

ಹುಬ್ಬಳ್ಳಿ: ಪ್ರಾಚೀನ ಸಂಸ್ಕೃತಿ ಮತ್ತು ಔಷಧ ಪದ್ಧತಿಯಾಗಿರುವ ಆಯುರ್ವೇದವನ್ನು ಕೇಂದ್ರ ಸರ್ಕಾರ ಉತ್ತೇಜಿಸಿ, ಉಳಿಸಿ, ಬೆಳೆಸುವ ಯೋಜನೆ ರೂಪಿಸಿದೆ. ಪರಿಣಾಮ ಭಾರತದ ಆಯುರ್ವೇದವು ಜಗತ್ತಿನಾದ್ಯಂತ ಪಸರಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿಯ ಆಯುರ್ವೇದ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ ವತಿಯಿಂದ ನಗರದ ಬಿವಿಬಿ ಕಾಲೇಜ್‌ನ ಕೆಎಲ್ಇ ಟೆಕ್ ಆಡಿಟೋರಿಯಂನಲ್ಲಿ ಭಾನುವಾರ ಆಯೋಜಿಸಿದ್ದ ‘ಸೆಟಲೈಟ್ ನ್ಯಾಷನಲ್ ಸೆಮಿನಾರ್’ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಆಯುಷ್ ಸಚಿವಾಲಯವು ಆಯುರ್ವೇದದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುತ್ತಿದೆ. 2014ರಲ್ಲಿ ಆಯುರ್ವೇದಕ್ಕೆ ಅಷ್ಟು ಮಹತ್ವ ಇರಲಿಲ್ಲ. ಆಯುರ್ವೇದ ಔಷಧ ಕೇವಲ 24,000 ಕೋಟಿ ರೂ. ವಹಿವಾಟು ಆಗುತ್ತಿತ್ತು. ಇದಿಗ 1.40 ಲಕ್ಷ ಕೋಟಿ ರೂ.ಗೆ ತಲುಪಿದೆ. ಬಜೆಟ್‌ನಲ್ಲಿ 500 ಕೋಟಿ ರೂ. ಬದಲು 3000 ಕೋಟಿ ರೂ. ನೀಡಲಾಗಿದೆ ಎಂದು ಜೋಶಿ ತಿಳಿಸಿದರು.
ಕೇಂದ್ರ ಆಯುಷ್ ಸಚಿವಾಲಯದ ಆಶ್ರಯದಲ್ಲಿ ಮುಂಬರುವ ಡಿಸೆಂಬರ್ 12ರಿಂದ 15ರವರೆಗೆ ಉತ್ತರಾಖಂಡದ ಡೆಹರಾಡೂನ್‌ನಲ್ಲಿ 10ನೇ ವಿಶ್ವ ಆಯುರ್ವೇದ ಕಾಂಗ್ರೆಸ್ ಆ್ಯಂಡ್ ಹೆಲ್ತ್ ಎಕ್ಸ್‌ಪೋ ಆಯೋಜಿಸಲಾಗುತ್ತಿದೆ. ಇದರಲ್ಲಿ 50 ರಾಷ್ಟ್ರಗಳು, 5000 ಆಯುರ್ವೇದ ತಜ್ಞರು ಭಾಗವಹಿಸಲಿದ್ದಾರೆ. ಇದರ ಭಾಗವಾಗಿ ದೇಶದೆಲ್ಲೆಡೆ 20 ಸೆಟಲೈಟ್ ಸೆಮಿನಾರ್ ನಡೆಸಲಾಗುತ್ತಿದ್ದು, ಇಂದಿನ ಕಾರ್ಯಕ್ರಮವೂ ಇದರ ಭಾಗವಾಗಿದೆ ಎಂದು ಹೇಳಿದರು.
ಡಾ. ಮಾಧವ ದಿಗ್ಗಾವಿ, ಡಾ.ಎಸ್.ವಿ. ಹಿರೇಮಠ, ಡಾ. ದತ್ತಾ ನಾಡಿಗೇರ, ಡಾ.ಎಲ್.ಎನ್. ಶೆಣೈ, ಡಾ. ಸೌರಭ ಎಸ್.ಕೆ., ಡಾ. ಪ್ರಮೋದ ಕಟ್ಟಿ ಅವರು ವಿವಿಧ ವಿಷಯಗಳ ಕುರಿತು ಉಪನ್ಯಾಸ ನೀಡಿದರು.
ಡಾ. ಸೂರಜ್ ಕಂಬಾರ ಅವರು ಆಯುರ್ವೇದ ಕಾಂಗ್ರೆಸ್ ಬಗ್ಗೆ ವಿಸ್ತೃತವಾಗಿ ವಿವರಿಸಿದರು.
ಹುಬ್ಬಳ್ಳಿ ಆಯುರ್ವೇದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ, ಕಾರ್ಯದರ್ಶಿ ಸಂಜೀವ ಜೋಶಿ, ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಎಸ್. ಪ್ರಶಾಂತ, ಪ್ರಮುಖರಾದ ಡಾ.ಜೆ.ಆರ್. ಜೋಶಿ, ಡಾ. ಪ್ರಮೋದ ಕಟ್ಟಿ, ಡಾ. ಮಹೇಶ ಸಾಲಿಮಠ, ಡಾ.ಎಸ್.ಎ. ಪಾಟೀಲ, ಡಾ. ಮಂಜುನಾಥ ನಾಯ್ಕ ಇತರರು ಉಪಸ್ಥಿತರಿದ್ದರು.