ರಂಗಭೂಮಿ ಉಳಿವಿಗೆ ಸಂಕಲ್ಪ ಅಗತ್ಯ: ಮಧುರ ಮಂಡ್ಯ ರಂಗ ಕಲಾ ಟ್ರಸ್ಟ್ ಅಧ್ಯಕ್ಷ ಡಾ.ಉಮೇಶ್ ಅಭಿಮತ

World Theatre Day Mandya
Published on

ಮಂಡ್ಯ: ರಂಗಭೂಮಿ ಕಲೆಗಳ ಉಳಿವಿಗೆ ಯುವಸಮುದಾಯ ಸಂಕಲ್ಪ ಮಾಡಬೇಕಿದೆ. ಪ್ರಸ್ತುತ ದಿನಗಳಲ್ಲಿ ರಂಗಭೂಮಿ ಕಲೆ ಮರೆಯಾಗುತ್ತಿದೆ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸಮಾಜದ ಮೇಲಿದೆ. ಒಂದು ವೇಳೆ ಉದಾಸೀನ ಮಾಡಿದರೆ ಮುಂದಿನ ಪೀಳಿಗೆಗೆ ರಂಗಭೂಮಿ ಇಲ್ಲವಾಗುತ್ತದೆ ಎಂದು ಮಧುರ ಮಂಡ್ಯ ರಂಗ ಕಲಾ ಟ್ರಸ್ಟ್ ಅಧ್ಯಕ್ಷ ಡಾ.ಉಮೇಶ್ ಎಚ್ಚರಿಸಿದರು.

ನಗರದ ಹೊಸಹಳ್ಳಿಯಲ್ಲಿರುವ ಟ್ರಸ್ಟ್ ಕಚೇರಿಯಲ್ಲಿ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಬದುಕು ಒಂದು ರಂಗಭೂಮಿ. ಇಲ್ಲಿ ಎಲ್ಲರೂ ಪಾತ್ರಧಾರಿಗಳು. ಪ್ರೀತಿ, ಪ್ರೇಮ ಹಾಗೂ ಪರಸ್ಪರ ವಾತ್ಸಲ್ಯದಿಂದ ನಟಿಸಿ ಬಿಟ್ಟರೆ ಜಗತ್ತೊಂದು ಸುಂದರ ರಂಗಭೂಮಿ ಇದ್ದಂತೆ. ಆದ್ದರಿಂದ ಎಲ್ಲರೂ ಅಹಂ ತೊರೆದು ಬದುಕಬೇಕೆಂದು ಸಲಹೆ ನೀಡಿದರು.

ಹಳ್ಳಿಗಾಡಿನಲ್ಲಿ ರಂಗಕುಣಿತ, ರಂಗಮಂಟಪಗಳು ಇದ್ದವು. ಅಲ್ಲಿ ಎಲ್ಲರೂ ಭಾವೈಕ್ಯತೆಯಿಂದ ರಂಗಕಲೆಗಳನ್ನು ಕಲಿತು ಪ್ರದರ್ಶನ ನೀಡಿ ಮನರಂಜನೆ ಸಮರ್ಪಿಸುತ್ತಿದ್ದರು. ಎಲ್ಲರೂ ಒಗ್ಗೂಡಿಸುವಿಕೆಯನ್ನು ರಂಗಮಂಟಪಗಳು ಕಟ್ಟಿಕೊಡುತ್ತಿದ್ದವು. ಬಡವ, ಶ್ರೀಮಂತರೆನ್ನದೇ ವರ್ಗ ತಾರತಮ್ಯವಿಲ್ಲದೆ ಎಲ್ಲರೂ ಬೆರೆಯುತ್ತಿದ್ದರು ಎಂದು ಸ್ಮರಿಸಿದರು.

ಫಾರ್ಮಸಿಸ್ಟ್ ರಘು, ಅಧ್ಯಾಪಕಿ ನಿರ್ಮಲಾ, ರಾಮಲಿಂಗೇಗೌಡ, ಸಂದೀಪ್, ಸುಧೀರ್ ಇತರರಿದ್ದರು. ಇದೇ ವೇಳೆ ರಂಗಗೀತೆಗಳನ್ನು ಹಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net