ಹಿರಿಯರನ್ನು ಗೌರವಿಸುವುದು ಭಾರತದ ಸಂಸ್ಕೃತಿ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

World Senior Citizens Day Mandya
Published on

ಮಂಡ್ಯ: ಹಿರಿಯರನ್ನು ಗೌರವಿಸುವುದು ಭಾರತದ ಸಂಸ್ಕೃತಿ ಮತ್ತು ಪರಂಪರೆ. ಪ್ರಸ್ತುತ ಆಧುನಿಕ ಸಮಾಜದ ಯುವ ಪೀಳಿಗೆಗಳು ಹಿರಿಯರನ್ನು ಗೌರವಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ನಗರದ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆಯುಷ್ ಇಲಾಖೆ, ಅಲಿಂಕೋ ಸಂಸ್ಥೆ ಹಾಗೂ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ ದುಡಿಯುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮತ್ತು ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೃದ್ಧಾಶ್ರಮಗಳು ರಾಜ್ಯದಲ್ಲಿ ಹೆಚ್ಚಾದರೆ ಅದು ರಾಜ್ಯದ ಹೆಮ್ಮೆಯ ವಿಷಯವಾಗುವುದಿಲ್ಲ. ಮಕ್ಕಳನ್ನು ಲಾಲಿಸಿ, ಪಾಲಿಸಿ, ಪೋಶಿಸಿ, ವಿದ್ಯಾವಂತರನ್ನಾಗಿಸಿ, ಸಲಹಿ, ಬೆಳೆಸಿದ ತಂದೆ ತಾಯಿಯನ್ನು ವೃದ್ಧಾಶ್ರಮಕ್ಕೆ ಸೇರಿಸುವುದು ಜಿಲ್ಲೆಯಲ್ಲಿ ನಿಲ್ಲಬೇಕು ಎಂದು ಕರೆ ನೀಡಿದರು.

ಹಿರಿಯ ಜೀವಿಗಳು ಸಮಾಜದ ಅಭಿವೃದ್ಧಿಗಾಗಿ ಎಲ್ಲ ಆಯಾಮಗಳಿಂದಲೂ ಶ್ರಮಿಸಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಸಮಾಜದ ವ್ಯವಸ್ಥೆ ಸಮತೋಲನವಾಗಿರಲು ಮತ್ತು ಅಭಿವೃದ್ಧಿ ಹೊಂದಲು ಯುವ ಶಕ್ತಿಯ ಜತೆಗೆ ಹಿರಿಯರ ಮಾರ್ಗದರ್ಶನ ಬಹಳ ಮುಖ್ಯ. ಯುವ ಪೀಳಿಗೆಗಳು ಹಿರಿಯ ಮಾರ್ಗದರ್ಶನಗಳನ್ನು ಪಾಲಿಸಿ. ಹಿರಿಯ ನಾಗರಿಕರು ವಯಸ್ಸಾಗಿದೆ ಎಂದು ಮಾನಸಿಕವಾಗಿ ಭಾವಿಸದೆ ಆತ್ಮ ವಿಶ್ವಾಸದಿಂದ ಆರೋಗ್ಯಕರವಾದ ಜೀವನ ನಡೆಸಿ ಮತ್ತು ಜಿಲ್ಲೆಯಲ್ಲಿನ ಪ್ರತಿ ಕುಟುಂಬಗಳು ಹಿರಿಯರನ್ನು ಗೌರವಿಸಿ, ಪಾಲಿಸಿ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ಹಿರಿಯರನ್ನು ಗೌರವಿಸುವಲ್ಲಿ ಹಾಗೂ ಮಕ್ಕಳನ್ನು ಪೋಷಿಸುವವಲ್ಲಿ ಭಾರತ ದೇಶದ ಪರಂಪರೆ, ಸಂಸ್ಕೃತಿ ಮಹತ್ವವಾದ್ದಾಗಿದೆ. ಆದರೆ, ಪ್ರಸ್ತುತ ಯಾಂತ್ರಿಕೃತ ಯುಗದಲ್ಲಿ ಸಂಸ್ಕೃತಿ, ಪರಂಪರೆ, ಮೌಲ್ಯಗಳನ್ನು ಸಮಾಜ ಮರೆಯುತ್ತಿದೆ. ಯುವ ಜನತೆ ಜೀವನದಲ್ಲಿ ಏನ್ನನೇ ಸಾಧಿಸಿದರು ಹಿರಿಯರನ್ನು ಗೌರವಿಸದಿದ್ದರೆ ಅವರ ಸಾಧನೆಗೆ ಅರ್ಥವಿರುವುದಿಲ್ಲ. ಹಿರಿಯರ ಮಾರ್ಗದರ್ಶನ ಮತ್ತು ಅವರ ನುಡಿಗಳು ಕಿರಿಯರಿಗೆ ಆಸ್ತಿ ಇದ್ದಂತೆ. ಯುವ ಜನತೆ ಬದುಕಿನ ಮೌಲ್ಯ, ಸಂಸ್ಕೃತಿ ಮತ್ತು ಸಂಸ್ಕಾರ ಅರಿಯಲು ಹಿರಿಯರನ್ನು ಪಾಲಿಸಿ ಎಂದು ತಿಳಿ ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆನಂದ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಗಂಗಾಧರಸ್ವಾಮಿ, ಜ್ಞಾನ ಸಿಂಧು ವೃದ್ಧಾಶ್ರಮ ಮುಖ್ಯಸ್ಥ ವಿಜಯಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಆಶಾ ಇತರರಿದ್ದರು. ಇದೇ ವೇಳೆ ವಿಶೇಷ ಚೇತನರಿಗೆ ಸಲಕರಣೆ ವಿತರಿಸಲಾಯಿತು. ಜಿಲ್ಲೆಯ ಹಿರಿಯ ನಿವೃತ್ತ ಯೋಧರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net