. ಹೀಗಾಗಿ ಪಾಲಕರು ಎಚ್ಚರಿಕೆವಹಿಸಬೇಕು ಎಂದರು.