ಖಿನ್ನತೆಯಿಂದ ಎದೆಗುಂದದಿರಿ

BLY- 13-3
ಬಳ್ಳಾರಿ ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
Published on

ಬಳ್ಳಾರಿ : ವ್ಯಕ್ತಿಯ ಜೀವನದಲ್ಲಿ ಬರುವ ಒತ್ತಡಗಳಿಂದ ಮಾನಸಿಕ ಸ್ಥಿತಿಯ ಮೇಲೆ ಪರಿಣಾಮ ಬೀರಲಿದ್ದು, ಅದರಿಂದ ವ್ಯಕ್ತಿಯು ಖಿನ್ನತೆಗೆ ಒಳಗಾಗುವ ಮೂಲಕ ಅನಾಹುತಗಳಾಗುವ ಸಂಭವವಿರುತ್ತದೆ. ಅಂತವರನ್ನು ಗುರುತಿಸಿ ಆಪ್ತ ಸಮಾಲೋಚನೆ ಮೂಲಕ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾಗೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.

ಸಾಮಾನ್ಯವಾಗಿ 15-25 ವಯಸ್ಸಿನ ಅವಧಿಯಲ್ಲಿ ಮಾನಸಿಕ ಖಿನ್ನತೆ ಬರುತ್ತದೆ. ಇಂಥಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಎದೆಗುಂದದೆ ಆತ್ಮವಿಶ್ವಾಸದೊಂದಿಗೆ ಮುನ್ನಡೆಯಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ.ರಮೇಶ್‌ಬಾಬು ಮಾತನಾಡಿ, ಯಾವುದೇ ಕಾರಣಕ್ಕೂ ಮನಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಬರಬಾರದು. ತಮ್ಮಲ್ಲಿನ ಸಕಾರಾತ್ಮಕ ಭಾವನೆಗಳಿಗೆ ತೊಂದರೆಯಾದರೆ ಮತ್ತು ಮಾನಸಿಕ ಕಿರಿಕಿರಿಯಾದರೆ ಅದಷ್ಟು ಬೇಗ ಮನೋವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು.

ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವೀರೇಂದ್ರ ಕುಮಾರ್ ಅವರು ಮಾತನಾಡಿ, ಪ್ರತಿ ತಿಂಗಳು, ಪ್ರತಿ ವಾರದ ಮಂಗಳವಾರ ಜಿಲ್ಲೆಯ ಎಲ್ಲ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಮನೋ ಚೈತನ್ಯ ಕಾರ್ಯಕ್ರಮ ಹಮ್ಮಿಕೊಂಡು ಮಾನಸಿಕ ರೋಗಿಗಳಿಗೆ, ಸಣ್ಣ ಪುಟ್ಟ ಮಾನಸಿಕ ತೊಂದರೆ ಇರುವ ಮನೋ ರೋಗಿಗಳಿಗೆ ಅಪ್ತ ಸಮಾಲೋಚನೆ ಹಾಗೂ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಪ್ರತಿಯೊಬ್ಬರು ಸದುಪಯೊಗ ಪಡೆದುಕೊಳ್ಳಬೇಕು ಎಂದರು.

ಮಾನಸಿಕ ಸಮಸ್ಯೆಗಳಿಗೆ ಒಳಗಾದವರು ಅದರಲ್ಲಿ ಮುಖ್ಯವಾಗಿ ವ್ಯಥೆಗೆ ಒಳಪಟ್ಟವರು, ಮಾನಸಿಕ ಒತ್ತಡ, ಕೌಟುಂಬಿಕ ಸಮಸ್ಯೆ, ಆತ್ಮಹತ್ಯೆ ಅಲೋಚನೆ, ಮಾದಕ ವ್ಯಸನಕ್ಕೆ ಒಳಗಾದವರು, ಜ್ಞಾಪಕ ಶಕ್ತಿ ತೊಂದರೆಯುಳ್ಳವರು, ಆರ್ಥಿಕ ಸಮಸ್ಯೆಗಳಿಂದ ಒತ್ತಡಕ್ಕೊಳಗಾದವರು ಇನ್ನು ಮುಂತಾದವರು ಉಚಿತ ಸಹಾಯವಾಣಿ 14416 ಸಂಖ್ಯೆಗೆ ಗೆ ಕರೆ ಮಾಡಿ ಸೂಕ್ತ ಮಾರ್ಗದರ್ಶನ ಹಾಗೂ ಆಪ್ತ ಸಮಾಲೋಚನೆಯನ್ನು ಪಡೆದು ಮಾನಸಿಕ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ಎಂದು ತಿಳಿಸಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಅರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಈ.ರಮೇಶ್ ಬಾಬು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅನಿಲ್‌ಕುಮಾರ್, ಜಿಲ್ಲಾ ಮಲೇರಿಯಾ ಕಾರ್ಯಕ್ರಮ ಅನುಷ್ಟಾನ ಅಧಿಕಾರಿ ಡಾ.ಆರ್.ಅಬ್ದುಲ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾ ಅನುಷ್ಟಾನ ಅಧಿಕಾರಿ ಡಾ.ಮರಿಯಂಬಿ, ತಾಲೂಕು ಆರೋಗ್ಯ ಆಧಿಕಾರಿ ಡಾ.ಮೋಹನಾಕುಮಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ್, ಶಾಂತ ಕುಮಾರ್, ಕೆ.ಪಿ.ಕಾವ್ಯಾ, ರಂಜಿತಾ, ತಂಗಿಯಮ್ಮ, ಪ್ರಹ್ಲಾದ ರೆಡ್ಡಿ, ಮಾನಪ್ಪ, ಗಂಗಾಧರ್, ನಿರಂಜನ್, ರಾಮು ಸೇರಿದಂತೆ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತರು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net