

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರವಾಸಿ ತಾಣಗಳ ಸ್ಪಚ್ಛತೆ ಎಲ್ಲರ ಕರ್ತವ್ಯವಾಗಿದೆ, ಸಾರ್ವಜನಿಕರು ಸಹಕರಿಸುವ ಮೂಲಕ ಪ್ರವಾಸಿ ತಾಣಗಳಲ್ಲಿ ಸ್ವಚ್ಛತೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ಅನುರಾಧಾ ಮನವಿ ಮಾಡಿದರು.
ದೇವನಹಳ್ಳಿ ತಾಲೂಕಿನ ಆವತಿ ಬೆಟ್ಟದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರವಾಸೋದ್ಯಮ ಮತ್ತು ಶಾಂತಿ ಧ್ಯೇಯ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ ಸಸಿ ನೆಡುವ ಹಾಗೂ ಸ್ವಚ್ಛತಾ ಹೀ ಸೇವಾ ಆಂದೋಲನ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಕುಂದಾಣ ಬೆಟ್ಟ, ಮಾಕಳಿಬೆಟ್ಟ, ಶಿವಗಂಗೆ ಬೆಟ್ಟ, ಸಿದ್ಧರ ಬೆಟ್ಟ, ಆವತಿ ಬೆಟ್ಟದಂತ ಪ್ರವಾಸಿ ತಾಣಗಳು ಹಾಗೂ ಪಾರಂಪರಿಕ ಕಟ್ಟಡಗಳಿರುವುದು ನಮ್ಮೆಲ್ಲರ ಹೆಮ್ಮೆ. ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಚಾರಣಕ್ಕೆ ಅನುಕೂಲಕರ ವಾತಾವರಣವನ್ನು ಜಿಲ್ಲಾಡಳಿತ ಕಲ್ಪಿಸುತ್ತಿದ್ದು, ಸಾರ್ವಜನಿಕರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಸ್ವಚ್ಛತೆ ಕಾಪಾಡಬೇಕು ಎಂದು ಮನವಿ ಮಾಡಿದರು. ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುವುದು ಕಂಡುಬರುತ್ತಿದೆ, ಪ್ರವಾಸಿ ತಾಣಗಳು ಆಯಾ ಜಿಲ್ಲೆಗಳ ಹೆಮ್ಮೆಯ ಸಂಕೇತಗಳಾಗಿವೆ, ಚಾರಣಕ್ಕೆ ಬರುವವರು ಕುಡಿಯುವ ನೀರಿನ ಪ್ಲಾಸ್ಟಿಕ್ ಬಾಟಲಿ ಸೇರಿ ಇನ್ನಿತರ ಕಸಗಳನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂದು ಹೇಳಿದರು. ಪರಿಸರ ಸಂರಕ್ಷಣೆಗಾಗಿ ಸಸಿಗಳನ್ನು ಹೆಚ್ಚಾಗಿ ನೆಟ್ಟು, ಬೆಳೆಸುವ ಮೂಲಕ ಆರೋಗ್ಯಕರ ಪ್ರಕೃತಿ ನಿರ್ಮಿಸಿ ಪರಿಸರ ಸಮತೋಲನ ಕಾಪಾಡಬೇಕು ಎಂದರು.
ಸ್ವಚ್ಛತಾ ಹೀ ಸೇವಾ ಆಂದೋಲನ: ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಜನರಲ್ಲಿ ನೈರ್ಮಲ್ಯ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷ ಸ್ವಚ್ಛತಾ ಹೀ ಸೇವಾ ಪಾಕ್ಷಿಕವನ್ನು ಆಯೋಜಿಸಲಾಗುತ್ತಿದ್ದು ಜಿಲ್ಲೆಯಾದ್ಯಂತ ಸೆ.17 ರಿಂದ ಅ.2 ರ ವರೆಗೆ ಸ್ವಚ್ಛತಾ ಹೀ ಸೇವಾ ಪಾಕ್ಷಿಕ-2024 ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ಈ ಆಂದೋಲನದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಸಿಇಒ ಕರೆ ನೀಡಿದರು.