ಸ್ಕೌಟ್ಸ್, ಗೈಡ್ಸ್‌ನಿಂದ ವಿಶ್ವ ಬುಡಕಟ್ಟು ದಿನಾಚರಣೆ

MDK04
Published on

ಮಡಿಕೇರಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಕೊಡಗು ಜಿಲ್ಲಾ ಘಟಕ ಹಾಗೂ ಪೊನ್ನಂಪೇಟೆ ಸ್ಥಳೀಯ ಸಂಸ್ಥೆ ಹಾಗೂ ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಯೋಗದಲ್ಲಿ ವಿಶ್ವ ಬುಡಕಟ್ಟು ದಿನಾಚರಣೆಯನ್ನು ಕುಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಟ್ಟದಲ್ಲಿ ಆಚರಿಸಲಾಯಿತು. ಮಕ್ಕಳು ಸೊಪ್ಪು ಕಟ್ಟಿಕೊಂಡು, ವಿವಿಧ ವೇಷಭೂಷಣದ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡರು.


ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ೬೬ ಶಿಬಿರಾರ್ಥಿಗಳಿಗೆ ಸ್ಕಾರ್ಫ್, ಓಗಲ್, ಮತ್ತು ಪ್ರಶಸ್ತಿ ಪತ್ರವನ್ನು ವಿತರಿಸಲಾಯಿತು. ಶಿಕ್ಷಕಿ ಸುನಿತಾ ಬುಡಕಟ್ಟು ಜನಾಂಗದ ಆಚಾರ, ವಿಚಾರ, ಸಂಸ್ಕೃತಿ ಬಗ್ಗೆ ಮಾಹಿತಿ ನೀಡಿದರು.


ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಣಕ್ಕೆ ಒತ್ತು ನೀಡಲು ಮುಂದಾಗಬೇಕಿದೆ. ಜಾನಪದ ಕಲೆಯನ್ನು ಕಲಿತು ಬೇರೆಕಡೆಗಳಲ್ಲಿ ಪ್ರದರ್ಶನದ ಮೂಲಕ ವಿಶ್ವದಾಧ್ಯಂತ ಪಸರಿಸಲು ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದರು.


ಜಿಲ್ಲಾ ಸಂಘಟಕಿ ದಮಯಂತಿ ಮಾತನಾಡಿ, ಬುಡಕಟ್ಟು ಜನಾಂಗದ ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದರ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂದರು.


ಮಡಿಕೇರಿ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಅಜ್ಜಮಕ್ಕಡ ವಿನುಕುಮಾರ್ ಮಾತನಾಡಿ, ಉತ್ತಮ ಶಿಕ್ಷಣ ಪಡೆದುಕೊಂಡು, ಸರ್ಕಾರಿ ಶಾಲೆಯಲ್ಲಿ ಕಲಿತು ದೊಡ್ಡ ಸಾಧನೆ ಮಾಡಿದವರ ಸಾಲಿಗೆ ಸೇರಬೆಕು ಎಂದರು.


ಮುಖ್ಯ ಶಿಕ್ಷಕಿ ಶಕುಂತಲ, ಜಿಲ್ಲಾ ಖಜಾಂಚಿ ಪುಷ್ಪವೇಣಿ, ಪೊನ್ನಂಪೇಟೆ ಸಂಸ್ಥೆಯ ಖಜಾಂಚಿ ಮುತ್ತಮ್ಮ, ಸಿಆರ್‌ಪಿ ಮುರುಗನ್, ಶಾಲಾ ಶಿಕ್ಷಕರು, ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಗೈಡ್ ವಿಭಾಗದ ಜಿಲ್ಲಾ ಸಹಾಯಕ ತರಬೇತಿ ಆಯುಕ್ತೆ ಅಲೀಮಾ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net