ಸರ್ವ ಭಾಷಾ ಜನನಿ ಸಂಸ್ಕೃತ; ಇಂದು ಸಂಸ್ಕೃತ ದಿನ

World Sanskrit Diwas
Published on

| ಮೇಧಾ ಪ್ರಹ್ಲಾದಾಚಾರ್ಯ ಜೋಶಿ

ಸಮಗ್ರ ವಿಶ್ವದ ದೃಷ್ಟಿಯಲ್ಲಿ ಭಾರತಕ್ಕಿರುವ ವಿಶಿಷ್ಟವಾದ ಗೌರವಕ್ಕೆ ಕಾರಣ ಒಂದು ಭಾರತದ ಸಂಸ್ಕೃತಿ ಇನ್ನೊಂದು ಭಾರತದ ಸಂಸ್ಕೃತ. ಸಂಸ್ಕೃತ ಭಾಷೆ ಇಂದಿಗೋ ನೆನ್ನೆಯೋ ಹುಟ್ಟಿದ ಭಾಷೆಯಲ್ಲ. ಸಾಕ್ಷಾತ್ ನಾರಾಯಣನೇ ಬ್ರಹ್ಮನಿಗೆ ವೇದೋಪದೇಶವನ್ನು ಮಾಡಿದ್ದು ಇದೇ ಭಾಷೆಯಲ್ಲಿ. ಇದು ದೇವರ ಭಾಷೆ ಆದ್ದರಿಂದಲೇ ದೇವ ಭಾಷೆ ಎನಿಸಿದೆ.

ವೇದಗಳಿಂದ ಆರಂಭವಾಗಿ ಎಲ್ಲ ಉಪನಿಷತ್ತುಗಳು, ಧರ್ಮಶಾಸ್ತ್ರ ಗ್ರಂಥಗಳು, ರಾಮಾಯಣ, ಮಹಾಭಾರತ, ಸಕಲ ಪುರಾಣಗಳ ಭಾಷೆ ಸಂಸ್ಕೃತವೇ ಆಗಿದೆ. ಅಷ್ಟೇ ಅಲ್ಲದೆ ಮಹಾ ಕಾವ್ಯಗಳು, ನಾಟಕಗಳು, ವ್ಯಾಖ್ಯಾನ ಗ್ರಂಥಗಳ ಪರಂಪರೆಯೂ ಕೂಡ ಇದರ ತಳಹದಿಯಲ್ಲಿಯೇ ಬಂದಿವೆ. ವ್ಯಾಕರಣ, ಗಣಿತ, ಜ್ಯೋತಿಷ್ಯ, ಆಯುರ್ವೇದ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ, ಅರ್ಥಶಾಸ್ತ್ರ, ರಾಜನೀತಿ ಮೊದಲಾದ ಪ್ರಾಚೀನ ಶಾಸ್ತ್ರಗಳೆಲ್ಲವೂ ಸಹ ಸಂಸ್ಕೃತದಲ್ಲಿವೆ. ಅಷ್ಟೇ ಅಲ್ಲದೆ ನಕ್ಷತ್ರ ಮಂಡಲ, ಗ್ರಹಗಳು, ಸೂರ್ಯ ಚಂದ್ರರನ್ನೊಳಗೊಂಡ ಸಮಗ್ರ ಬಾಹ್ಯಾಕಾಶದ ಅನೇಕ ಗ್ರಂಥಗಳಿವೆ. ಇದು ಸಂಸ್ಕೃತ ಭಾಷೆಯ ವ್ಯಾಪ್ತಿ. ವಿಶ್ವಕ್ಕೆ ಅನೇಕ ಉಪಯುಕ್ತ ಸಂದೇಶಗಳನ್ನು ನೀಡುವಂತಹ ಶಾಸ್ತ್ರಗಳನ್ನು ಗರ್ಭದಲ್ಲಿಟ್ಟುಕೊಂಡಿದೆ ಸಂಸ್ಕೃತ ಭಾಷೆ.

ಪ್ರಾಚೀನ ಕಾಲದಲ್ಲಿ ಇದು ಕೇವಲ ವಿದ್ವಾಂಸರ ಭಾಷೆಯಾಗಿರಲಿಲ್ಲ. ಜನಸಾಮಾನ್ಯರ ಆಡು ಭಾಷೆಯೂ ಆಗಿತ್ತು. ಆದರೆ ಕಾಲಕ್ರಮೇಣ ಪರಕೀಯರ ಅಕ್ರಮಣ ಕೇವಲ ರಾಷ್ಟ್ರದ ಮೇಲಷ್ಟೇ ಅಲ್ಲದೆ ಸಂಸ್ಕೃತಿ ಹಾಗೂ ಸಂಸ್ಕೃತದ ಮೇಲೂ ಆಯಿತು. ಸಮಯ ಕಳೆದಂತೆ ಪ್ರಾದೇಶಿಕ ಹಾಗೂ ಸ್ಥಳೀಯ ಭಾಷೆಗಳು ಸಮಾಜದಲ್ಲಿ ಪ್ರಾಮುಖ್ಯತೆಯನ್ನು ಪಡೆದವು. ಅಲ್ಲಿಯವರೆಗೆ ಆಡು ಭಾಷೆಯಾದ ಸಂಸ್ಕೃತ ಕ್ರಮೇಣ ಧಾರ್ಮಿಕ ಹಾಗೂ ಆಧ್ಯಾತ್ಮಿಕ ವಿಷಯಗಳಿಗೆ ಮಾತ್ರ ಸೀಮಿತವಾಯಿತು. ಬ್ರಹ್ಮ ತತ್ವಾನ್ವೇಷಣಿಗಳಿಗೆ ಹಾಗೂ ಶಾಸ್ತ್ರಾಧ್ಯಯನಕ್ಕೆ ಮಾತ್ರ ಮೀಸಲಾಯಿತು. ಮಾತನಾಡುವ ಭಾಷೆಯಾಗಿ ಅವನತಿ ಹೊಂದಿದರೂ ಸಹ ಸಂಸ್ಕೃತದ ಪ್ರಭಾವ ಮಾತ್ರ ಇಂದಿಗೂ ಹಾಗೆ ಇದೆ. ಭಾರತೀಯ ವಿದ್ವಾಂಸರಷ್ಟೇ ಅಲ್ಲದೆ ವಿದೇಶದ ಅನೇಕ ಜನ ವಿದ್ವಾಂಸರನ್ನು ತನ್ನ ಆಕರ್ಷಣೆಗೆ ಒಳಪಡಿಸಿದೆ. ಬ್ರಿಟಿಷರ ಕಾಲದಲ್ಲಿ ಭಾರತಕ್ಕೆ ಬಂದ ಅನೇಕ ವಿದೇಶಿಯ ತತ್ವಜ್ಞಾನಿಗಳು ನಮ್ಮ ಪ್ರಾಚೀನ ಶಾಸ್ತ್ರೀಯ ಗ್ರಂಥಗಳನ್ನು ಅಧ್ಯಯನ ಮಾಡಿ ಸಂಸ್ಕೃತಕ್ಕೆ ಮನಸೋತಿದ್ದಾರೆ. ಅನೇಕ ಶಾಸ್ತ್ರ ಗ್ರಂಥಗಳನ್ನು ಆಂಗ್ಲ ಮೊದಲಾದ ವಿದೇಶಿ ಭಾಷೆಗಳಿಗೆ ಭಾಷಾಂತರ ಮಾಡಿದ್ದಾರೆ. ಯುಕೆ , ಐರ್ಲೆಂಡ್, ರಷ್ಯಾ, ಜರ್ಮನಿ, ಪೋಲ್ಯಾಂಡ್ ಮೊದಲಾದ ದೇಶಗಳಲ್ಲಿ ಅನೇಕ ಶಾಲೆಗಳಲ್ಲಿ ಸಂಸ್ಕೃತವನ್ನು ಮಕ್ಕಳು ಕಲಿಯಲೇ ಬೇಕೆಂದು ಬಯಸುತ್ತಿದ್ದಾರೆ. ಮತ್ತು ಅದು ಅಲ್ಲಿ ಬಹು ಬಳಕೆಯಲ್ಲಿದೆ. ನಿರಂತರ ಶ್ಲೋಕಗಳ ಪಠನೆಯು ಮೆದುಳಿನ ಹಾಗೂ ಮನಸ್ಸಿನ ಸಕಾರಾತ್ಮಕ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಅನೇಕ ಸಂಶೋಧಕರು ಮನಗಂಡು ತಿಳಿಸುತ್ತಿದ್ದಾರೆ. ಇಂದಿನ ಯುಗದಲ್ಲಿ ಕಂಪ್ಯೂಟರ್ (ಗಣಕ ಯಂತ್ರ) ಇಲ್ಲದಿರುವ ಕ್ಷೇತ್ರವೇ ಇಲ್ಲ. ಅಂತಹ ಕಂಪ್ಯೂಟರ್ ನಲ್ಲಿ ಆಂಗ್ಲ ಮತ್ತಿನ್ನನೇಕ ಭಾಷೆಗಳ ಪ್ರಯೋಗವನ್ನು ಅನೇಕ ಬಾರಿ ತಪ್ಪಾಗಿ ಗ್ರಹಿಸುವ ಸಾಧ್ಯತೆ ಇದೆ. ಆದರೆ ಕಂಪ್ಯೂಟರ್ ನಲ್ಲಿ ಯಾವುದೇ ತಪ್ಪು ಗ್ರಹಿಕೆಗಳಿಲ್ಲದ ಅತ್ಯಂತ ಸ್ನೇಹಪರವಾದ ಭಾಷೆ ಕೇವಲ ಸಂಸ್ಕೃತವಾಗಿದೆ ಎಂಬುದು ಇತ್ತೀಚಿನ ದಿನಗಳಲ್ಲಿ ವಿಶೇಷಜ್ಞರು ಕಂಡುಕೊಂಡು ಘೋಷಿಸಿದ್ದಾರೆ. ಇದಕ್ಕೆ ಮೂಲ ಕಾರಣ ಸಂಸ್ಕೃತದಲ್ಲಿ ಕೇವಲ ಪದಗಳಿಗೆ ಮಾತ್ರ ಅರ್ಥವಿಲ್ಲ. ಒಂದೊಂದು ಅಕ್ಷರಗಳಿಗೂ ಹತ್ತಾರೂ ಅರ್ಥಗಳಿವೆ. ಅದಕ್ಕೆ ಸಂಬಂಧಿಸಿದ ಧಾತುಗಳಿವೆ. ಸೂತ್ರಗಳಿವೆ . ಅದಕ್ಕನುಗುಣವಾಗಿಯೇ ಅರ್ಥ ಮತ್ತು ಅಕ್ಷರಗಳ ಜೋಡಣೆಯನ್ನು ಹೊಂದಿದೆ.. ಆದ್ದರಿಂದ ತಪ್ಪು ಗ್ರಹಿಕೆಯ ಸಾಧ್ಯತೆಗಳೇ ಇಲ್ಲ.

ಸಂಸ್ಕೃತೋತ್ಸವದ ಸದುದ್ದೇಶ

ಭಾರತ ದೇಶದ ಅವಿಚ್ಛಿನ್ನ ಪರಂಪರೆಯ ಭದ್ರ ಬುನಾದಿಯೇ ಸಂಸ್ಕೃತಿ ಮತ್ತು ಸಂಸ್ಕೃತ. ಅಂತಹ ಸನಾತನ ಪರಂಪರೆ ನಿಂತ ನೀರಾಗದೇ ನಿರಂತರ ಗಂಗೆಯ ಪ್ರವಾಹದಂತೆ ಭೋರ್ಗರೆಯಬೇಕಾದರೆ ಅದರ ರಕ್ಷಣೆ ಹಾಗೂ ಪ್ರಚಾರ ಎರಡೂ ಅತೀ ಅವಶ್ಯಕ. ನಮ್ಮ ಸನಾತನ ಶಾಸ್ತ್ರಗಳಲ್ಲಿ ಮನುಷ್ಯನ ಜೀವನದ ಎಂತಹ ಜಟಿಲ ಸಮಸ್ಯೆಗಳಿಗೂ ಸುದೃಢವಾದ ಪರಿಹಾರಗಳಿವೆ. ಆದರೆ ಅದರ ಆಳಕ್ಕಿಳಿದು ಹೋಗಿ ಅಧ್ಯಯನ ಮಾಡಬೇಕಿದೆ ಅಷ್ಟೆ. ಇಂತಹ ಸಂಸ್ಕೃತ ಭಾಷೆಯನ್ನು ವಿಶ್ವಕ್ಕೆ ನೀಡಿದ್ದೇ ನಮ್ಮ ಭಾರತ ಆದರೆ ಇತರರು ಅದನ್ನು ಅಪ್ಪಿಕೊಂಡರು. ನಾವು ಮಾತ್ರ ಇನ್ನೂ ದೂರವಿಟ್ಟಿದ್ದು ವಿಪರ್ಯಾಸ. ಭಾರತದ ಶಿಕ್ಷಣ ಪದ್ಧತಿಯಲ್ಲಿ ಸಂಸ್ಕೃತ ಕಡ್ಡಾಯವಿಲ್ಲದಿರುವುದು ಇನ್ನೂ ಖೇದಕರ. ಪ್ರಸಕ್ತ ರಾಜಕೀಯ ಪಗಡೆಯಾಟದಲ್ಲಿ ಸಂಸ್ಕೃತವನ್ನು ಕೇವಲ ಒಂದು ಜನಾಂಗಕ್ಕೆ ಅಥವಾ ಒಂದು ಜಾತಿಗೆ ಸೇರಿದ ಭಾಷೆಯನ್ನಾಗಿ ಬಿಂಬಿಸುತ್ತಿರುವುದು ಬೇಸರದ ಸಂಗತಿ. ಹೀಗಿರುವಾಗ ಕೇವಲ ಸಂಸ್ಕೃತೋತ್ಸವದ ದಿನ ಮಾತ್ರ ಅಲ್ಲಲ್ಲಿ ಸ್ಪರ್ಧೆಗಳು, ಸಂಭಾಷಣೆ ಇತ್ಯಾದಿ ನಡೆದರೆ ಬ‌ಹಳ ಪ್ರಯೋಜನಕಾರಿ ಏನಲ್ಲ. ಸಂಸ್ಕೃತ "ಕಬ್ಬಿಣದ ಕಡಲೆ" ಸರ್ವಥಾ ಅಲ್ಲ ಎಂದು ಬಿಂಬಿಸಬೇಕು. ಜನಸಾಮಾನ್ಯರಿಂದ ವಿದ್ವಾಂಸರವರೆಗೂ ಅದು ಸುಲಭ ಸುಲಲಿತ ಎಂಬುದನ್ನು ಸಮಾಜಕ್ಕೆ ಮನಗಾಣಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಸಂಸ್ಕ್ರತವನ್ನು ಕಲಿಯಲೇಬೇಕೆಂದು ಪ್ರೋತ್ಸಾಹಿಸಬೇಕು. ಆಗಲೇ ಈ ಸಂಸ್ಕೃತ್ಸೋತ್ಸವ ಸಾರ್ಥಕ.

ಸಹನಾ ಭವತು ಸಹನೌ ಪುನರ್ತು- ಎಂಬ ಶಾಂತಿ ಮಂತ್ರವನ್ನು ವಿಶ್ವಕ್ಕೆ ಸಾರಿದ್ದು ಸಂಸ್ಕೃತ. ಸರ್ವೇಜನಾಃ ಸುಖಿನೋ ಭವಂತು- ಎಂಬ ಏಕತೆಯ ಸಂದೇಶ ನೀಡಿದ್ದು ಸಂಸ್ಕೃತ. ವಸುಧೈವ ಕುಟುಂಬಕಂ- ಎಂಬ ಸಂಸ್ಕಾರವನ್ನು ಬಿತ್ತಿದ್ದು ಸಂಸ್ಕೃತ. ಶಾಸನ, ರಾಜನೀತಿ, ಶತ್ರು ಸಂಹಾರಕ್ಕೆ ಸಾಮ ದಾಮ ದಂಡ ಭೇದ ಎಂಬ ನೀತಿಯನ್ನು ಉಪದೇಶಿಸಿದ್ದು ಸಂಸ್ಕೃತ. ಆಧ್ಯಾತ್ಮದ ಚರಮೋತ್ಕರ್ಷವನ್ನು ಹೊಂದಿ ಧರ್ಮೋ ರಕ್ಷತಿ ರಕ್ಷಿತಃ- ಎಂಬ ಜೀವನದ ಸಾರ್ಥಕ್ಯವನ್ನು ಉಪದೇಶಿಸಿದ್ದು ಸಂಸ್ಕೃತ.

ತಾಯಿಗೆ ಎಂದಿಗೂ ತನ್ನ ಗರ್ಭಸಂಜಾತರೊಂದಿಗೆ ಸ್ಪರ್ಧೆಯ ಪ್ರಶ್ನೆಯೇ ಇಲ್ಲ. ಹಾಗೆಯೇ ಸಂಸ್ಕೃತ ಎಲ್ಲಾ ಭಾಷೆಗಳಿಗೂ ಜನನಿ. ಹೀಗಾಗಿ ಬೇರೆ ಯಾವ ಭಾಷೆಗಳೊಂದಿಗೂ ಸಾಮ್ಯವಾಗಲಿ ಸ್ಪರ್ಧೆಯ ಚಿಂತನೆಯಾಗಲಿ ವಿವೇಕ ರಹಿತ ತುಲನೆಯಾಗುತ್ತದೆ. ಭಾಷಾ ಸು ಮುಖ್ಯಾ ಮಧುರಾ ದಿವ್ಯಾ ಗಿರ್ವಾಣಭಾರತಿ- ಎಲ್ಲ ಭಾಷೆಗಳಿಗೆ ಮುಖ್ಯ ಮತ್ತು ಮೂಲ, ಅತಿ ಮಧುರವಾದ ದಿವ್ಯ ಭವ್ಯವಾದ ಭಾಷೆಯೇ ಈ ಸಂಸ್ಕೃತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net