

ವಿಜಯವಾಣಿ ಸುದ್ದಿಜಾಲ ಧಾರವಾಡ
ಆತ್ಮಹತ್ಯೆ ತಡೆಗಟ್ಟಬಹುದಾದ ಘಟನೆ. ಸರಿಯಾದ ಕಾರಣಗಳನ್ನು ತಿಳಿದು ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸು ಮಾಡಿರುವ ವ್ಯಕ್ತಿಗಳಿಗೆ ಅಗತ್ಯ ಆಪ್ತ ಸಮಾಲೋಚನೆ ಮಾಡಬೇಕು. ವಿದ್ಯಾರ್ಥಿಗಳು ಮತ್ತು ಯುವಕರ ಆತ್ಮಹತ್ಯೆ ಪ್ರಕರಣ ಹೆಚ್ಚುತ್ತಿರುವುದು ಆತಂಕಕಾರಿ. ಮನೋವೈದ್ಯರ ಸಲಹೆ ಮತ್ತು ಮಾರ್ಗದರ್ಶನ ಪಡೆದು ಆತ್ಮಹತ್ಯೆ ಯೋಚನೆಗಳಿಂದ ಹೊರಬರಬೇಕು ಎಂದು ಬೆಂಗಳೂರಿನ ಸಮಾಧಾನ ಆಪ್ತಸಮಾಲೋಚನೆ ಕೇಂದ್ರ ಸಂಸ್ಥಾಪಕ, ಪದ್ಮಶ್ರೀ ಪ್ರೊ. ಸಿ.ಆರ್. ಚಂದ್ರಶೇಖರ ಹೇಳಿದರು.
ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳ ಸಂಸ್ಥೆ ಹಾಗೂ ವಿವಿಧ ಕಾಲೇಜುಗಳ ಸಹಯೋಗದಲ್ಲಿ ಡಿಮ್ಹಾನ್ಸ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲವರು ಕಷ್ಟಗಳು ಬಂದಾಗ ಆತ್ಮಹತ್ಯೆ ಯತ್ನ ಮಾಡುತ್ತಾರೆ. ಪಾಲಕರು ಮಕ್ಕಳ ಬಗ್ಗೆ ಜಾಗೃತಿ ವಹಿಸಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕು. ಕುಟುಂಬದಲ್ಲಿ ಒಳ್ಳೆಯ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಕೌಟುಂಬಿಕ ಸಮಸ್ಯೆ, ಆರೋಗ್ಯ ಸಮಸ್ಯೆ, ಸೋಲು, ಹತಾಶೆ, ಹಣಕಾಸಿನ ಸಮಸ್ಯೆಗಳು ಎದುರಾದಾಗ ಧೈರ್ಯ ಕಳೆದುಕೊಳ್ಳಬಾರದು ಎಂದರು.
ಆತ್ಮಹತ್ಯೆ ತಡೆಗಟ್ಟುವ ಕುರಿತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪೋಸ್ಟರ್ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು. ಭಾರತೀಯ ಮನೋವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ಅಧ್ಯಕ್ಷ ಡಾ. ಸೋಮಶೇಖರ ಬಿಜ್ಜಳ, ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ ಸಿ., ಶುಶ್ರೂಷಾಽಕಾರಿ ಲವ್ಲಿ ಮ್ಯಾಥ್ಯುಸ್, ಎಸ್.ವಿ.ವೈ ಸಂಸ್ಥೆಯ ನಿರ್ವಹಣಾ ಮಂಡಳಿಯ ನಿರ್ದೇಶಕ ಡಾ. ವಿ.ಎಂ. ದೇಶಪಾಂಡೆ, ಮನೋವೈದ್ಯ ಡಾ. ಆನಂದ ಪಾಂಡುರAಗಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಡಾ. ಶ್ರೀಧರ ಕುಲಕರ್ಣಿ ಪ್ರಾರ್ಥಿಸಿದರು. ಡಾ. ರಂಗನಾಥ ಕುಲಕರ್ಣಿ ಪರಿಚಯಿಸಿದರು. ಪ್ರಶಾಂತ ಪಾಟೀಲ ನಿರೂಪಿಸಿದರು. ಅಶೋಕ ಕೋರಿ ವಂದಿಸಿದರು.