ಹಿರಿಯ ನಾಗರಿಕರು ಅನುಭವದ ಕಣಜಗಳು

citizen
Published on

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಹಿರಿಯ ನಾಗರಿಕರು ಅನುಭವಗಳು ಕಣಜಗಳಿದ್ದಂತೆ ಅವರ ಜತೆ ಸಮಯ ಕಳೆಯಿರಿ ಅವರ ಆರೋಗ್ಯಕ್ಕೆ ಭದ್ರತೆ ಕೊಡಿ ಎಂದು ಅಪರ ಜಿಲ್ಲಾಧಿಕಾರಿ ಸೈಯಿದಾ ಆಯೇಷಾ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ದೇವನಹಳ್ಳಿ ತಾಲೂಕು ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಮಾತನಾಡಿದರು. ಹಿರಿಯರ ತ್ಯಾಗ ಪರಿಶ್ರಮದಿಂದ ಇಂದು ನಾವೆಲ್ಲರೂ ಸುಖ-ಸೌಕರ್ಯವನ್ನು ಅನುಭವಿಸುತ್ತಿದ್ದೇವೆ ಹಿರಿಯ ನಾಗರಿಕರನ್ನು ಪ್ರೀತಿಸಿ, ಗೌರವಿಸಿ ಅವರ ಆಶೀರ್ವಾದವನ್ನು ಪಡೆದು ಸಂತೋಷದ ವಾತಾವರಣ ನಿರ್ಮಿಸೋಣ ಎಂದು ಕರೆ ನೀಡಿದರು.

ಬದುಕಿಗೆ ದಾರಿ ತೋರುವ ದೀಪ: ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಎಂದರೆ ಹಿರಿಯರ ತ್ಯಾಗ ಸೇವೆ, ಜ್ಞಾನವನ್ನು ನೆನಪಿಸುವ ಮಹತ್ತರ ದಿನವಾಗಿದೆ. ಹಿರಿಯರು ನಮ್ಮ ಭೂತಕಾಲದ ನೆನಪುಗಳು ವರ್ತಮಾನದ ಆಸ್ತಿಗಳು ಮತ್ತು ಭವಿಷ್ಯದ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು. ಅವರು ನಮ್ಮ ಸಮಾಜದ ಬೆನ್ನೆಲುಬು ತಮ್ಮ ಜೀವನವನ್ನು ಕುಟುಂಬ,ಸಮಾಜ ಮತ್ತು ದೇಶದ ಅಭಿವೃದ್ಧಿಗೆ ಅರ್ಪಿಸಿದ್ದಾರೆ. ಹಿರಿಯರು ಸಂಸ್ಕೃತಿಯ ಸಾಗರ ಅನುಭವದ ವಿಶ್ವಕೋಶ. ಅವರ ಆಶೀರ್ವಾದವಿಲ್ಲದೆ ಯಾವ ಕುಟುಂಬ ಸಮೃದ್ಧಿ ಹೊಂದಲು ಸಾಧ್ಯವಿಲ್ಲ. ನಾವು ಹಿರಿಯರನ್ನು ಕೇವಲ ಕುಟುಂಬದ ಸದಸ್ಯರಾಗಿ ಕಾಣಬಾರದು ಅವರನ್ನು ಜ್ಞಾನಿಗಳಾಗಿ ಮಾರ್ಗದರ್ಶಕರಾಗಿ ಕಾಣಬೇಕು. ಅವರ ಪ್ರೀತಿ ಸಲಹೆ ಮಾರ್ಗದರ್ಶನಗಳು ನಮ್ಮ ಬದುಕಿಗೆ ದಾರಿ ತೋರುವ ದೀಪಗಳು ಎಂದು ಎಡಿಸಿ ಹೇಳಿದರು.

ಹಿರಿಯರಿಗೆ ಊರುಗೋಲು: ಜಿಲ್ಲೆಯಲ್ಲಿ 1,12,236 ಜನ ಹಿರಿಯ ನಾಗರಿಕರು ಪಿಂಚಣಿ ತೆಗೆದುಕೊಳ್ಳುತ್ತಿದ್ದಾರೆ. ಹಿರಿಯ ನಾಗರಿಕರು ಓಡಾಡುವಾಗ ಕೆಲ ಸಂದರ್ಭದಲ್ಲಿ ಬಿದ್ದು ಪ್ರಾಣ ಹಾನಿಗಳಾಗಿವೆ ಕೆಲವರು ಕೈ ಕಾಲುಗಳನ್ನು ಕಳೆದು ಕೊಂಡಿದ್ದಾರೆ ಹೀಗೆ ಹಲವು ರೀತಿ ಅನಾಹುತಗಳು ಆಗಿವೆ, ಅದಕ್ಕಾಗಿ ಹಿರಿಯ ನಾಗರಿಕರಿಗೆ ಅನುಕೂಲವಾಗಲು ನಮ್ಮ ಊರುಗೋಲು ಎಂಬ ಕಾರ್ಯಕ್ರಮ ರೂಪಿಸಿ ಅದರಲ್ಲಿ 5 ಸಾವಿರ ಹಿರಿಯ ನಾಗರಿಕರಿಗೆ ಊರಗೋಲನ್ನು ವಿತರಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸತೀಶ್‌ಪಾಣಿ ಹೇಳಿದರು.

ಅನುಭವದ ಸಾಮರ್ಥ್ಯ ದೊಡ್ಡದು: ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಹಿರಿಯ ನಾಗರಿಕರು ಅನುಭವದಿಂದ ಪಾಠ ಕಲಿತಿರುತ್ತಾರೆ. ಹಿರಿಯರು ಹೇಳುವ ಕಥೆಯಲ್ಲಿ ನೈತಿಕತೆಯ ಸಾರಂಶ, ನೀತಿ ಪಾಠ ತುಂಬಿರುತ್ತದೆ. ಅವರು ಮಾನಸಿಕವಾಗಿ ಸಧೃಡರಾಗಿರುತ್ತಾರೆ ಎಂದು ಹೇಳಿದರು. ನಮ್ಮ ಹಿರಿಯರು ವಿದ್ಯಾಭ್ಯಾಸ ಮಾಡಿರದಿದ್ದರು ಔಷಧೋಪಚಾರದ ಅರಿವಿರುತ್ತಿತ್ತು. ಅವರ ಅನುಭವದ ಸಾಮರ್ಥ್ಯ ಬಹಳ ದೊಡ್ಡದು ಹಾಗಾಗಿ ಅವರ ಮಾತನ್ನು ಕೇಳಬೇಕು. ಇಂದು ನಾನು ಅಧಿಕಾರಿಯಾಗಿ ಕೆಲಸ ನಿರ್ವಹಿಸಲು ಕಾರಣ ಹಿರಿಯರು ಎಂದು ನೆನಪಿಸಿಕೊಂಡರು.

ಸ್ಪರ್ಧಾ ವಿಜೇತರಿಗೆ ಬಹುಮಾನ:

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ನೆಲಮಂಗಲ ತಾಲೂಕಿನ ಎಂ.ಆರ್.ರುದ್ರೇಶ್, ಹೊಸಕೋಟೆಯ ಕೃಷ್ಣಮೂರ್ತಿ, ದೊಡ್ಡಬಳ್ಳಾಪುರ ತಾಲೂಕಿನ ಹನುಮಂತರಾಯಪ್ಪ ದೇವನಹಳ್ಳಿ ತಾಲೂಕಿನ ರಮೇಶ್ ಎಂಬುವರಿಗೆ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಅಂಗವಾಗಿ ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಹಿರಿಯ ನಾಗರಿಕರಿಗೆ ಬಹುಮಾನ ವಿರಿಸಲಾಯಿತು. ಜತೆಗೆ ಬ್ಯಾಪ್ಟಿಸ್ಟ್ ಆಸ್ಪತ್ರೆಯವರ ವತಿಯಿಂದ ಇಬ್ಬರು ಅಂಗವಿಕಲರಿಗೆ ಕೃತಕ ಕಾಲುಗಳನ್ನು ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net