ಕಷ್ಟದಲ್ಲಿ ನೆರವಾಗುವ ರೆಡ್‌ಕ್ರಾಸ್: ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿಕೆ

World Red Cross Day Mandya
Published on

ಮಂಡ್ಯ: ನಗರದ ರೆಡ್‌ಕ್ರಾಸ್ ಭವನದಲ್ಲಿ ವಿಶ್ವ ರೆಡ್‌ಕ್ರಾಸ್ ದಿನ ಆಚರಿಸಲಾಯಿತು.

ರೆಡ್ ಕ್ರಾಸ್ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯನ್ನು ಜೀನ್ ಹೆನ್ರಿ ಡ್ಯೂನಂಟ್ 1863 ರಲ್ಲಿ ಹುಟ್ಟು ಹಾಕಿದರು. ಹೆನ್ರಿ ಡುನಾಂಟ್ ಅವರ ಜನ್ಮದಿನವಾದ ಮೇ 8 ಅನ್ನು ಪ್ರತಿ ವರ್ಷ ವಿಶ್ವ ರೆಡ್ ಕ್ರಾಸ್ ದಿನವನ್ನಾಗಿ ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ. ಯುದ್ಧ ಸೇರಿದಂತೆ ಕಷ್ಟದ ಸಂದರ್ಭದಲ್ಲಿ ಅಗತ್ಯವಿರುವವರಿಗೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡುವುದು ಸಂಸ್ಥೆಯ ಉದ್ದೇಶ. ಯುವ ಸಮೂಹ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರಾಗುವುದರ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಮಾನವೀಯತೆ, ಕರುಣೆ ಮತ್ತು ಸೇವೆಯ ಜಾಗತಿಕ ಆಚರಣೆಯ ದಿನವಾಗಿದೆ. ಪ್ರತಿ ವರ್ಷ ಮೇ 8ರಂದು, ಜಗತ್ತು ಸ್ವಯಂಸೇವೆ ಮತ್ತು ಮಾನವೀಯ ಕಾರ್ಯಗಳ ಮನೋಭಾವವನ್ನು ಗೌರವಿಸುತ್ತದೆ. ಇದು ರೆಡ್ ಕ್ರಾಸ್ ಚಳವಳಿಯ ಸಂಸ್ಥಾಪಕ ಮತ್ತು ಮೊದಲ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಹೆನ್ರಿ ಡ್ಯೂನಾಂಟ್ ಅವರ ಜನ್ಮ ವಾರ್ಷಿಕೋತ್ಸವವನ್ನು ಸೂಚಿಸುತ್ತದೆ ಎಂದು ಸ್ಮರಿಸಿದರು.

ರೆಡ್ ಕ್ರಾಸ್ ಜಿಲ್ಲಾ ನಿರ್ದೇಶಕ ಕೆ.ಟಿ.ಹನುಮಂತ ಮಾತನಾಡಿ, ಈ ಜಗತ್ತಿನಲ್ಲಿ ಇರುವ ಜನರ ಪಾಲಿಗೆ ರೆಡ್ ಕ್ರಾಸ್ ಸಂಸ್ಥೆ ಸಂಜೀವಿನಿ ಇದ್ದಂತೆ. ಇದರ ಸ್ವಯಂಸೇವಕರು ಜಗತ್ತಿನಾದ್ಯಂತ ವ್ಯಾಪಿಸಿಕೊಂಡಿದ್ದು, ವೈದ್ಯಕೀಯ ಸಹಾಯದ ಅಗತ್ಯವಿದ್ದವರಿಗೆ ತಕ್ಷಣ ನೆರವಿಗೆ ಧಾವಿಸುತ್ತಾರೆ. ಗಾಯಾಳುಗಳಿಗೆ ರಕ್ತ ಆಹಾರ ಉಡುಪುಗಳನ್ನು ಪೂರೈಸುತ್ತಾರೆ. ಇದು ಜಗತ್ತಿನ ಅತ್ಯಂತ ವಿಸ್ವಾರ್ಹ ಸಂಸ್ಥೆಯಾಗಿದ್ದು, ಜಗತ್ತಿಗೆ ಮಾನವೀಯತೆ ಹಾಗೂ ಶಾಂತಿಯನ್ನು ಸಾರುವ ಸಂಸ್ಥೆ ಎಂದು ತಿಳಿಸಿದರು.

ಮಂಗಲ ಎಂ.ಯೋಗೇಶ್, ನಾರಾಯಣಸ್ವಾಮಿ, ರಾಜಣ್ಣ, ರಾಂ,ಜಗದೀಶ್, ಮೊಳೇಗೌಡ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net