

ಮಂಡ್ಯ: ಜೀವನದಲ್ಲಿ ಎಂತಹ ಕಠಿಣ ಪರಿಸ್ಥಿತಿ ಎದುರಾದರು ಕೂಡ ಆತ್ಮಸ್ಥೈರ್ಯದಿಂದ ತಮ್ಮ ಜೀವನವನ್ನು ರೂಪಿಸಿಕೊಂಡು ಸಮಸ್ಯೆಯನ್ನು ಎದುರಿಸಬೇಕು ಎಂದು ಶಾಸಕ ರವಿಕುಮಾರ್ ಗಣಿಗ ಕಿವಿಮಾತು ಹೇಳಿದರು.
ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯಿಂದ ವಿಶ್ವ ಆತ್ಮಹತ್ಯೆ ತಡೆ ಸಪ್ತಾಹದ ಅಂಗವಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಜನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವ ಜನತೆ ಹಾಗೂ ಜಿಲ್ಲೆಯ ರೈತರು ನಾನಾ ಕಾರಣಗಳಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ವತಿಯಿಂದ ಮಾನವ ಸರಪಳಿಯನ್ನು ನಿರ್ಮಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಜೀವನ ಎನ್ನುವುದು ಮನುಷ್ಯನಿಗೆ ಒಂದೇ ಬಾರಿ ಸಿಗುವಂತದ್ದು, ಅದನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಹಾಳುಮಾಡಿಕೊಳ್ಳದೆ ಯಾವುದೇ ಸಮಸ್ಯೆಯಿದ್ದರೂ ಬದುಕಿ ಜಯಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ಸೋಮಶೇಖರ್ ಮಾತನಾಡಿ, ಪ್ರಪಂಚದಲ್ಲಿ ಪ್ರತಿವರ್ಷ ಸುಮಾರು 7 ಲಕ್ಷಕ್ಕೂ ಹೆಚ್ಚು ಜನರು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಅದರಂತೆ ಭಾರತದಲ್ಲಿ 1,71,000, ಕರ್ನಾಟಕದಲ್ಲಿ 13 ಸಾವಿರ ಹಾಗೂ ಮಂಡ್ಯದಲ್ಲಿ 1,500 ಜನರು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆಂದು 2022ರಲ್ಲಿ ವರದಿಯಾಗಿದೆ ಎಂದರು.
ಅತೀ ಹೆಚ್ಚು ಅಂದರೆ 15 ರಿಂದ 24 ವರ್ಷದೊಳಗಿನ ಯುವ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇದಕ್ಕೆ ಕಾರಣ ಅವರಿಗೆ ಒತ್ತಡವನ್ನು ನಿವಾರಿಸುವ ಶಕ್ತಿ ಇರುವುದಿಲ್ಲ. ಪರೀಕ್ಷೆಯಲ್ಲಿ ಅನುತ್ತೀರ್ಣರಾದಾಗ ಹಾಗೂ ಪ್ರೇಮ ಪ್ರಕರಣ ವಿಚಾರವಾಗಿ ಹಾಗೂ ಡ್ರಗ್ಸ್, ಮದ್ಯಪಾನಕ್ಕೆ ದಾಸರಾಗಿದ್ದಾಗ ಒತ್ತಡವನ್ನು ನಿಭಾಯಿಸುವಲ್ಲಿ ವಿಫಲರಾದಾಗ ಆತ್ಮಹತ್ಯೆಗಳು ಸಂಭವಿಸುತ್ತವೆ. ಆದ್ದರಿಂದ ಅಂತವರಿಗೆ ಜಿಲ್ಲಾಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮದ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.
ಮುಡಾ ಅಧ್ಯಕ್ಷ ನಹೀಂ, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎಂ.ಎನ್.ಆಶಾಲತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಡಾ.ಅಶ್ವಥ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.