

ವಿಜಯವಾಣಿ ಸುದ್ದಿಜಾಲ ಧಾರವಾಡ
ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಮಾ. 27ರಂದು ಸಂಜೆ 4 ಗಂಟೆಗೆ ವಿಶ್ವ ರಂಗಭೂಮಿ ದಿನಾಚರಣೆ, ಉಪನ್ಯಾಸ, ರಂಗ ಸಂಗೀತ ಹಾಗೂ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ ಎಂದು ರಂಗಾಯಣ ಆಡಳಿತಾಧಿಕಾರಿ ಶಿಶಿಕಲಾ ಹುಡೇದ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ದಿವ್ಯ ಪ್ರಭು ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿ ಉಪನ್ಯಾಸಕರಾಗಿ ಡಾ. ಬಿ.ಕೆ. ಎಸ್. ವರ್ಧನ್ ಭಾಗವಹಿಸಲಿದ್ದು, ರಂಗಭೂಮಿ ಮತ್ತು ಸಾಮಾಜಿಕ ಪರಿವರ್ತನೆ: ಸಾಧ್ಯತೆ ಮತ್ತು ಸವಾಲುಗಳು ಕುರಿತು ಉಪನ್ಯಾಸ ನೀಡುವರು. ಬಸವರಾಜ ಭಂಟನೂರ ರಂಗಸಂಗೀತ ಪ್ರಸ್ತುತಪಡಿಸುವರು. ರಂಗಾಯಣ ನಿರ್ದೇಶಕ ರಾಜು ತಾಳಿಕೋಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಸಂಜೆ 6.30ಕ್ಕೆ ಪಂ. ಬಸವರಾಜ ರಾಜಗುರು ಬಯಲು ರಂಗ ಮಂದಿರದಲ್ಲಿ ಜಡಭರತ ರಚನೆ, ಹುಲುಗಪ್ಪ ಕಟ್ಟಿಮನಿ ನಿರ್ದೇಶನದ "ಸತ್ತವರ ನೆರಳು' ನಾಟಕವನ್ನು ರಂಗಾಯಣದ ತಾತ್ಕಾಲಿಕ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸುವರು ಎಂದರು.
ಇನ್ನು ರಂಗಾಯಣ ವತಿಯಿಂದ ಏ. 10ರಿಂದ ಮೇ 4ರವರೆಗೆ "ಚಿಣ್ಣರ ಮೇಳ-2025' ಬೇಸಿಗೆ ರಂಗ ತರಬೇತಿ ಶಿಬಿರ ಆಯೋಜಿಸಲಾಗಿದೆ. ಮಕ್ಕಳಿಗೆ ನಾಟಕ ತರಬೇತಿ ಜತೆಗೆ ರಂಗ ಸಂಸ್ಕೃತಿ ಬೆಳೆಸುವುದು ಹಾಗೂ ಅವರ ವ್ಯಕ್ತಿತ್ವ ವಿಕಸನಕ್ಕೆ ಸೃಜನಶೀಲ ಧ್ವನಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಶಿಬಿರದ ಮುಖ್ಯ ಉದ್ದೇಶ ಎಂದರು.
ಶಿಬಿರದ ನಿರ್ದೇಶಕ ಲಕ್ಷ್ಮಣ್ ಪೀರಗಾರ ಇದ್ದರು.