

ಹುಬ್ಬಳ್ಳಿ: ದಾವಣಗೆರೆ ಜಿಲ್ಲೆ ಹೊನ್ನಾಳಿ ಮೂಲದ ನಿಪುಣ ನಿರ್ಮಾಣ ಯೋಜನಾ ವ್ಯವಸ್ಥಾಪಕ ಡಾ. ರೇಣುಕಾಪ್ರಸಾದ ಎ. ಹಿರೇಮಠ ಅವರು ಪ್ರೊಜೆಕ್ಟ್ ಮ್ಯಾನೇಜಮೆಂಟ್ ಕುರಿತು ಆನ್ ಲೈನ್ ನಲ್ಲಿ ಅತಿ ಹೆಚ್ಚು ಕೋರ್ಸ್‌ಗಳ ಪ್ರಮಾಣ ಪತ್ರಗಳನ್ನು ಪಡೆದು ವಿಶ್ವ ದಾಖಲೆ ಬರೆದಿದ್ದಾರೆ.
ಇವರು 286 ಆನ್ ಲೈನ್ ಕೋರ್ಸ್‌ಗಳ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದಾರೆ. ಈ ಅದ್ವಿತೀಯ ಸಾಧನೆ ಗುರುತಿಸಿ ಇಂಟರ್ ನ್ಯಾಷನಲ್ ಬುಕ್ ಆಫ್ ರೆಕಾರ್ಡ್ಸ್ ನವರು ಇವರಿಗೆ ವರ್ಲ್ಡ್ ರೆಕಾರ್ಡ್ಸ್ ಆಫ್ ಎಕ್ಸಲನ್ಸ್ ಪ್ರಮಾಣ ಪತ್ರ ನೀಡಿ ಗೌರವಿಸಿದ್ದಾರೆ.
ಡಾ. ರೇಣುಕಾಪ್ರಸಾದ ಅವರು ದುಬೈನಲ್ಲಿ ನೆಲೆಸಿದ್ದು, ಅಸಾಧಾರಣ ಶೈಕ್ಷಣಿಕ ಹಿನ್ನೆಲೆ ಮತ್ತು ಸಿವಿಲ್ ಇಂಜಿನಿಯರಿಂಗ್, ನಿರ್ಮಾಣ ಮತ್ತು ಯೋಜನಾ ನಿರ್ವಹಣೆಯಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ.
ಲಂಡನ್‌ನ ಎಡಿನ್ಬರ್ಗ್ ವಿಶ್ವವಿದ್ಯಾಲಯದಿಂದ ಎಂಎಸ್, ಅಮೆರಿಕದ ವಿವಿಯಿಂದ ಯೋಜನಾ ನಿರ್ವಹಣೆಯಲ್ಲಿ ಪಿಎಚ್.ಡಿ ಪಡೆದುಕೊಂಡಿದ್ದಾರೆ. ಇದಲ್ಲದೇ ಯೋಜನಾ ನಿರ್ವಹಣೆಯಲ್ಲಿ ಉನ್ನತ ಅಂತಾರಾಷ್ಟ್ರೀಯ ಡಿಪ್ಲೊಮಾ, ಗುಣಮಟ್ಟ ನಿರ್ವಹಣೆ, ಒಳಾಂಗಣ ವಿನ್ಯಾಸದಲ್ಲಿ ಅಂತಾರಾಷ್ಟ್ರೀಯ ಡಿಪ್ಲೊಮಾಗಳನ್ನು ಪಡೆದುಕೊಂಡಿದ್ದಾರೆ.
ಈ ಶ್ರೇಷ್ಠ ಸಾಧನೆಗಾಗಿ ಡಾ. ರೇಣುಕಾಪ್ರಸಾದ ಅವರನ್ನು ದಾವಣಗೆರೆ ಹಿರೇಮಠದಲ್ಲಿ ಇತ್ತೀಚೆಗೆ ಡಾ. ಒಡೆಯರ ಚಂದ್ರಶೇಖರ ಶಿವಾಚಾರ್ಯರು ಸನ್ಮಾನಿಸಿದರು.
ಹುಬ್ಬಳ್ಳಿಯ ಬಂಧುಗಳ ಮನೆಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ರುದ್ರಾಕ್ಷಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಗೌರವಿಸಿದರು.