

ಬೆಳಗಾವಿ: ನಗರದ ತಿಳಕಚೌಕ್ ಹತ್ತಿರದ ಲೋಕಮಾನ್ಯ ರಂಗಮಂದಿರದಲ್ಲಿ ಮಾ.27ರಂದು ಸಂಜೆ 5.30ಕ್ಕೆ ವಿಶ್ವ ರಂಗಭೂಮಿ ದಿನಾಚರಣೆ ಮತ್ತು ರಂಗಸಖ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಬೆಳಗಾವಿ ರಂಗಸಂಪದ ಅಧ್ಯ ಡಾ.ಅರವಿಂದ ಕುಲಕರ್ಣಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2025ರ ರಂಗಸಖ ಪ್ರಶಸ್ತಿಯನ್ನು ಖ್ಯಾತ ಪ್ರಸಾದನಾ ಕಲಾವಿದ ಸಂತೋಷ ಮಹಾಲೆ ಅವರಿಗೆ ನೀಡಲಾಗುವುದು. ವಕೀಲ ಎಸ್.ಎಂ. ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ರಾಣಿ ಚನ್ನಮ್ಮ ವಿವಿ ಕುಲಪತಿ ಡಾ.ಸಿ.ಎಂ.ತ್ಯಾಗರಾಜ ಅತಿಥಿಯಾಗಿ ಆಗಮಿಸುವರು ಎಂದು ತಿಳಿಸಿದರು. ಬೆಂಗಳೂರಿನ ಅನನ್ಯ ತಂಡದಿಂದ ಖ್ಯಾತ ಕಿರುತೆರೆ ಕಲಾವಿದ ಎಸ್.ಎನ್.ಸೇತುರಾಮ ನಿರ್ದೇಶಿಸಿ ಅಭಿನಯಿಸಿರುವ ತಳಿ ನಾಟಕ ಪ್ರದರ್ಶನಗೊಳ್ಳಲಿದೆ. ಶ್ರೀಪತಿ ಮಂಜನಬೈಲು, ಸೌಮ್ಯ ಭಾಗವತ, ಅಪರ್ಣಾ ಗುಮಾಸ್ತೆ ನಟಿಸಲಿದ್ದಾರೆ.
29ರಂದು ರಂಗಸಂಪದದಿಂದ ಖ್ಯಾತ ಲೇಖಕ ಶ್ರೀರಂಗ ರಚನೆಯ ಡಾ. ಅರವಿಂದ ಕುಲಕರ್ಣಿ ನಿರ್ದೇಶನದ "ಗೆಳೆಯ ನೀನು ಹಳೆಯ ನಾನು' ನಾಟಕ ಪ್ರದರ್ಶನಗೊಳ್ಳಲಿದೆ. ಬೆಳಗಾವಿಯಲ್ಲಿ ಇದು ಎರಡನೇ ಪ್ರದರ್ಶನವಾಗಿದ್ದು, ಮುಂಬೈಯಲ್ಲಿ ಪ್ರದರ್ಶನಗೊಂಡು ಜನರ ಮನಸ್ಸನ್ನು ಗೆದ್ದಿದೆ. ಪದ್ಮಾ ಕುಲಕರ್ಣಿ, ಪವಿತ್ರಾ ರೇವಣಕರ, ರಾಮಚಂದ್ರ ಭಟ್, ಅರವಿಂದ ಪಾಟೀಲ, ಪ್ರಸಾದ ಕಾರಜೋಳ, ವಿನೋದ ಸಪ್ಪಣ್ಣವರ, ಯೋಗೇಶ ದೇಶಪಾಂಡೆ ಪಾತ್ರಧಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದರು. ಪ್ರಸಾದ ಕಾರಜೋಳ, ರಾಮಚಂದ್ರ ಕಟ್ಟಿ, ಅಶೋಕ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿದ್ದರು.