ಶರಣರ ಚಳವಳಿ ಸಾರ್ವತ್ರಿಕ ಸತ್ಯ

CLK BASAVA DALA 10
Published on

ಚಳ್ಳಕೆರೆ: ಬಸವಣ್ಣನ ನೇತೃತ್ವದಲ್ಲಿ 12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಚಳುವಳಿಗಳು ಸಾರ್ವತ್ರಿಕ ಸತ್ಯವಾಗಿ ಸಮಾಜದಲ್ಲಿ ಉಳಿದುಕೊಂಡಿವೆ ಎಂದು ಹಿರೇಹೊನ್ನಹಳ್ಳಿ ಜಂಗಮ ಕ್ರಿಯಾಮೂರ್ತಿ ಶ್ರೀ ಚನ್ನಬಸವ ಸ್ವಾಮೀಜಿ ಹೇಳಿದರು.

ಬಸವದಳ ತಾಲೂಕು ರಾಷ್ಟ್ರೀಯ ಬಸವದಳ ಒಕ್ಕೂಟ ನಗರದ ಮಾಜಿ ಸಚಿವ ದಿವಂಗತ ತಿಪ್ಪೇಸ್ವಾಮಿ ಅವರ ನಿವಾಸದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವಧರ್ಮ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವಣ್ಣನವರು ವಿಶ್ವಗುರು ಅನಿಸಿಕೊಳ್ಳಲು ಅವರ ದೂರದೃಷ್ಟಿಯ ಚಿಂತನೆ ಕಾರಣವಾಗಿದೆ. ಅಸ್ಪಶ್ಯತೆಯ ವಿರುದ್ಧ ಹೋರಾಟ, ಸ್ತ್ರೀ ಸಮಾನತೆ ಇರಬೇಕು ಮತ್ತು ಸಾಮಾಜಿಕ ಬೇಧ-ಭಾವ ನಿರ್ಮೂಲನೆ ಆಗಬೇಕು ಎನ್ನುವ ಅವರ ಚಿಂತನೆ ಸದಾ ಪ್ರಸ್ತುತ. ಅವರ ಚಳುವಳಿಗಳ ಕುರಿತು ವಿಶ್ವದ ಎಲ್ಲ ವರ್ಗದವರು ಕೇಳುವ ಮತ್ತು ಅನುಸರಿಸಬೇಕಾದ ವಿಚಾರಧಾರೆ ಆಗಿದೆ ಎಂದು ಹೇಳಿದರು.

ಸಿಪಿಐ ಮುಖಂಡ ಸಿ.ವೈ.ಶಿವರುದ್ರಪ್ಪ ಮಾತನಾಡಿ, ಬಸವಣ್ಣನ ಅನುಭವ ಮಂಟಪ ಸಮಾನತೆಯ ಪ್ರತೀಕವಾಗಿದೆ. ಕೆಳಸಮುದಾಯದ ಶರಣರಿಗೂ ಲಿಂಗಾಧಾರಣೆ ಮಾಡಿ ಸಮಾನತೆಗಾಗಿ ಪ್ರತಿಪಾದನೆ ಮಾಡಿದ ಮಹಾಪುರುಷ ಎಂದು ಬಣ್ಣಿಸಿದರು.

ಸಮಾಜಿಕ ಹೋರಾಟಗಾರ ಎಸ್.ಎಚ್.ಸೈಯದ್ ಮಾತನಾಡಿ, ವಿಶ್ವಗುರು ಬಸವಣ್ಣನ ಅನುಯಾಯಿ ಎಂದು ಹೇಳಿಕೊಳ್ಳುವ ಬಹಳಷ್ಟು ಮಂದಿ ವೈಜ್ಞಾನಿಕವಾಗಿ ನಡೆದುಕೊಳ್ಳುತ್ತಿಲ್ಲ. ಬದಲಿಗೆ ಮೌಢ್ಯತೆಯಲ್ಲಿ ಉಳಿದುಕೊಂಡಿದ್ದಾರೆ ಎಂದು ಬೇಸರಿಸಿದರು.

ಬಸವಣ್ಣನ ವಾರಸುದಾರರು ಎಂಬಂತೆ ಬಿಂಬಿಸಿಕೊಳ್ಳುವ ಜನರ ಮೌಢ್ಯ ನಡೆ ಪರಿಣಾಮ ಶರಣರ ವಿಚಾರಧಾರೆಗಳು ಜನರಿಗೆ ತಲುಪುತಿಲ್ಲ. ಸಮಾಜದಲ್ಲಿ ಸೀಮಿತ ವರ್ಗ ಹೊರತಾಗಿ ಜಾಗೃತಿ ಕಾರ್ಯಗಳು ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

ನಗರಸಭಾ ಸದಸ್ಯೆ ಪಾಲಮ್ಮ, ಮಾಜಿ ಸಚಿವ ತಿಪ್ಪೇಸ್ವಾಮಿ ಪತ್ನಿ ವಿಮಲಮ್ಮ, ಸಾಮಾಜಿಕ ಹೋರಾಟಗಾರ ದೊಡ್ಡಉಳ್ಳಾರ್ತಿ ಕರಿಯಣ್ಣ, ಬಸವದಳ ತಾಲೂಕಾಧ್ಯಕ್ಷ ಪಿ.ತಿಪ್ಪೇರುದ್ರಪ್ಪ, ನಿವೃತ್ತ ಮುಖ್ಯಶಿಕ್ಷಕ ಜಿ.ಎಚ್.ಹನುಮಂತಪ್ಪ, ಪ್ರತಿಭಾ, ತಿಪ್ಪಮ್ಮ, ವೆಂಕಟೇಶ್ ರೆಡ್ಡಿ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net