

ಬಾಳೆಹೊನ್ನೂರು: ಸೀಗೋಡು ಪಿಎಂಶ್ರೀ ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹವನ್ನು ಯು.ಆರ್.ರಾವ್ ಸ್ಯಾಟಲೈಟ್ ಕೇಂದ್ರದ ಸಹಯೋಗದಲ್ಲಿ ಶನಿವಾರ ಆಚರಿಸಲಾಯಿತು.
ಯು.ಆರ್.ರಾವ್ ಸ್ಯಾಟಲೈಟ್ ಕೇಂದ್ರದ 9 ವಿಜ್ಞಾನಿಗಳು, ವೈದ್ಯರು ಮತ್ತು ಕಚೇರಿ ಸಿಬ್ಬಂದಿ ಪಿಎಂಶ್ರೀ ಜವಾಹರ ನವೋದಯ ವಿದ್ಯಾಲಯಕ್ಕೆ ಆಗಮಿಸಿ, ಸಪ್ತಾಹದ ಆಚರಣೆಗೆ ಸಂಬಂಧಿಸಿದಂತೆ ಇಸ್ರೋ ರಾಕೆಟ್ ಮತ್ತು ಉಪಗ್ರಹಗಳ ವಸ್ತು ಪ್ರದರ್ಶನ ಏರ್ಪಡಿಸಿದ್ದರು.
ವಿಜ್ಞಾನಿಗಳ ತಂಡದ ಅಧ್ಯಕ್ಷ ಡಾ. ವಿ.ರಾಧಾಕೃಷ್ಣ ಮಾತನಾಡಿ, ವಿಶ್ವ ಬಾಹ್ಯಾಕಾಶ ಸಪ್ತಾಹದ ಥೀಮ್ ಬಾಹ್ಯಾಕಾಶ ಮತ್ತು ಹವಾಮಾನ ಬದಲಾವಣೆ ಆಗಿದ್ದು, ಅದಕ್ಕೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳನ್ನು ಇಸ್ರೋ ಹಾಕಿಕೊಂಡಿದೆ ಎಂದು ತಿಳಿಸಿದರು.
ಕೇಂದ್ರೀಯ ಕಾಫಿ ಸಂಶೋಧನಾ ಮಂಡಳಿ ವಿಜ್ಞಾನಿ ಡಾ. ಮೋಟೆ ಕಿಶೋರ್ ಮಾತನಾಡಿ, ಹವಾಮಾನ ಬದಲಾವಣೆಯಿಂದ ವಿಶ್ವದಲ್ಲಿ ಆಗುತ್ತಿರುವ ಅನಾಹುತಗಳು, ಕೃಷಿ ಮೇಲೆ ಆಗುವ ದುಷ್ಪ್ಪರಿಣಾಮಗಳನ್ನು ತಿಳಿಸಿದರು. ಬಾಹ್ಯಾಕಾಶ ವಿಜ್ಞಾನ ಹೇಗೆ ಅನಾಹುತಗಳನ್ನು ತಡೆಗಟ್ಟಲು ಉಪಯುಕ್ತವಾಗಿದೆಯೆಂಬ ಮಾಹಿತಿ ಹಂಚಿಕೊಂಡರು.
ವಿದ್ಯಾಲಯದ ಪ್ರಾಚಾರ್ಯೆ ರೇಖಾ ಅಶೋಕ್ ಮಾತನಾಡಿ, 10 ವಿಜ್ಞಾನಿಗಳನ್ನು ಒಂದೇ ವೇದಿಕೆ ಮೇಲೆ ಕಾಣುತ್ತಿರುವುದು ವಿದ್ಯಾರ್ಥಿಗಳ ಪುಣ್ಯ. ವಿದ್ಯಾರ್ಥಿಗಳು ವಿಜ್ಞಾನಿಗಳಾಗಿ ದೇಶಸೇವೆ ಮಾಡಬೇಕು ಎಂದರು.
ಜಿಲ್ಲೆಯ ವಿವಿಧ ಪ್ರೌಢಶಾಲೆಗಳಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮದ ಮಾಹಿತಿ ಪಡೆದರು. ವಿದ್ಯಾಲಯದಲ್ಲಿ ವಿಶ್ವ ಬಾಹ್ಯಾಕಾಶ ಸಪ್ತಾಹದ ಥೀಮ್ ಬಾಹ್ಯಾಕಾಶ ಮತ್ತು ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಕ್ವಿಜ್, ಚಿತ್ರಕಲಾ ಸ್ಪರ್ಧೆ, ಬುದ್ಧಿಮತ್ತೆ ಪರೀಕ್ಷೆಗಳನ್ನು ವಿದ್ಯಾರ್ಥಿಗಳಿಗೆ ನಡೆಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.