

ಮೈಸೂರು: ನಮ್ಮ ಪ್ರಕೃತಿ ಸಮತೋಲದಿಂದ ಕೂಡಿರಲು ಉರಗಗಳ (ಹಾವು) ಕೊಡುಗೆ ಅನನ್ಯವಾದದ್ದು. ಉರಗಗಳು ನಾಶವಾದರೆ ಪ್ರಕೃತಿ ಮೇಲೆ ಉಂಟಾಗುವ ದುಷ್ಪರಿಣಾಮ ಅಘಾದವಾದದ್ದು. ಹೀಗಾಗಿ ಉರಗಗಳ ಉಳಿವಿಗೆ ಪ್ರತಿಯೊಬ್ಬರು ಸಂಕಲ್ಪ ತೊಡಬೇಕು ಎಂಬ ಅಭಿಪ್ರಾಯ ‘ವಿಜಯವಾಣಿ’ ದೈನಿಕ ವಿಶ್ವ ಉರಗ ದಿನದ ಪ್ರಯುಕ್ತ ಹಮ್ಮಿಕೊಂಡ ಸಂವಾದದಲ್ಲಿ ವ್ಯಕ್ತವಾಯಿತು.
ಪ್ರಾಕೃತಿಕ, ಧಾರ್ಮಿಕ ಹಾಗೂ ವೈಜ್ಞಾನಿಕವಾಗಿಯೂ ಮನುಷ್ಯನಿಗೂ ಉರಗಗಳಿಗೂ ಅವಿನಾಭಾವ ನಂಟು ಇದೆ. ಆದರೆ, ಹಾವಿನ ಕುರಿತು ಜನರಲ್ಲಿ ತಪ್ಪು ಕಲ್ಪನೆಗಳೇ ಹೆಚ್ಚಿನ ಪ್ರಮಾಣದಲ್ಲಿ ಇವೆ. ಹಾವುಗಳ ಕುರಿತು ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನ ನಡೆಸಿರುವ ತಜ್ಞರು ‘ವಿಜಯವಾಣಿ’ ಸಂವಾದಲ್ಲಿ ಪಾಲ್ಗೊಂಡು ಹಾವುಗಳ ಕುರಿತು ಇರುವ ತಪ್ಪು ಕಲ್ಪನೆ ಹಾಗೂ ಅವುಗಳ ಸಂರಕ್ಷಣೆಯ ಅವಶ್ಯಕತೆ ಕುರಿತು ಬೆಳಕು ಚೆಲ್ಲಿದರು.
ಹಾವುಗಳನ್ನು ನಾವೇಕೆ ಸಂರಕ್ಷಿಸಬೇಕು?: ಹಾವುಗಳು ಇಲ್ಲದೆ ಹೋದರೆ ಮನುಷ್ಯ ಹಲವಾರು ಸಮಸ್ಯೆಗಳಿಗೆ ಗುರಿಯಾಗುತ್ತಾನೆ. ರೈತರು ಉತ್ಪಾದಿಸುವ ಆಹಾರವನ್ನು ದೊಡ್ಡ ಪ್ರಮಾಣದಲ್ಲಿ ಇಲಿಗಳು ನಾಶ ಮಾಡುತ್ತವೆ. ಒಂದು ಬಿಲದಲ್ಲಿ ಸಾಮಾನ್ಯವಾಗಿ ಒಂದು ಸೇರು ಭತ್ತ ದೊರೆಯುತ್ತದೆ. ಒಂದುವೇಳೆ ಹಾವುಗಳ ಕೊರತೆ ಎದುರಾದರೆ ಆಹಾರ ಇಲಿಗಳ ಪಾಲಾಗುತ್ತವೆ. ಇಲಿಗಳನ್ನು ಹದ್ದುಗಳು ಸಹ ಬೇಟೆಯಾಡುತ್ತವೆ. ಆದರೆ, ಬಿಲದೊಳಗೆ ನುಗ್ಗಿ ಬೇಟೆಯಾಡಲು ಹಾವುಗಳಿಗೆ ಮಾತ್ರ ಸಾಧ್ಯ. ಹಾವುಗಳು ಇಲ್ಲದೆ ಹೋದರೆ ಇಲಿಗಳು ಸಂತತಿ ಹೆಚ್ಚಾಗಿ ಪ್ರಕೃತಿಯಲ್ಲಿ ಏರುಪೇರು ಉಂಟಾಗುತ್ತದೆ. ಪ್ರಕೃತಿಯಲ್ಲಿ ಹಾವಿನ ಪಾತ್ರ ದೊಡ್ಡದ್ದು, ಹೀಗಾಗಿ ಹಾವುಗಳ ಸಂರಕ್ಷಣೆಯ ಹೊಣೆಯನ್ನು ಪ್ರತಿಯೊಬ್ಬರು ಹೊತ್ತುಕೊಳ್ಳಬೇಕು ಎನ್ನುತ್ತಾರೆ ಉರಗತಜ್ಞ ಸ್ನೇಕ್ ಶ್ಯಾಂ
ಹಾವುಗಳು ಹೆಚ್ಚಾಗಿ ಕಾಡಿನಲ್ಲಿ ವಾಸಿಸುವುದಿಲ್ಲ. ಜನ ವಸತಿ ಪ್ರದೇಶದ ಸುತ್ತಮುತ್ತಲಿನ ಪ್ರದೇಶವೇ ಅವುಗಳ ಆವಾಸಸ್ಥಾನ. ಜನವಸತಿ ಪ್ರದೇಶದ ಸುತ್ತಮುತ್ತ ಅವುಗಳಿಗೆ ಬೇಕಾದ ಆಹಾರ, ನೀರು, ವಾಸಯೋಗ್ಯ ವಾತಾವರಣ ದೊರೆಯುತ್ತದೆ. ಈ ಕಾರಣಕ್ಕೆ ಜನವಸತಿ ಪ್ರದೇಶಗಳಲ್ಲಿ ಹಾವುಗಳು ಕಂಡು ಬರುವುದು ಸಾಮಾನ್ಯ. ಹಾವುಗಳ ಕುರಿತು ಜನರಲ್ಲಿ ಸಾಕಷ್ಟು ತಪ್ಪು ತಿಳುವಳಿಕೆಗಳು ಇವೆ. ಅವುಗಳನ್ನು ಹೋಗಲಾಡಿಸಲು ಪ್ರಾಥಮಿಕ ಶಿಕ್ಷಣದಲ್ಲಿಯೇ ಮಕ್ಕಳಿಗೆ ಹಾವುಗಳ ಕುರಿತು ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದು ಅಭಿಪ್ರಾಯಪಟ್ಟರು.
ಮನುಷ್ಯರ ಜೀವ ಉಳಿಸುತ್ತವೆ ಉರಗಗಳು...!: ಹಾವುಗಳು ಮನುಷ್ಯರಿಗೆ ಕಚ್ಚುತ್ತದೆ, ಅದರಿಂದ ಸಾವು ಉಂಟಾಗುತ್ತದೆ ಎಂಬ ಭಯದ ಕಲ್ಪನೆ ಮಾತ್ರ ಹೆಚ್ಚಿನ ಜನರಲ್ಲಿ ಇದೆ. ಆದರೆ, ಹಾವುಗಳು ಮನುಷ್ಯರ ಜೀವ ಉಳಿವಿನಲ್ಲೂ ಪ್ರಮುಖ ಪಾತ್ರ ನಿರ್ವಹಿಸುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹಾವಿನ ವಿಷದಲ್ಲಿ ಶೇ.99 ರಷ್ಟು ಇರುವುದು ಪ್ರೊಟೀನ್ ಅಂಶಗಳು. ಇದರಲ್ಲಿ ವಿವಿಧ ಅಂಶಗಳನ್ನು ಬಳಕೆ ಮಾಡಿಕೊಂಡು ಔಷಧ ತಯಾರಿಸಲಾ ಗುತ್ತಿದೆ. ಈ ಔಷಧ ಹಲವಾರು ಜನರ ಜೀವವನ್ನು ಪ್ರತಿನಿತ್ಯ ಉಳಿಸುತ್ತಿದೆ ಎಂದು ಮೈಸೂರು ವಿಶ್ವ ವಿದ್ಯಾಲಯದ ಪ್ರಾಣಿವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ. ಎಸ್.ಎನ್. ಹೆಗಡೆ ಅಭಿಪ್ರಾಯಪಟ್ಟರು.
ಮನುಷ್ಯನ ಡಿಎನ್‌ಎ ಕಂಡು ಹಿಡಿಯಲು ಹಾವಿನ ವಿಷದ ಅಂಶ ಬಳಕೆ ಮಾಡಲಾಗುತ್ತಿದೆ. ಪಾರ್ಶ್ವವಾಯು, ಹೃದ್ರೋಗ ಸೇರಿದಂತೆ ಹಲವು ಕಾಯಿಲೆಗಳಿಗೆ ಹಾವಿನ ವಿಷದ ಅಂಶವನ್ನು ಬಳಸಿ ಔಷಧ ತಯಾರಿಸಲಾಗುತ್ತದೆ. ಆದರೆ, ಹಾವುಗಳಿಂದ ಮನುಷ್ಯರಿಗೆ ಆಗುತ್ತಿರುವ ಪ್ರಯೋಜನಕ್ಕಿಂತ ಹಾವು ಕಚ್ಚಿದ ಸುದ್ದಿಗಳೇ ಹೆಚ್ಚಾಗಿ ಬಿಂಬಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಹುತೇಕ ಹಾವುಗಳು ವಿಷಕಾರಿಯಲ್ಲ: ಉರಗಗಳ ಬಗ್ಗೆ ಇರುವಷ್ಟು ತಪ್ಪು ಕಲ್ಪನೆಗಳು ಬೇರೆ ಯಾವುದೇ ಜೀವಿಗಳ ಮೇಲೆ ಇಲ್ಲ. ಮೂರು ಸಾವಿರಕ್ಕೂ ಹೆಚ್ಚು ಪ್ರಬೇಧದ ಹಾವುಗಳು ಇವೆ. ಆ ಪೈಕಿ ಶೇ.8 ರಷ್ಟು ಹಾವುಗಳು ಮಾತ್ರ ವಿಷಕಾರಿ. ಆದರೆ, ಎಲ್ಲರು ಹಾವು ಕಂಡರೆ ಭಯಗೊಂಡು ಅದನ್ನು ಕೊಲ್ಲುವ ಪ್ರಯತ್ನ ಮಾಡುತ್ತಾರೆ. ಜೀವ ಪ್ರಪಂಚದಲ್ಲಿ ಬೇರೆ ಜೀವಿಗಳ ಹಾಗೆ ಹಾವು ಕೂಡ ಒಂದು. ಆದರೆ, ಹಾವಿನ ಬಗ್ಗೆ ಇರುವಷ್ಟು ಭಯ, ತಪ್ಪು ಕಲ್ಪನೆಗಳು ಬೇರೆ ಜೀವಿಗಳ ಮೇಲೆ ಇಲ್ಲ. ಇದಕ್ಕೆ ಅದರ ಆಕಾರ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.
ಉರಗಗಳ ಉಳಿವಿಗೆ ಧರ್ಮದ ಕೊಡುಗೆ..!
ಹಿಂದೂ ಧರ್ಮದಲ್ಲಿ ಹಾವುಗಳಿಗೆ ಪೂಜ್ಯನೀಯ ಸ್ಥಾನವಿದೆ. ವೇದಗಳಲ್ಲೇ ಹಾವುಗಳ ಮಹತ್ವ ತಿಳಿಸಲಾಗಿದೆ. ಹಾವುಗಳ ಉಳಿವಿನಲ್ಲಿ ಧರ್ಮದ ಕೊಡುಗೆಯೂ ಮಹತ್ತರವಾದದ್ದು ಎಂದು ಆದಿಚುಂಚನಗಿರಿ ಕಾಲಭೈರವೇಶ್ವರ ಸಂಸ್ಕೃತ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಕೆ. ಮನೋಹರ ದೀಕ್ಷಿತ್ ಅಭಿಪ್ರಾಯಪಟ್ಟರು.
ಹಾವುಗಳನ್ನು ಹತ್ಯೆ ಮಾಡಿದರೆ ದೋಷ ಉಂಟಾಗುತ್ತದೆ ಎಂಬ ಅಂಶ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿದೆ. ಹಾವಿನ ಕುರಿತು ಇರುವ ಭಯ ಹಾಗೂ ಧಾರ್ಮಿಕ ನಂಬಿಕೆಯ ಕಾರಣಗಳಿಂದ ಹಾವುಗಳು ನಮ್ಮ ನಡುವೆ ಇಂದಿಗೂ ಉಳಿದಿವೆ. ಹಾವುಗಳ ಸಂರಕ್ಷಣೆಗೋಸ್ಕರ ನಾಗಬನಗಳನ್ನು ಪೂರ್ವಜನರು ನಿರ್ಮಾಣ ಮಾಡಿದರು. ಹಾವುಗಳನ್ನು ಪೂಜ್ಯನೀಯ ಭಾವದಲ್ಲಿ ಕಂಡು ಆಚರಿಸುವ ಅನೇಕ ಆಚರಣೆಗಳು ಇವೆ. ಇವೆಲ್ಲವೂ ಹಾವಿನ ಉಳಿವಿಗೆ ಧರ್ಮದ ಕೊಡುಗೆಯಾಗಿದೆ.
ಸರ್ಪದೋಷ ನಿವಾರಣೆ ಹೇಗೆ?: ಹಾವುಗಳಿಗೆ ಯಾವುದೇ ರೀತಿಯ ತೊಂದರೆ ಮಾಡಿದರೆ ಸರ್ಪದೋಷ ಕಾಣಿಸಿಕೊಳ್ಳುತ್ತದೆ. ಹಾವುಗಳಿಗೆ ನಾವು ತೊಂದರೆ ಮಾಡದೆ ಇದ್ದರೂ ನಮ್ಮ ಪೂರ್ವಜರು ತೊಂದರೆ ಮಾಡಿದ್ದರೆ ಸರ್ಪದೋಷ ನಮಗೆ ಕಾಣಿಸಿಕೊಳ್ಳುತ್ತದೆ. ಸರ್ಪದೋಷ ನಿವಾರಣೆಗೆ ನಾಗಾರಾಧನೆಯ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮ ಣ್ಯ, ಘಾಟಿ ಸುಬ್ರಹ್ಮಣ್ಯ ಹಾಗೂ ರಾಮನಾಥಪುರ ಸುಬ್ರಹ್ಮಣ್ಯ ದೇವಸ್ಥಾನ ಪ್ರಮುಖವಾಗಿವೆ. ಈ ಮೂರು ದೇವಾಲಯಗಳು ಮಾತ್ರವಲ್ಲದೆ ನಾಗಾರಾಧನೆಯ ವಿವಿಧ ಕ್ಷೇತ್ರಗಳಲ್ಲೂ ಸರ್ಪ ದೋಷಕ್ಕೆ ಪರಿಹಾರ ಮಾಡಿಕೊಳ್ಳಬಹುದು. ಸರ್ಪದೋಷದಿಂದ ವಿವಾಹಕ್ಕೆ ತೊಡಕು ಉಂಟಾಗುವುದು, ಮಕ್ಕಳಾಗದೆ ಇರುವ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಂಥವರು ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರೆ ಫಲ ದೊರೆಯುತ್ತದೆ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಪುಂಗಿ ಶಬ್ದಕ್ಕೆ ಹಾವು ತಲೆದೂಗುವುದಿಲ್ಲ: ಹಾವಾಡಿಗನ ಪುಂಗಿ ಶಬ್ದಕ್ಕೆ ಹಾವು ತಲೆದೂಗುತ್ತದೆ ಎಂದು ಬಹುತೇಕರು ನಂಬಿದ್ದಾರೆ. ಆದರೆ, ವಾಸ್ತವವಾಗಿ ಹಾವಿಗೆ ಹೊರ ಕಿವಿ ಇಲ್ಲ, ಒಳಕಿವಿ ಮಾತ್ರ ಇದೆ. ಹಾಗಾಗಿ ಅದಕ್ಕೆ ಪುಂಗಿ ಶಬ್ದ ಕೇಳಿಸುವುದಿಲ್ಲ. ಜೀವಕ್ಕೆ ಅಪಾಯ ಎದುರಾಗುವ ಭೀತಿಯಿಂದ ಹಾವು ತನ್ನ ಎದುರು ಇರುವ ಶತ್ರುವಿನ ಚಲನವಲನಕ್ಕೆ ತಕ್ಕಂತೆ ತಾನು ಚಲಿಸುತ್ತದೆ. ಹಾವಾಡಿಗ ಪುಂಗಿಯನ್ನು ಯಾವ ದಿಕ್ಕಿಗೆ ತಿರುಗಿಸುತ್ತಾನೋ ಅತ್ತ ಹಾವು ತಿರುಗುತ್ತದೆ ಅಷ್ಟೆ. ಹಾವುಗಳ ಕಣ್ಣಿನ ದೃಷ್ಟಿಯೂ ಸಹ ಮಂದ. ಹಾವುಗಳ ಸಂವೇದನ ಅಂಗ ಅದರ ಸೀಳು ನಾಲಗೆ ಮಾತ್ರ. ಸೀಳು ನಾಲಗೆಯ ಮೂಲಕವೇ ಅದು ತನ್ನ ಸುತ್ತ ಇರುವ ಜೀವಿಗಳ ವಾಸನೆ ಹಾಗೂ ಉಷ್ಣಾಂಶವನ್ನು ಗ್ರಹಿಸಿ ಬೇಟೆಯಾಡುತ್ತವೆ ಎಂದು ಮೈಸೂರು ವಿಶ್ವ ವಿದ್ಯಾಲಯದ ಪ್ರಾಣಿವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ.ಎಸ್.ಎನ್. ಹೆಗಡೆ ಅಭಿಪ್ರಾಯಪಟ್ಟರು.
ಹಾವು ಕಚ್ಚಿದ ತಕ್ಷಣ ಏನು ಮಾಡಬೇಕು?
ಹಾವು ಕಚ್ಚಿದ ತಕ್ಷಣ ಆತಂಕಕ್ಕೆ ಒಳಗಾಗುವರ ಸಂಖ್ಯೆಯೇ ಹೆಚ್ಚು. ಈ ಆತಂಕದಿಂದಲೇ ಸಾಕಷ್ಟು ಜನರು ತಮ್ಮ ಪ್ರಾಣ ಕಳೆದುಕೊ ಳ್ಳುತ್ತಾರೆ. ಹಾವು ಕಚ್ಚಿದ ತಕ್ಷಣ ಸಾವು ಸಂಭವಿಸುವುದಿಲ್ಲ. ಹಾವು ಕಡಿತದಿಂದ ಶೇ.10 ಜನರು ಮಾತ್ರ ಪ್ರಾಣ ಕಳೆದುಕೊಳ್ಳುತ್ತಾರೆ. ಹೀಗಾಗಿ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಯನ್ನು ಆದಷ್ಟು ಬೇಗ ಆಸ್ಪತ್ರೆಗೆ ತಲುಪಿಸಿದರೆ ಜೀವ ಉಳಿಸಬಹುದು ಎಂದು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ರಂಜನ್ ತಿಳಿಸಿದರು.
ಯಾವ ಯಾವು ಕಚ್ಚಿದೆ ಎಂದು ತಿಳಿದುಕೊಂಡರೆ ಉತ್ತಮ. ಇಲ್ಲವಾದರೆ ಆಸ್ಪತ್ರೆಯಲ್ಲಿ ರೋಗಿಗೆ ತೋರಿಸುವ ಹಾವುಗಳ ಚಿತ್ರಗಳನ್ನು ನೋಡಿ ಗುರುತು ಹಿಡಿದರೂ ಸಾಕು. ಅದು ಕೂಡ ಸಾಧ್ಯವಾಗದೆ ಇದ್ದರೆ ಹಾವು ಕಡಿತಕ್ಕೊಳಗಾದ ವ್ಯಕ್ತಿಯ ದೇಹದಲ್ಲಿ ಆದ ಬದಲಾವಣೆಗಳನ್ನು ಗುರುತಿಸಿ ಯಾವ ಹಾವು ಕಚ್ಚಿದೆ ಎಂದು ಪತ್ತೆ ಹಚ್ಚಿ ಚಿಕಿತ್ಸೆ ನೀಡಬಹುದು. ಯಾರು ಕಚ್ಚಿದ ಹಾವನ್ನು ಕೊಂದು ಅದನ್ನು ಆಸ್ಪತ್ರೆಗೆ ತರಬಾರದು. ಹಾವು ಕಡಿತಕ್ಕೆ ಒಳಗಾಗಿ 3 ಗಂಟೆಯ ಒಳಗೆ ಆಸ್ಪತ್ರೆಗೆ ಬಂದರೆ ಜೀವ ಉಳಿಸಬಹುದು. 3 ಗಂಟೆಯ ನಂತರ ಕೂಡ ಬಂದರೂ ಜೀವ ಉಳಿಸಬಹುದು. ಆದರೆ, ರೋಗಿಯ ಪರಿಸ್ಥಿತಿ ಬಿಗಡಾಯಿಸಿರುತ್ತದೆ. ಹಾಗಾಗಿ ಆದಷ್ಟು ಬೇಗ ಆಸ್ಪತ್ರೆಗೆ ಸೇರಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.
ಸಾಮಾನ್ಯವಾಗಿ ಹಾವುಗಳು ಹೆಚ್ಚಾಗಿ ಕೈ ಅಥವಾ ಕಾಲಿನ ಭಾಗಕ್ಕೆ ಕಚ್ಚುತ್ತವೆ. ಕಚ್ಚಿದ ಭಾಗವನ್ನು ಶುಚಿಗೊಳಿಸುವ, ಐಸ್‌ಕ್ಯೂಬ್‌ನಿಂದ ಮಸಾಜ್ ಮಾಡುವ ಕೆಲಸ ಮಾಡಬೇಡಿ. ಅದೇ ರೀತಿ ವಿಷ ಹೊರ ತೆಗೆಯಲು ರಕ್ತವನ್ನು ಹೀರುವ ಕೆಲಸ ಮಾಡಲೇ ಬೇಡಿ. ಕಚ್ಚಿದ ಭಾಗವನ್ನು ದಾರದಿಂದ ಬಿಗಿಯಾಗಿ ಕಟ್ಟಬೇಡಿ. ಕಚ್ಚಿದ ಕಾಲು ಅಥವಾ ಕೈ ಮೇಲೆ ಒಂದು ಪಟ್ಟಿ (ಸಮತಟ್ಟಾದ ಕೋಲು) ಇಟ್ಟು ಅದರ ಮೇಲೆ ಬಟ್ಟೆ ಅಥಾವ ದಾರದಿಂದ ಸುತ್ತಿ, ಅದು ಸಹ ಬಿಗಿಯಾಗಿ ಸುತ್ತಬೇಡಿ. ಕಚ್ಚಿದ ಭಾಗ ಅಲುಗಾಡದಂತೆ ನೋಡಿಕೊಂಡರೆ ಸಾಕು. ಅಲುಗಾಡಿದಷ್ಟು ವಿಷ ಹರಡುವ ತೀವ್ರತೆ ಹೆಚ್ಚಿರುತ್ತದೆ. ಹಾವು ಕಚ್ಚಿದ ಭಾಗವನ್ನು ಬಿಗಿಯಾಗಿ ಕಟ್ಟಿದರೆ ರಕ್ತ ಸಂಚಲನ ನಿಂತು ಕಾಲು ಊದಿಕೊಂಡು ಮತ್ತೊಂದು ಸಮಸ್ಯೆಗೆ ಕಾರಣವಾಗುತ್ತದೆ. ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೇರಿದಂತೆ ಹಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಹಾವು ಕಡಿತಕ್ಕೆ ಔಷಧ ಲಭ್ಯವಿದೆ. ಯಾರೇ ಆದರೂ ಹಾವು ಕಡಿತಕ್ಕೆ ಒಳಗಾದಾಗ ನಿರ್ಲಕ್ಷೃ ಮಾಡಬಾರದು. ನಾಟಿ ಔಷಧದ ಮೊರೆ ಹೋಗಬೇಡಿ ಎಂದು ಸಲಹೆ ನೀಡಿದರು.
ನಾಗಮಣಿ ಎಂಬುದೆಲ್ಲ ಸುಳ್ಳು: ನಾಗರ ಹಾವಿನಲ್ಲಿ ನಾಗಮಣಿ ಇರುತ್ತದೆ ಎಂಬ ನಂಬಿಕೆ ಇದೆ. ಆದರೆ, ಇದು ಶುದ್ಧ ಸುಳ್ಳು. ಈ ರೀತಿಯ ಸುಳ್ಳುಗಳನ್ನು ಹೇಳಿ ಜನರನ್ನು ಮೋಸ ಮಾಡಲಾಗುತ್ತಿದೆ. ಯಾರು ಸಹ ಇಂಥ ಮೋಸಕ್ಕೆ ಒಳಗಾಬಾರದು. ನಾಗಮಣಿ ಹೆಸರಿನಲ್ಲಿ ಯಾರು ಸಹ ಹಾವುಗಳನ್ನು ಹತ್ಯೆ ಮಾಡುವ ಕಾರ್ಯಕ್ಕೆ ಮುಂದಾಗಬೇಡಿ ಎಂಬುದು ಡಾ.ಎಸ್.ಎನ್. ಹೆಗಡೆ ಅವರ ಸಲಹೆ
ಹಾವು ಸಂರಕ್ಷಕರ ಬಗ್ಗೆ ಇರಲಿ ಕಾಳಜಿ
ಇತ್ತೀಚೆಗೆ ಹಾವಿನ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಲು ಹಾವು ಸಂರಕ್ಷಕರ ಪಾತ್ರ ಪ್ರಮುಖವಾದದ್ದು. ಆದರೆ, ಸಾಕಷ್ಟು ಜನರು ನಮ್ಮ ಮನೆಯಲ್ಲಿ ಹಾವು ಸೇರಿಕೊಂಡಿದೆ ಎಂದು ಕರೆ ಮಾಡುತ್ತಾರೆ. ಕೆಲಸ ಮುಗಿದ ಮೇಲೆ ನಮ್ಮನ್ನು ಅಗೌರವದಿಂದ ನಡೆಸಿಕೊಳ್ಳುತ್ತಾರೆ. ನಾವು ಜೀವ ಒತ್ತೆ ಇಟ್ಟು ಹಾವುಗಳ ಸಂರಕ್ಷಣೆ ಮಾಡುತ್ತೇವೆ. ನಮಗೆ ಸರ್ಕಾರದಿಂದ ಯಾವುದೇ ನೆರವು ದೊರೆಯುವುದಿಲ್ಲ. ಕೇರಳದ ಉರಗತಜ್ಞ ವಾವಾ ಸುರೇಶ್ ಹಾವು ಕಡಿತಕ್ಕೆ ಒಳಗಾದಾಗ ಇಡೀ ರಾಜ್ಯದ ಜನರು ಅವರ ಬೆಂಬಲಕ್ಕೆ ನಿಂತರು. ಅದೇ ರೀತಿಯ ಬೆಂಬಲ ನಮ್ಮ ಜನತೆಯಿಂದ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಉರಗತಜ್ಞ ಸ್ನೇಕ್ ಶ್ಯಾಂ ಹೇಳಿದರು.
ಯುಟ್ಯೂಬ್ ನೋಡಿ ಹಾವು ಹಿಡಿಯಬೇಡಿ: ಸಾಕಷ್ಟು ಜನರು ಇತ್ತೀಚೆಗೆ ಯುಟ್ಯೂಬ್, ಫೇಸ್‌ಬುಕ್‌ನಲ್ಲಿ ಬರುವ ಹಾವು ಸೆರೆ ಹಿಡಿಯುವ ವಿಡಿಯೋಗಳನ್ನು ನೋಡಿ ಹಾವು ಸೆರೆ ಹಿಡಿಯುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇಂಥದೊಂದು ಪ್ರಯತ್ನಕ್ಕೆ ಕೈ ಹಾಕಬೇಡಿ. ತರಬೇತಿ ಇಲ್ಲದೆ ಹಾವುಗಳನ್ನು ಸೆರೆ ಹಿಡಿಯಬಾರದು. ಇದಕ್ಕೆ ಉರಗತಜ್ಞರಿಂದ ತರಬೇತಿ ಪಡೆಯುವುದು ಉತ್ತಮ. ಏಕೆಂದರೆ ಸಾಕಷ್ಟು ಜನರಿಗೆ ಯಾವುದು ವಿಷ ಹಾಗೂ ವಿಷ ರಹಿತ ಹಾವು ಮತ್ತು ಅವುಗಳ ಆಕ್ರಮಣಶೀಲ ಗುಣಗಳ ಕುರಿತು ತಿಳಿವಳಿಕೆ ಇರುವುದಿಲ್ಲ. ಹೀಗಾಗಿ ವಿಡಿಯೋ ನೋಡಿ ಹಾವು ಹಿಡಿಯುವ ಪ್ರಯತ್ನ ಮಾಡಬೇಡಿ ಎಂಬುದು ಉರಗತಜ್ಞ ಸ್ನೇಕ್ ಶ್ಯಾಂ ಅವರ ಸಲಹೆ
ನಿರ್ವಹಣೆ: ಎಂ.ಆರ್. ಸತ್ಯನಾರಾಯಣ, ಸದೇಶ್ ಕಾರ್ಮಾಡ್. ಚಿತ್ರಗಳು: ಕೆ.ಎಚ್.ಚಂದ್ರು