ಸೆಪ್ಟೆಂಬರ್ 27ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಸಂಭ್ರಮ

33
Published on

ಮೈಸೂರು"‘ಪ್ರವಾಸೋದ್ಯಮ ಮತ್ತು ಶಾಂತಿ’ ಎಂಬ ಧ್ಯೇಯ ವಾಕ್ಯದೊಂದಿಗೆ ಸೆ.27ರಂದು ಮೈಸೂರು ಅರಮನೆಯ ಆವರಣದಲ್ಲಿ ವಿಶ್ವ ಪ್ರವಾಸೋದ್ಯಮ ದಿನವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕಿ ಎಂ.ಕೆ.ಸವಿತಾ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಂತಿ ಹಾಗೂ ಭದ್ರತೆ ಇರುವಂತಹ ರಾಷ್ಟ್ರಗಳಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಹಾಗಾಗಿ ಕಾರ್ಯಕ್ರಮದಲ್ಲಿ ಸರ್ವಧರ್ಮದ ಜನರನ್ನು ಒಳಗೊಂಡು ಅಂದು ಕಾರ್ಯಕ್ರಮದಲ್ಲಿ ಮೆರವಣಿಗೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಉದ್ಘಾಟನೆ ನಂತರ ಅರಮನೆಯಿಂದ ಹೈವೇ ಸರ್ಕಲ್ವರೆಗೆ ಮೆರವಣಿಗೆ ಏರ್ಪಡಿಸಲಾಗಿದ್ದು, ಇದರಲ್ಲಿ ಗಜಪಡೆ, ಪೊಲೀಸ್ ಬ್ಯಾಂಡ್, ನಾದಸ್ವರ, ಡೊಳ್ಳುಕುಣಿತ, ಕಂಸಾಳೆ, ವೀರಗಾಸೆ, ಕೊಡವ ನೃತ್ಯ, ಟಿಬೇಟಿಯನ್ ನೃತ್ಯ ಹಾಗೂ ಕೇರಳ ಚೆಂಡೆ ಸೇರಿದಂತೆ ಇನ್ನಿತರ ಕಲಾತಂಡಗಳ ಪ್ರದರ್ಶನ ಸೇರಿದಂತೆ ಪ್ರವಾಸಿಗರ ಗಮನ ಸೆಳೆಯುವಂತಹ ಕಾರ್ಯಕ್ರಮ ಆಯೋಜಿಸಲಾಗುವುದು ಎಂದರು.
ಪ್ರವಾಸೋದ್ಯಮ ಇಲಾಖೆ ಅಧಿಕೃತ ವೆಬ್‌ಸೈಟ್ ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಅನಾವರಣಗೊಳಿಸಲಿದ್ದಾರೆ. ಮೆರವಣಿಗೆಯಲ್ಲಿ ಭಾಗವಹಿಸುವ ಅಧಿಕಾರಿಗಳು, ಸಂಘ-ಸಂಸ್ಥೆಗಳು, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಶಾಂತಿಯ ಸಂಕೇತವಾದ ಬಿಳಿ ವಸ್ತ್ರ ಧರಿಸಬೇಕು. ಕಲಾತಂಡಗಳು ಹಾಗೂ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆ ಮತ್ತು ಭಾಗವಹಿಸುವ ಪ್ರತಿಯೊಬ್ಬರಿಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಟ್ಯಾಗ್ ಮಾಡಿ ಬಹುಮಾನ ಗೆಲ್ಲಿ:
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ಚಿತ್ರಿಸಿ ಇನ್ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಆಗಿ ಅಪ್ಲೋಡ್ ಮಾಡಿ, ನಂತರ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ ಜಿಜಿಠಿಞಠ್ಠ್ಟ್ಠ ಅನ್ನು ಟ್ಯಾಗ್ ಮಾಡಬೇಕು. ಅದರಲ್ಲಿ ನಿಗದಿತ ಸಮಯದಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಒಂದು ವಿಡಿಯೋ ಹಾಗೂ ಉತ್ತಮ ಕಂಟೆಂಟ್ ಇರುವ ಒಂದು ವಿಡಿಯೋಗೆ ಅ.5ರಂದು ಅರಮನೆ ಮೈದಾನದಲ್ಲಿ ನಡೆಯುವ ದಸರಾ ವೇದಿಕೆಯಲ್ಲಿ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.
ಅರಮನೆ ಮಂಡಳಿಯ ಉಪ ನಿರ್ದೇಶಕ ಸುಬ್ರಮಣ್ಯ, ಕರ್ನಾಟಕ ದಸರಾ ವಸ್ತುಪ್ರದರ್ಶನದ ಕಾರ್ಯನಿರ್ವಹಣಾಧಿಕಾರಿ ರುದ್ರೇಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭುಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಮೈಸೂರು ಟ್ರಾವೆಲ್ಸ್ ಅಸೋಸಿಯೇಶನ್ ಅಧ್ಯಕ್ಷ ಜಯಪ್ರಕಾಶ್ ರಾಜೇ ಅರಸ್, ಸ್ಕಾಲ್ ಇಂಟರ್‌ನ್ಯಾಷನಲ್ ಮೈಸೂರು ವಿಭಾಗದ ಅಧ್ಯಕ್ಷ ಬಿ.ಎಸ್.ಪ್ರಶಾಂತ್, ಟೂರಿಸ್ಟ್ ಗೈಡ್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಎಸ್.ಜೆ.ಅಶೋಕ್, ಚಾಲಕರ ಸಂಘದ ಅಧ್ಯಕ್ಷ ನಾಗರಾಜು, ಡಿ.ದೇವರಾಜು ಅರಸು ರಸ್ತೆ ಅಂಗಡಿ ಮಾಲೀಕರ ಹಾಗೂ ಬಾಡಿಗೆದಾರರು ಸಂಘದ ಅಧ್ಯಕ್ಷ ಕೆ.ಜಿ.ಪ್ರಕಾಶ್, ಉದ್ಯಮಿಗಳಾದ ಭರತ್ ಗೌಡ, ಸಮರ್ಥ ವೈದ್ಯ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net