

ಸಿಂಧನೂರು: ನಾವು ಪ್ರಶ್ನೆ ಮಾಡದೇ ಯಾವುದೇ ತರ್ಕ ಒಪ್ಪಬಾರದು ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಖಾದರ್‌ಬಾಷಾ ಹೇಳಿದರು.
ಇದನ್ನೂ ಓದಿ: ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶ
ತಾಲೂಕಿನ ತುರ್ವಿಹಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಕಸಿತ ಭಾರತಕ್ಕಾಗಿ ವಿಜ್ಞಾನ ಮತ್ತು ಹೊಸ ನಾಯಕತ್ವಕ್ಕಾಗಿ ಭಾರತೀಯ ಯುವಕರನ್ನು ಸಬಲೀಕರಣಗೊಳಿಸುವುದು, ರಾಮನ್ ಪರಿಣಾಮದಂಥ ವೈಜ್ಞಾನಿಕ ಸಾಧನೆಗಳನ್ನು ಗೌರವಿಸುವುದು ಮತ್ತು ಯುವ ಮನಸ್ಸುಗಳಲ್ಲಿ ನಾವೀನ್ಯತೆ ಪ್ರೇರೇಪಿಸುವುದು ಈ ದಿನದ ಗುರಿಯಾಗಿದೆ. ಸಂವಿಧಾನದ ಮೂಲಭೂತ ಕರ್ತವ್ಯಗಳ ಆಶಯದಂತೆ ಮೌಢ್ಯತೆ ಮತ್ತು ಅಂಧಕಾರವನ್ನು ನಿರ್ಮೂಲನೆ ಮಾಡಿ ಜೀವ ಜಗತ್ತಿಗೆ ಪೂರಕವಾದ ಬದುಕನ್ನು ರೂಪಿಸಿಕೊಳ್ಳಬೇಕು.
ಈ ದಿನದ ಮಹತ್ವ, ಉದ್ದೇಶಗಳು ಮತ್ತು ಕೊಡುಗೆಗಳನ್ನು ನಾವು ಪರಿಶೀಲಿಸುತ್ತೇವೆ. ವಿಚಾರ ಸಂಕಿರಣಗಳಂತಹ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನ, ವೈಜ್ಞಾನಿಕ ಚಿಂತನಾ ಕೌಶಲಗಳನ್ನು ಉತ್ತೇಜಿಸುವುದು ಇದರ ಗುರಿಯಾಗಿದೆ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಮೌಲಾಸಾಬ್ ಪ್ರತಿಜ್ಞಾವಿಧಿ ಬೋಧಿಸಿದರು. ಸಹಾಯಕ ಪ್ರಾಧ್ಯಾಪಕ ರಾಜೇಶ, ಉಪನ್ಯಾಸಕರಾದ ಮಹಾದೇವ, ಸುಭಾಷ್, ವೀರೇಶ, ಚನ್ನಬಸಮ್ಮ, ಪ್ರಮುಖರಾದ ಹನುಮೇಶ, ಗಂಗಾಬಾಯಿ ಇದ್ದರು.
ತಿಡಿಗೋಳ: ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರಾಷ್ಟ್ರೀಯ ವಿಜ್ಞಾನ ದಿನ ಆಚರಿಸಲಾಯಿತು. ಮುಖ್ಯಶಿಕ್ಷಕ ದುರ್ಗಪ್ಪ ಮಾತನಾಡಿ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ನಂತರ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಸಹ ಶಿಕ್ಷಕರಾದ ವೀರಭದ್ರಯ್ಯ, ಬಸವರಾಜ ಸಾಗರ, ಶಿಕ್ಷಕಿಯರಾದ ಲಲಿತಾ, ಅಕ್ಕಮಹಾದೇವಿ ಇದ್ದರು. ವಿದ್ಯಾರ್ಥಿಗಳ ವಿಜ್ಞಾನ ವಸ್ತು ಪ್ರದರ್ಶನ ಗಮನ ಸೆಳೆಯಿತು.