

ಮಂಡ್ಯ: ಇತ್ತೀಚಿನ ವರ್ಷಗಳಲ್ಲಿ ರಾಸಾಯನಿಕ ಅಂಶಗಳನ್ನು ಹೆಚ್ಚು ಬಳಸುತ್ತಿರುವುದರಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿರುವುದರ ಜತೆಗೆ ಮನುಷ್ಯನ ಆರೋಗ್ಯದ ಮೇಲೆ ಸಾಕಷ್ಟು ದುಷ್ಪಾರಿಣಾಮಗಳು ಬೀರುತ್ತಿವೆ. ಇದು ಆತಂಕಕಾರಿ ಬೆಳವಣಿಗೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಆತಂಕ ವ್ಯಕ್ತಪಡಿಸಿದರು.
ನಗರದ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಇಶಾ ಫೌಂಡೇಷನ್ ವತಿಯಿಂದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ‘ಮಣ್ಣು ಉಳಿಸಿ ಅಭಿಯಾನ ಜಾಗೃತಿ ಜಾಥಾ’ದಲ್ಲಿ ಮಾತನಾಡಿದರು.
ಆಹಾರ ಪದಾರ್ಥವನ್ನು ಹೆಚ್ಚು ಪ್ರಮಾಣದಲ್ಲಿ ಉತ್ಪಾದನೆ ಮಾಡಬೇಕೆಂಬ ದೃಷ್ಟಿಯಿಂದ ರಾಸಾಯನಿಕ ಅಂಶಗಳನ್ನು ಹೆಚ್ಚು ಬಳಸುತ್ತಿದ್ದೇವೆ. ಇದರಿಂದ ಮಣ್ಣಿನ ಫಲವತ್ತತೆಯನ್ನು ಕಲುಷಿತಗೊಳಿಸುತ್ತಿದ್ದೇವೆ. ನಾವು ಹಿಂದಿನ ಕೃಷಿ ಪದ್ಧತಿಗೆ ತೆರಳಬೇಕಾದ ಅನಿವಾರ್ಯ ಪರಿಸ್ಥಿತಿಗೆ ಬಂದು ನಿಂತಿದ್ದೇವೆ. ಮಣ್ಣು ಎನ್ನುವುದು ಒಂದು ಸರಕು ಅಲ್ಲ. ಮಣ್ಣಿಗೆ ಅದರದೇ ಆದ ಮಹತ್ವವಿದೆ. ಮಣ್ಣಿಗೆ ಎಂತಹದೇ ಬೀಜ ಹಾಕಿದರೂ ಮೊಳಕೆಯೊಡೆದು ಫಲ ಕೊಡುವ ಶಕ್ತಿ ಇದೆ. ಹಾಗಾಗಿ ಮಣ್ಣಿಗೆ ಒಂದು ಅಗೋಚರ ಶಕ್ತಿ ಎಂದರು
ಇಂತಹ ಮಹತ್ವವಿರುವ ಮಣ್ಣನ್ನು ನಾವು ಉಳಿಸದೆ ಇದ್ದರೆ, ಮುಂದಿನ ದಿನಗಳಲ್ಲಿ ಎಷ್ಟೇ ರಾಸಾಯನಿಕ ಗೊಬ್ಬರ ಹಾಕಿದರೂ, ಯಾವುದೇ ರೀತಿಯ ಹೊಸ ತಳಿಗಳನ್ನು ಹಾಕಿದರೂ, ವೈಜ್ಞಾನಿಕ ಕೃಷಿ ಸಂಶೋಧನೆ ನಡೆಸಿದರೂ ಆಹಾರ ಉತ್ಪಾದನೆ ಕುಸಿಯಬಹುದು. ಮಣ್ಣಿನ ಫಲವತ್ತತೆ ಕುಸಿಯುತ್ತಿರುವ ಸಂಬಂಧ ಈಗಾಗಲೇ ವಿಜ್ಞಾನಿಗಳು ವಿಶೇಷವಾಗಿ ಮಣ್ಣಿನ ತಜ್ಞರು ವಿಶೇಷ ತಿಳಿವಳಿಕೆ ನೀಡುತ್ತಿದ್ದಾರೆ. ಈ ಸಂಬಂಧ ಸಾಕಷ್ಟು ಸಂಶೋಧನೆಗಳು ಸಹ ನಡೆಯುತ್ತಿವೆ. ಯಾವುದೇ ಅಘಾತಕಾರಿ ಬೆಳವಣಿಗೆಗಳಿಗೆ ಅಸ್ಪದ ನೀಡದೆ ಮಣ್ಣಿನ ಸಂರಕ್ಷಣೆಗೆ ಮುಂದಾಗಬೇಕು. ಸಾವಯವ ಕೃಷಿ ಅಳವಡಿಸಿಕೊಂಡು ಮಣ್ಣಿನ ಫಲವತ್ತತೆ ಹೆಚ್ಚಿಸಬೇಕು ಎಂದರು.
ವಿಶ್ವದಲ್ಲಿ ಮಣ್ಣು ಸಂರಕ್ಷಣೆಗಾಗಿ ವಿಶೇಷ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದ ಮಣ್ಣು ಉಳಿಸಿ ಅಭಿಯಾನವನ್ನು ಆರಂಭಿಸುತ್ತಿದ್ದೇವೆ. ಯುವ ಜನಾಂಗ ಹಾಗೂ ರೈತಾಪಿ ಬಂಧುಗಳಿಗೆ ಮಣ್ಣಿನ ಫಲವತ್ತತೆ ಹಾಗೂ ಅದರ ಮಹತ್ವವನ್ನು ತಿಳಿಸಿಕೊಡಬೇಕಿದೆ ಎಂದು ಸಲಹೆ ನೀಡಿದರು.
ಕೃಷಿ ಬೆಳೆಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಬಳಕೆಯಿಂದ ಉತ್ಪಾದನೆಯಾಗುತ್ತಿರುವ ಆಹಾರ ಪದಾರ್ಥಗಳಿಂದ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. 250ಕ್ಕೂ ಹೆಚ್ಚು ಆಹಾರ ಉತ್ಪನ್ನವನ್ನು ನಾವು ಬೆಳೆಯುತ್ತಿದ್ದೇವೆ. ಎಲ್ಲ ಕಡೆ ರಾಸಾಯನಿಕ ಗೊಬ್ಬರ ಬಳಸುತ್ತಿದ್ದೇವೆ. ಭತ್ತ, ರಾಗಿ ಮೂಲಂಗಿ, ಕ್ಯಾರೆಟ್, ಹಣ್ಣು ಹೂವು ಬೆಳೆಯುವುದಕ್ಕೆ ರಾಸಾಯನಿಕ ಅಂಶಗಳನ್ನು ಹೆಚ್ಚಾಗಿ ಬಳಸುತ್ತಿದ್ದು, ಭೂಮಿ ತಾಯಿಯನ್ನು ಬಂಜರೂ ಭೂಮಿಯಾಗಿ ಮಾಡುತ್ತಿದ್ದೇವೆ. ಇದೇ ಪರಿಸ್ಥಿತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಆಘಾತಕಾರಿ ಬೆಳವಣಿಗೆಗಳನ್ನು ನೋಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ ಮಾತನಾಡಿ, ಮಣ್ಣು ಇಲ್ಲದೇ ಜೀವರಾಶಿ ಬದುಕಲು ಸಾಧ್ಯವಿಲ್ಲ. ಆಹಾರ ಎಲ್ಲಿಂದ ಬರುತ್ತದೆ ಎಂದು ಮೂಲ ಪ್ರಶ್ನೆಯನ್ನು ಹುಡುಕಿದಾಗ ಮಣ್ಣು ಮೂಲ ಎಂಬುದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ಕೃಷಿ, ಮಣ್ಣು ಹಾಗೂ ಮನುಷ್ಯನಿಗೂ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.
ಜಂಟಿ ಕೃಷಿ ನಿರ್ದೇಶಕ ವಿ.ಎಸ್.ಅಶೋಕ್, ಉಪ ಕೃಷಿ ನಿರ್ದೇಶಕಿ ಕೆ.ಮಾಲತಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಸೌಮ್ಯಶ್ರೀ, ಮಣ್ಣು ವಿಜ್ಞಾನಿ ಅಶೋಕ್, ಸುಜಾತಾ ಕೃಷ್ಣ, ಗೌತಮ್, ಮಹೇಶ್ ಚಂದ್ರಗುರು ಇತರರಿದ್ದರು. ಜಿಲ್ಲಾಧಿಕಾರಿ ಕಚೇರಿಯಿಂದ ಹೊರಟ ಜಾಗೃತಿ ಜಾಥಾ ನಗರದ ಪ್ರಮುಖ ರಸ್ತೆಗಳಲ್ಲಿ ನಡೆಯಿತು.