ಯದುವೀರ್‌ ದಂಪತಿಯಿಂದ ಮಹಿಳಾ ಸಾಧಕರಿಗೆ ಸನ್ಮಾನ

yaduveer
Published on

ಮೈಸೂರು: ಮೈಸೂರಿನ ಪ್ರತಿಷ್ಠಿತ ಕ್ಯಾನ್ಸರ್‌ ಚಿಕಿತ್ಸಾ ಆಸ್ಪತ್ರೆಗಳಲ್ಲಿ ಒಂದಾಗಿರುವ ಎಚ್‌ಸಿಜಿ ಭಾರತ್‌ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆಯಲ್ಲಿ ಮಂಗಳವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.

ನಗರದ ಹೆಬ್ಬಾಳು ರಿಂಗ್‌ ರಸ್ತೆಯಲ್ಲಿರುವ ಎಚ್‌ಸಿಜಿ ಭಾರತ್‌ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆಯಲ್ಲಿ ನಡೆದ ಸಮಾರಂಭದಲ್ಲಿ ರಾಜವಂಶಸ್ಥರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್‌ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಯದುವೀರ್‌ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್‌ ಅವರು ಮಹಿಳಾ ಸಾಧಕರನ್ನುಸನ್ಮಾನಿಸಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಭಾರತ್‌ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆಯಲ್ಲಿ ಮಾರ್ಚ್‌ 9ರಿಂದ 15ನೇ ತಾರೀಕಿನವರೆಗೆ ಆಯೋಜಿಸಿರುವ ಉಚಿತ ಸಮಾಲೋಚನಾ ಕಾರ್ಯಕ್ರಮ ಹಾಗೂ ಮೊಬೈಲ್‌ ಬಸ್‌ ಸೇವೆಗೆ ಯದುವೀರ್‌ ದಂಪತಿಗಳು ಚಾಲನೆ ನೀಡಿದರು.

ಭಾರತ್‌ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆ ಕ್ಯಾನ್ಸರ್‌ ರೋಗಿಗಳಿಗೆ ಉತ್ತಮ ಗುಣಮಟ್ಟದ  ಚಿಕಿತ್ಸೆಯನ್ನು ನೀಡುವುದು ಮಾತ್ರವಲ್ಲದೆ ಮಹಿಳಾ ಸಬಲೀಕರಣದಲ್ಲಿ ತೊಡಗಿಸಿಕೊಂಡಿದೆ. ಹೀಗಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಸಾಧಕರನ್ನು ಗೌರವಿಸಲಾಯಿತು. ಮೈಸೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ನಿವೃತ್ತ ಮುಖ್ಯಸ್ಥೆ ಡಾ.ಆರ್.‌ ಇಂದಿರಾ, ಭಾರತ್‌ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆಯ ರೇಡಿಯೇಷನ್‌ ಆಂಕಾಲಜಿಸ್ಟ್‌ ಡಾ.ವೈ.ಎಸ್.‌ ಮಾಧವಿ, ಮಹಿಳಾ ಸ್ವಸಹಾಯ ಗುಂಪಿನ ನಾಯಕಿ ಮಂಗಳಾ ಹಾಗೂ ವಿನಾಯಕ ಜ್ಞಾನ ವಿದ್ಯಾಶಾಲೆಯ ಶಿಕ್ಷಕಿ ಭೂದೇವಿ ಅವರುಗಳನ್ನು ಯದುವೀರ್‌ ಒಡೆಯರ್‌ ಹಾಗೂ ತ್ರಿಷಿಕಾ ಕುಮಾರಿ ಒಡೆಯರ್‌ ಅವರುಗಳು ಸನ್ಮಾನಿಸಿ ಗೌರವಿಸಿದರು.

ಉಚಿತ ಸಮಾಲೋಚನಾ ಕಾರ್ಯಕ್ರಮ, ಮೊಬೈಲ್‌ ಬಸ್‌ ಸೇವೆ ಹಾಗೂ ಮಹಿಳಾ ಸಾಧಕರನ್ನು ಸನ್ಮಾನಿಸಿದ ಬಳಿಕ ಮಾತನಾಡಿದ ಯದುವೀರ್‌ ಒಡೆಯರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು, ರಾಣಿ ಲಕ್ಷ್ಮಮ್ಮಣ್ಣಿ ಹಾಗೂ ಕೆಂಪ ನಂಜಮ್ಮ ಅವರ ಕೊಡುಗೆಯನ್ನು ಸ್ಮರಿಸಿದರು. ರಾಣಿ ಲಕ್ಷ್ಮಮ್ಮಣ್ಣಿ ಹಾಗೂ ಕೆಂಪ ನಂಜಮ್ಮ ಅವರುಗಳು ಮಹಿಳಾ ಸಬಲೀಕರಣ, ಮಹಿಳೆಯರಿಗೆ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿದರು. ಮಹಿಳೆಯರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿನ ವಾಣಿ ವಿಲಾಸ ಮತ್ತು ಮಿಂಟೋ ಆಸ್ಪತ್ರೆ ಸೇರಿದಂತೆ ಹಲವು ಆಸ್ಪತ್ರೆಗಳನ್ನು ಸ್ಥಾಪಿಸಿದರು. ಭಾರತ್‌ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆ ವಾರವಿಡಿ ಉಚಿತ ಸಮಾಲೋಚನ ಶಿಬಿರ ನಡೆಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದೆ. ಇದರ ಜೊತೆಗೆ ಗ್ರಾಮೀಣ ಭಾಗದ ಜನರ ಅನುಕೂಲಕ್ಕಾಗಿ ಮೊಬೈಲ್‌ ಬಸ್‌ ಮೂಲಕ ಆರೋಗ್ಯ ಚಿಕಿತ್ಸಾ ಸೌಲಭ್ಯ ಒದಗಿಸುತ್ತಿರುವುದು ಶ್ಲಾಘನೀಯ ಎಂದರು.

ಸಮಾರಂಭದ ಅಧ್ಯಕ್ಷತೆವಹಿಸಿದ್ದ ಎಚ್‌ಸಿಜಿ ಹಾಗೂ ಭಾರತ್‌ ಆಸ್ಪತ್ರೆ ಮತ್ತು ಆಂಕಾಲಜಿ ಸಂಸ್ಥೆಯ ನಿರ್ದೇಶಕರಾದ ಡಾ. ಅಜಯ್‌ ಕುಮಾರ್‌ ಅವರು ಮಾತನಾಡಿ, ಮಹಿಳೆಯರ ಅನುಕೂಲಕ್ಕಾಗಿ ರಾಣಿ ಕೆಂಪನಂಜಮ್ಮಣ್ಣಿ ಅವರ ಕೊಡುಗೆ ಅಪಾರವಾಗಿದೆ. 1880ರಲ್ಲೇ ಅವರು ಮಹಿಳಾ ಆರೋಗ್ಯ ಮತ್ತು ಶಿಕ್ಷಣಕ್ಕೆ ಪ್ರಾಮುಖ್ಯಯೆ ನೀಡಿದ್ದು ಮಾತ್ರವಲ್ಲದೆ, ಮಹಿಳಾ ಸಬಲೀಕರಣದ ಮೂಲಕ ಅವರುಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದರು. ಅವರುಗಳು ಮಾಡಿರುವ ಮಹತ್ವದ ಕಾರ್ಯಗಳನ್ನು ಇಂದಿಗೂ ನಾವು ಮಾಡಲು ಸಾಧ್ಯವಾಗುತ್ತಿಲ್ಲ. ನಾವು ನಮ್ಮ ಸಂಸ್ಕೃತಿಯ ಬಗ್ಗೆ ಮಾತನಾಡುತ್ತಾ, ಮಹಿಳೆಯರನ್ನು ಆದಿಶಕ್ತಿ ಮತ್ತು ಭೂದೇವಿಗೆ ಹೋಲಿಕೆ ಮಾಡುತ್ತೇವೆ. ಆದರೆ ವಾಸ್ತವದಲ್ಲಿ ನಾವು ಅವರುಗಳಿಗೆ ಯಾವುದೇ ಅಧಿಕಾರ ನೀಡುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ನಾವು ಮಹಿಳೆಯರನ್ನು ಎರಡನೇ ದರ್ಜೆಯ ಪ್ರಜೆಯಾಗಿ ಪರಿಗಣಿಸುತ್ತೇವೆ.

ಅಲ್ಲದೇ, ನಮ್ಮ ಸಂಸತ್ತಿನಲ್ಲೂ ಮಹಿಳಾ ಪ್ರಾತಿನಿಧ್ಯತೆ ಕಡಿಮೆ ಇದೆ. ಮಹಿಳೆಯರಿಗೆ ಶೇ.30ರಷ್ಟು ಮೀಸಲಾತಿ ನೀಡಬೇಕೆಂದು  ಹೇಳುತ್ತಿದ್ದರೂ ವಾಸ್ತವದಲ್ಲಿ ಇದು ಇನ್ನೂ ಸಾಧ್ಯವಾಗಿಲ್ಲ. ಇಂದಿಗೂ ಕಾರ್ಪೊರೇಟ್‌ ಕಂಪನಿಗಳಲ್ಲಿ ಮಹಿಳೆಯರಿಗೆ ಪ್ರಾಥಮಿಕ ಪ್ರಾಮುಖ್ಯತೆಯನ್ನು ನೀಡುತ್ತಿಲ್ಲ. ಆದರೆ ವಿದೇಶದಲ್ಲಿ ಮಹಿಳಾ ನಾಯಕರು ಹೆಚ್ಚು ಸಮರ್ಥರು ಮತ್ತು ಪ್ರಾಮಾಣಿಕರು ಎಂಬುದನ್ನುಹಲವು ಅಧ್ಯಯನಗಳ ಮೂಲಕ ತಿಳಿದು ಬಂದಿದೆ. ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡಿದರೆ, ಮಹಿಳೆಯರು ಪುರುಷರನ್ನೇ ಸೋಲಿಸಲಿದ್ದು, ನಾವು 25 ವರ್ಷಗಳ ಹಿಂದೆ ಮುಳ್ಳೂರಿನಲ್ಲಿ ಶಾಲೆ ಆರಂಭಿಸಿದಾಗ, ಗ್ರಾಮೀಣ ಭಾಗದ ಮಹಿಳೆಯರು ತಮಗೆ ಹೆಚ್ಚಿನ ಕೆಲಸ ಇದೆ ಎನ್ನುತ್ತಿದ್ದರಲ್ಲದೆ, ಸುಮಾರು 18 ವರ್ಷಗಳ ಕಾಲ ಕೆಲಸ ಮಾಡಲಿರುವ ಮಹಿಳೆಯರು  ಕೆಲಸದಲ್ಲಿ ಪುರುಷರಿಗಿಂತ ಹೆಚ್ಚಿನ ಕೆಲಸ ಮಾಡುತ್ತಿದ್ದರು. ಈ ರೀತಿಯ ತಾರತಮ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಇನ್ನು ನಮ್ಮ ಸಂಸ್ಥೆ ವತಿಯಿಂದ ನಡೆಸಲಾಗುವ ಆರೋಗ್ಯ ಶಿಬಿರದ ಸಂದರ್ಭಗಳಲ್ಲಿ ಶೇ.75ರಷ್ಟು ಮಹಿಳೆಯರು ಸಂತಾನೋತ್ಪತ್ತಿ ಸಮಯದಲ್ಲಿ ರಕ್ತಹೀನತೆಯಿಂದ ಬಳಲುತ್ತಿರುವುದನ್ನು ಮತ್ತು ಹಿಮೋಗ್ಲೋಬಿನ್‌ ಪ್ರಮಾಣ 9ಕ್ಕಿಂತ ಕಡಿಮೆ ಇರುವುದನ್ನ ಗಮನಿಸಿದ್ದೇವೆ ಎಂದ ಅವರು, ಭಾರತ್‌ ಆಸ್ಪತ್ರೆಯಲ್ಲಿ ಮಹಿಳಾ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಹೇಳಿದರು.

ಕ್ಯಾನ್ಸರ್‌ನಿಂದ ಪೀಡಿತರು ಆಗಿರುವ ಡಾ. ಇಂದಿರಾ ಅವರು ಮಾತನಾಡಿ, ಕ್ಯಾನ್ಸರ್‌ ರೋಗಿಗಳು ಯಾವುದೇ ಕಾರಣಕ್ಕೂ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬಾರದು. 2013ರಲ್ಲಿ ನನಗೆ ಕ್ಯಾನ್ಸರ್‌ ಇರುವುದು ಗೊತ್ತಾಯಿತು. ಆರಂಭದ ದಿನಗಳಲ್ಲಿ ನಾನು ವಿಚಲಿತಗೊಂಡಿದ್ದೆ. ಆದರೆ ನಂತರ ಭಾರತ್‌ ಆಸ್ಪತ್ರೆ ಮತ್ತು ಆಂಕಾಲಜಿ ವೈದ್ಯರು, ಕ್ಯಾನ್ಸರ್‌ನಿಂದ ಗುಣಮುಖರಾಗಬಹುದು ಎಂದರು. ಇಂತಹ ವಿಷಯದಲ್ಲಿ ನಾವು ಭಯಪಡುತ್ತೇವೆ ನಿಜ, ಆದರೆ ವೈದ್ಯರು ಒಂದು ಬಾಗಿಲು ಮುಚ್ಚಿದ್ದಾರೆ ಎಂದರು, ರೋಗದಿಂದ ಪಾರಾಗಲು ಇನ್ನೂ ಒಂಭತ್ತು ಬಾಗಿಲುಗಳಿರುತ್ತವೆ. ನಾನು ವೈದ್ಯರು ನೀಡಿದ ಸಲಹೆಗಳನ್ನು ತಪ್ಪದೇ ಅನುಸರಿಸಿದ್ದೇನೆ, ಇದರಿಂದ ಇಂದು ನಾನು ಉತ್ತಮವಾಗಿ ಕೆಲಸ ಮಾಡುತ್ತಿದ್ದು, ಮೊದಲಿಗಿಂತಲೂ ಹೆಚ್ಚಾಗಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನಗಳಲ್ಲಿ ಭಾಗವಹಿಸುತ್ತೇನೆ ಎಂದು ಕ್ಯಾನ್ಸರ್‌ ಬಗ್ಗೆ ಆತಂಕಪಡುದಂತೆ ತಿಳುವಳಿಕೆ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net