

ಮಂಡ್ಯ: ಕಣ್ಣು ದೇಹದ ಪ್ರಮುಖ ಅಂಗವಾಗಿದ್ದು, ಇದರ ಬಗ್ಗೆ ಅಗತ್ಯ ಎಚ್ಚರ ವಹಿಸಬೇಕು. ಅಂತೆಯೇ 40 ವಯಸ್ಸಿನ ನಂತರ ಎಲ್ಲರೂ ವರ್ಷಕ್ಕೊಮ್ಮೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಮಿಮ್ಸ್‌ನ ನೇತ್ರ ತಜ್ಞ ಡಾ.ಧನಂಜಯ ಸಲಹೆ ನೀಡಿದರು.
ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾರಾಗೃಹ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ವಿಭಾಗ, ಮಿಮ್ಸ್‌ನ ಕಣ್ಣಿನ ವಿಭಾಗ, ಜಿಲ್ಲಾ ಕಾನೂನುಗಳ ಸೇವಾ ಪ್ರಾಧಿಕಾರ, ರೋಟರಿ ಸಂಸ್ಥೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ದೃಷ್ಟಿ ದಿನಾಚರಣೆಯಲ್ಲಿ ಮಾತನಾಡಿದರು.
ಮಧುಮೇಹ ಸಮಸ್ಯೆಯಿಂದ ಬಳಲುತ್ತಿದ್ದರೆ 6 ತಿಂಗಳಿಗೊಮ್ಮೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಪಟಾಕಿ ಇನ್ನಿತರ ವಸ್ತುಗಳಿಂದ ತೊಂದರೆಗೀಡಾದರೆ ತಕ್ಷಣವೇ ತಣ್ಣೀರಿನಿಂದ ಕಣ್ಣನ್ನು ತೊಳೆದುಕೊಂಡು ನಂತರ ಹತ್ತಿರವಿರುವ ಆಸ್ಪತ್ರೆಗೆ ಭೇಟಿ ನೀಡಿ ಅಗತ್ಯ ಚಿಕಿತ್ಸೆ ಪಡೆಯಿರಿ ಎಂದು ಹೇಳಿದರು.
ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಡಾ.ಎಂ.ಸಿ.ಸೋಮಶೇಖರ್ ಮಾತನಾಡಿ, ಕಣ್ಣುಗಳಿಗೆ ಯಾವುದೇ ರೀತಿ ಸಮಸ್ಯೆ ಕಂಡು ಬಂದಾಗ ತಕ್ಷಣವೇ ಹತ್ತಿರದ ತಜ್ಞ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆಯಬೇಕು. ಎಲ್ಲರೂ ತಮ್ಮ ಕಣ್ಣಿನ ಆರೋಗ್ಯದ ಬಗ್ಗೆ ಗಮನಹರಿಸುವುದರ ಜತೆಗೆ ಭವಿಷ್ಯದಲ್ಲಿ ಮತ್ತೊಬ್ಬರಿಗೆ ಅನುಕೂಲವಾಗುವಂತೆ ನೇತ್ರದಾನ ಮಾಡಿ ಎಂದು ಕರೆ ನೀಡಿದರು .
ಅಧ್ಯಕ್ಷತೆ ವಹಿಸಿದ್ದ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್ ಮಾತನಾಡಿ, ಕಾರಾಗೃಹ ನಿವಾಸಿಗಳ ಅನುಕೂಲಕ್ಕಾಗಿ ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ನಿರಂತರವಾಗಿ ವಿವಿಧ ಆರೋಗ್ಯ ಶಿಬಿರಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆ ಇಡೀ ರಾಜ್ಯದಲ್ಲಿಯೇ ಮಾದರಿಯಾಗಿದೆ ಎಂದರು.
ವಕೀಲ ಬಿ.ಕೆ.ಗಣಪತಿ ಮಾತನಾಡಿದರು. ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರದ ಪ್ರಾಂಶುಪಾಲೆ ಡಾ.ಎಚ್.ಎಂ.ಮಮತಾ, ತಾಲೂಕು ಆರೋಗ್ಯಾಧಿಕಾರಿ ಡಾ.ಜವರೇಗೌಡ, ಮಿಮ್ಸ್‌ನ ಕಣ್ಣಿನ ವಿಭಾಗದ ಮುಖ್ಯಸ್ಥ ಡಾ.ಟಿ.ವಿ.ಪ್ರದೀಪ್, ಡಾ.ಪ್ರಾರ್ಥನಾ, ಡಾ.ಶ್ರೇಯಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್, ಜಿಲ್ಲಾ ಸಲಹೆಗಾರ ತಿಮ್ಮರಾಜು, ರೋಟರಿ ಅಧ್ಯಕ್ಷೆ ಬಿ.ಎಸ್.ಅನುಪಮಾ, ರಾಜೇಶ್, ಲಕ್ಕಪ್ಪಗೌಡ ಇತರರಿದ್ದರು.