

ಮಂಡ್ಯ: ಸಮಾಜದಲ್ಲಿ ಮಹಿಳೆಯರು ನಾಲ್ಕು ಗೋಡೆಯಲ್ಲಿ ಬದುಕಬೇಕೆಂಬ ಭಾವನೆ ಕೆಲ ಪುರುಷರಲ್ಲಿದೆ. ಅವರ ಆಲೋಚನೆ ಬದಲಾದರೆ, ಮಹಿಳೆಯರು ಇನ್ನೂ ಹೆಚ್ಚು ಸದೃಢರಾಗುತ್ತಾರೆ ಎಂದು ಮಹಿಳಾ ಸರ್ಕಾರಿ ಕಾಲೇಜಿನ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥೆ ಎಚ್.ಸಿ.ಹೇಮಲತಾ ಅಭಿಪ್ರಾಯಪಟ್ಟರು.
ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ಪ್ರಗತಿಯಾಗಬೇಕಾದರೆ ಪುರುಷ ಮತ್ತು ಮಹಿಳೆ ಇಬ್ಬರ ಕಾಣಿಕೆ ಬಹಳ ಮುಖ್ಯ. ಆದರೆ, ಭಾರತ ಪುರುಷ ಪ್ರಧಾನವಾದ ದೇಶವಾಗಿದ್ದು ಇನ್ನೂ ಕೆಲವು ಕಡೆ ಮಹಿಳೆ ಅಬಲೆಯಾಗಿದ್ದಾಳೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದ ಆರ್ಥಿಕ ಪ್ರಗತಿಯ ಸಾಧನೆಯಾಗಿ ಮಹಿಳೆ ಎಲ್ಲ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾಳೆ. ಇಂದಿರಾಗಾಂಧಿ, ಕಲ್ಪನಾ ಚಾವ್ಲಾ, ಸಾಲುಮರದ ತಿಮ್ಮಕ್ಕ ಇನ್ನೂ ಹಲವಾರು ಮಹಿಳೆಯರು ಬಾಹ್ಯಾಕಾಶದಿಂದ ಹಿಡಿದು ಆಟೋ ಚಾಲನೆ ಮಾಡುವವರೆಗೂ ತಮ್ಮ ನೈಪುಣ್ಯತೆ, ಧೈರ್ಯ, ಸವಾಲುಗಳ ಮೂಲಕ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಕುಟುಂಬದಲ್ಲಿ ತಾಯಿಯಾಗಿ, ಹೆಂಡತಿ, ಸಹೋದರಿ, ಮಗಳಾಗಿ ಎಲ್ಲ ಮುಜಲುಗಳಲ್ಲಿ ಅವಳ ಕಾಣಿಕೆ ದೊಡ್ಡದು ಎಂದು ತಿಳಿಸಿದರು.
ಸಮಾಜದಲ್ಲಿ ಮಹಿಳೆಗೆ ಸಮಾನ ಅವಕಾಶ, ಸಮಾನತೆ, ಸಮಾನ ಗೌರವ ದೊರೆತರೆ ಆ ದೇಶ ಸಮೃದ್ಧಿಯ ನಾಡಾಗುತ್ತದೆ. ಇಲ್ಲವಾದರೆ ಅಸಮಾನತೆಯ ಗೂಡಾಗುತ್ತದೆ. ಭಾರತದಲ್ಲಿ ಮಹಿಳೆಯರು ಹಲವಾರು ಪ್ರಥಮಕ್ಕೆ ಸಾಕ್ಷಿಭೂತರಾಗಿದ್ದಾರೆ. ಪ್ರಥಮ ಮಹಿಳಾ ಪ್ರಧಾನಿಯಾಗಿ ಇಂದಿರಾಗಾಂಧಿ, ಬಾಹ್ಯಾಕಾಶ ವಿಜ್ಞಾನಿಯಾಗಿ ಕಲ್ಪನಾ ಚಾವ್ಲಾ, ಒಲಂಪಿಕ್ಸ್ ಪದಕ ವಿಜೇತೆಯಾಗಿ ಕರ್ಣಂ ಮಲ್ಲೇಶ್ವರಿ, ಸುಂದರಿಯಾಗಿ ರೀಟಾ ಸಾಧನೆ ಅದ್ವಿತೀಯವಾದಂತದ್ದು. ಭೂಮಿಯಲ್ಲಿ ಹೆಣ್ಣು ಸೃಷ್ಟಿಯ ಅದ್ಭುತ ರೂಪ. ಆಕೆ ಸಹನಾ ಮೂರ್ತಿ, ಕುಟುಂಬದ ಕಣ್ಣು ಎಂದು ತಿಳಿಸಿದರು.
ಪ್ರಾಂಶುಪಾಲ ಡಾ.ಗುರುರಾಜ ಪ್ರಭು ಮಾತನಾಡಿ, ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯ. ಆದರೆ ಅವರಿಗೆ ಒಳ್ಳೆಯ ಅವಕಾಶ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಸಂವಿಧಾನದ ಹಕ್ಕು ಮತ್ತು ಅವಕಾಶ ಬಳಸಿಕೊಳ್ಳುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ ಎಂದು ತಿಳಿಸಿದರು.
ರಾಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಕುಸುಮಾದೇವಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಸೈಯದ್ ಕೌಸರ್, ಪ್ರಾಧ್ಯಾಪಕಿಯರಾದ ಡಾ.ಜಯಲಕ್ಷ್ಮೀ, ಡಾ.ಪುಷ್ಪಲತಾ, ಗಿರಿಜಾಂಬ ಇದ್ದರು.