ಐತಿಹಾಸಿಕ ಬೇಗಂ ತಲಾಬ್ ಕೆರೆಯಂಗಳದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ

WORLD TOURISM DAY
ವಿಜಯಪುರದ ಬೇಗಂ ತಲಾಬ್ ಆವರಣದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಉದ್ಘಾಟಿಸಿದರು. ವಿಕ್ರಂ ಬೆಳಂಕಿ, ಮಲ್ಲಿಕಾರ್ಜುನ ಭಜಂತ್ರಿ, ವಿ.ಸಿ. ವಸ್ತ್ರದ ಮತ್ತಿತರರಿದ್ದಾರೆ.
Published on

ವಿಜಯಪುರ: ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಕ್ಷೇತ್ರ ಬಲಪಡಿಸಲು ಮೊದಲ ಆದ್ಯತೆ ನೀಡಬೇಕು. ಪ್ರವಾಸಿಗರ ಆಕರ್ಷಣೆಗೆ ರೂಪಿಸಿದ ಯೋಜನೆಗಳ ಸಮರ್ಪಕ ಅನುಷ್ಟಾನಕ್ಕೆ ಕ್ರಮಕೈಗೊಂಡು ಐತಿಹಾಸಿಕ ಜಿಲ್ಲೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸೋಣ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಹೇಳಿದರು.

ನಗರದ ಐತಿಹಾಸಿಕ ಬೇಗಂ ತಲಾಬ್ ಆವರಣದಲ್ಲಿ ಬುಧವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಪ್ರವಾಸೋದ್ಯಮ ಮಂತ್ರಾಲಯ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ರೋಟರಿ ಕ್ಲಬ್-ಮಾನ್ಯುಮೆಂಟಲ್ ಹೆರಿಟೇಜ್ ಸಿಟಿ, ಆರ್‌ಕೆಎಂ ಆಯರ್ವೇದ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ ಮತ್ತು ಪಿಜಿ ರಿಸರ್ಚ ಸೆಂಟರ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಜಗತ್ಪ್ರಸಿದ್ದ ಗೋಳಗುಮ್ಮಟ ಸೇರಿದಂತೆ ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಜಿಲ್ಲೆಯಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ವಿಜಯಪುರ ಮತ್ತು ಬಾಗಲಕೊಟೆ ಜಿಲ್ಲೆಗಳಲ್ಲಿ ಐತಿಹಾಸಿಕ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಜಿಲ್ಲೆಯಲ್ಲಿ ಬಸವನಬಾಗೇವಾಡಿ, ಕೂಡಲಸಂಗಮ, ಮತ್ತಿತರ ಐತಿಹಾಸಿಕ ಸ್ಮಾರಕಗಳು, ಬಾಗಲಕೋಟೆಯ ಚಾಲುಕ್ಯರ ಬದಾಮಿ, ಪಟ್ಟದಕಲ್ಲು, ಐಹೊಳೆ, ಪ್ರವಾಸಿಗರನ್ನು ಆಕರ್ಷಿಸುತ್ತಿವೆ ಎಂದು ಹೇಳಿದರು.

ವಿಜಯಪುರ ನಗರದಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆಯೊಂದಿಗೆ ಸ್ಮಾರಕಗಳ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಬೇಕು. ಐತಿಹಾಸಿಕ ತಾಣಗಳ ರಕ್ಷಣೆ ಕುರಿತು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಪ್ರವಾಸಿ ತಾಣಗಳ ಮಾಹಿತಿ ಒದಗಿಸಲು ಪ್ರತಿವಾರ ಹೆರಿಟೇಜ್ ವಾಕ್, ಸ್ಮಾರಕಗಳ ಸಂಪೂರ್ಣ ಮಾಹಿತಿ ಒದಗಿಸುವ ಆರ್ಟ್ ಗ್ಯಾಲರಿ ನಿರ್ಮಾಣ, ನಗರದ ಆನಂದ ಮಹಲ್‌ನಲ್ಲಿ ಮ್ಯೂಸಿಯಂ-ಕಂ-ಗ್ಯಾಲರಿ, ವಿವಿಧ ಸ್ಮಾರಕಗಳ ಪುನರುಜ್ಜೀವನ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರವಾಸೋದ್ಯಮ ಅಭಿವೃದ್ದಿಗೆ ಒತ್ತು ನೀಡಲಾಗುವುದು ಎಂದು ಹೇಳಿದರು.

ವಿಜಯಪುರ ನಗರದಲ್ಲಿರುವ ಪುರಾತನ ಬಾವಡಿಗಳನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಗುವುದು. ಪ್ರತಿ ತಿಂಗಳು ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡು ಬಾವಡಿಗಳನ್ನು ಸ್ವಚ್ಛಗೊಳಿಸಲಾಗುವುದು. ಸ್ವಯಂ ಪ್ರೇರಣೆಯಿಂದ ಶಾಲಾ ಕಾಲೇಜ್ ವಿದ್ಯಾರ್ಥಿಗಳು ಸಹ ಭಾಗವಹಿಸಬೇಕು. ಅದರಂತೆ ಬೇಗಂ ತಲಾಬ್ ಕೆಬಿಜೆಎನ್‌ಎಲ್ ವತಿಯಿಂದ ಅಭಿವೃದ್ಧಿ ಪಡಿಸಲಾಗಿದ್ದು, ಮಹಾನಗರ ಪಾಲಿಕೆ ವತಿಯಿಂದ ನಿರ್ವಹಿಸಲಾಗುವುದು ಎಂದು ಹೇಳಿದರು.

ವಿಕ್ರಂ ಬೆಳಂಕಿ ಅವರು ಪ್ರವಾಸೋದ್ಯಮ ಮತ್ತು ಹಸಿರು ಹೂಡಿಕೆಗಳು ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು. ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇಗ್ನೋ ಪ್ರಾದೇಶಿಕ ನಿರ್ದೇಶಕ ವರದರಾಜನ್, ಸಣ್ಣ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ವಿ.ಸಿ. ವಸ್ತ್ರದ, ಕ್ರೀಡಾಧಿಕಾರಿ ಎಸ್.ಜಿ. ಲೋಣಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರಾಜಶೇಖರ ದೈವಾಡಿ, ವಾರ್ತಾ ಇಲಾಖೆಯ ಸಹಾಯ ನಿರ್ದೇಶಕ ಅಮರೇಶ ದೊಡಮನಿ, ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ಪ್ರಸನ್ನ ವಿಜಯಕುಮಾರ, ಶಂಭುಲಿಂಗ ಕರ್ಪೂರಮಠ, ಅನಿಲಕುಮಾರ ತುಕಾರಾಂ ಪವಾರ, ಜಗದೇವ ಗುಣಕಿ ಉಪಸ್ಥಿತರಿದ್ದರು.ನಿವೃತ್ತ ಶಿಕ್ಷಕ ಮಮದಾಪೂರ ಕಾರ್ಯಕ್ರಮ ನಿರ್ವಹಿಸಿದರು. ಲಂಬಾಣಿ ನೃತ್ಯ, ಛಾಯಾಚಿತ್ರ ಪ್ರದರ್ಶನ ಹಾಗೂ ರಂಗೋಲಿ ಸ್ಪರ್ಧೆ ಗಮನ ಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net