

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಪ್ರತಿಯೊಬ್ಬರು ಗಿಡ-ಮರಗಳನ್ನು ಬೆಳೆಸುವ ಜತೆಗೆ ಪರಿಸರ ಸಮತೋಲನಕ್ಕಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವ ಜವಾಬ್ದಾರಿ ಇದೆ, ನಾವು ಪರಿಸರ ಸಮತೋಲನ ಕಾಪಾಡುವದರಿಂದ ಉತ್ತಮ ಆರೋಗ್ಯ, ಶುದ್ಧ ವಾತಾವರಣ ಪಡೆಯಲು ಸಾಧ್ಯವಾಗುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ದೇವನಹಳ್ಳಿ ತಾಲೂಕು ಕುಂದಾಣ ಬೆಟ್ಟದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಪ್ರವಾಸೋದ್ಯಮ ಮತ್ತು ಸುಸ್ಥಿರ ಪರಿವರ್ತನೆ ವಾಕ್ಯದೊಂದಿಗೆ ’ಟ್ರಕ್ಕಿಂಗ್, ಸಸಿ ನೆಡುವ ಹಾಗೂ ಸ್ವಚ್ಛತಾ ಹೀ ಸೇವಾ ಆಂದೋಲನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಸ್ವಚ್ಛತೆ ಹಾಗೂ ಗಿಡ-ಮರಗಳು ಬೆಳೆಸೋದು ಕೇವಲ ಸರ್ಕಾರದ ಕೆಲಸ ಅಷ್ಟೇ ಅಲ್ಲ, ಸಾರ್ವಜನಿಕರ ಭಾಗವಹಿಸುವಿಕೆ ಅಗತ್ಯವಾಗಿದೆ. ಪರಿಸರ ಬೆಳೆಸುವ ಕಾರ್ಯದಿಂದ ರೋಗರುಜಿನಗಳು ತಡೆದು ಆಸ್ಪತ್ರೆಗೆ ಹೋಗುವುರಿಂದ ದೂರ ಉಳಿಯಲು ಸಾಧ್ಯವಾಗುತ್ತದೆ ಎಂದು ಸಾರ್ವಜನಿಕರಲ್ಲಿ ಪರಿಸರ ಅರಿವು ಮೂಡಿಸಿದರು.
ಸ್ವಚ್ಛತೆ ಕಾಪಾಡಬೇಕು: ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಚಾರಣಕ್ಕೆ ಅನುಕೂಲಕರ ವಾತಾವರಣವನ್ನು ಜಿಲ್ಲಾಡಳಿತ ಕಲ್ಪಿಸುತ್ತಿದ್ದು, ಸಾರ್ವಜನಿಕರು ಪ್ರವಾಸಿ ತಾಣಗಳಿಗೆ ಭೇಟಿ ನೀಡಿದಾಗ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರಕೃತಿಯ ಸೌಂದರ್ಯ ಹಾಗೂ ಶುದ್ಧ ವಾತಾವರಣವನ್ನು ಆಸ್ವಾದಿಸಬೇಕು ಎಂದು ಸಚಿವರು ಸಲಹೆ ನೀಡಿದರು. ಪರಿಸರ ಸಂರಕ್ಷಣೆ ಜತೆಗೆ ಪಕ್ಷಿಗಳಿಗೆ ಆಹಾರವಾಗುವಂತ ಹಣ್ಣು ಬಿಡುವ ಗಿಡ-ಮರ ಹೆಚ್ಚಾಗಿ ನೆಟ್ಟು, ಬೆಳೆಸುವ ಮೂಲಕ ಆರೋಗ್ಯಕರ ಪ್ರಕೃತಿ ನಿರ್ಮಿಸಿ ಪರಿಸರ ಸಮತೋಲನ ಕಾಪಾಡಬೇಕು ಎಂದು ಸಚಿವರು ಕರೆ ನೀಡಿದರು.
ಕೆರೆ ಕಲ್ಯಾಣಿಗಳಿಗೆ ಕಾಯಕಲ್ಪ: ಜಿಲ್ಲಾಧಿಕಾರಿ ಎ.ಬಿ ಬಸವರಾಜು ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ದಿನಾಚರಣೆ ಹಾಗೂ ಸ್ವಚ್ಛತೆಯೇ ಸೇವೆ ಕಾರ್ಯಕ್ರಮವನ್ನು ಮಾಡುತ್ತಿದ್ದೇವೆ. ಇದರ ಭಾಗವಾಗಿ ಜಿಲ್ಲೆಯಾದ್ಯಂತ ಕೆರೆ, ಕುಂಟೆ, ಕಲ್ಯಾಣಿಗಳು ಹಾಗೂ ಗ್ರಾಮದ ಸ್ವಚ್ಛತೆ ಜತೆಗೆ ಸಸಿ ನೆಡುವ ಕಾರ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಪೌರಕಾರ್ಮಿಕರು ಉತ್ಸುಕತೆಯಿಂದ ಕಾರ್ಯಪ್ರವೃತ್ತರಾಗಿದ್ದಾರೆ ಎಂದು ತಿಳಿಸಿದರು. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ವಾತಾವರಣದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು. ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿವೆ, ಬೆಂಗಳೂರಿಗೆ ಹೊಂದಿಕೊಂಡಂತಿರುವ ಜಿಲ್ಲೆಯಾಗಿರುವುದರಿಂಧ ಸಾಕಷ್ಟು ಪ್ರವಾಸಿಗಳು ತಾಣಗಳಿಗೆ ಭೇಟಿ ನೀಡುತ್ತಿದ್ದಾರೆ. ಸರ್ಕಾರವು ಪ್ರವಾಸಿ ತಾಣಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು ಹಂತಹಂತವಾಗಿ ಜಿಲ್ಲೆಯ ಎಲ್ಲ ತಾಣಗಳು ಅಭಿವೃದ್ಧಿ ಕಾಣಲಿವೆ ಎಂದು ಭರವಸೆ ನೀಡಿದರು.