ಅಂಚೆ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಿ: ಪ್ರಧಾನ ಕಚೇರಿ ಅಧೀಕ್ಷಕ ಎಂ.ಲೋಕನಾಥ್ ಸಲಹೆ

World Postal Day Mandya
Published on

ಮಂಡ್ಯ: ಅಂಚೆ ಇಲಾಖೆಯಲ್ಲಿ ಸಿಗುವ ನಾಗರಿಕ ಯೋಜನೆ ಮತ್ತು ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಿ ಎಂದು ಪ್ರಧಾನ ಅಂಚೆ ಕಚೇರಿ ಅಧೀಕ್ಷಕ ಎಂ.ಲೋಕನಾಥ್ ಹೇಳಿದರು.

ನಗರದ ಕಚೇರಿ ಆವರಣದಲ್ಲಿ ಕೇಂದ್ರ ಸರ್ಕಾರ, ಭಾರತೀಯ ಅಂಚೆ ಇಲಾಖೆ, ಮಂಡ್ಯ ಅಂಚೆ ವಿಭಾಗದಿಂದ ವಿಶ್ವ ಅಂಚೆ ದಿನಾಚರಣೆ ಮತ್ತು ರಾಷ್ಟ್ರೀಯ ಅಂಚೆ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇಂದಿನ ಜನರು ತಂತ್ರಜ್ಞಾನ ಬೆಳೆದಂತೆ ಅಂಚೆ ಸೇವೆಗಳ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಸಾಕಷ್ಟು ಯೋಜನೆ ಮತ್ತು ಸೌಲಭ್ಯಗಳನ್ನು ನೀಡಿದೆ ಸದುಪಯೋಗ ಪಡಿಸಿಕೊಳ್ಳಿ. ಅಂಚೆ ಜೀವವಿಮೆ, ಅಪಘಾತ ವಿಮೆ, ವಿವಿಧ ಹಣ ಉಳಿತಾಯ ಯೋಜನೆ ಇವೆ ಎಂದರು.

ಪ್ರತಿ ವರ್ಷ ವಿಶ್ವ ಅಂಚೆ ದಿನ ಮತ್ತು ರಾಷ್ಟ್ರೀಯ ಅಂಚೆ ಸಪ್ತಾಹ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದೇವೆ. ಅಂತೆಯೇ ಪ್ರತಿದಿನ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. ಮೊದಲ ಬಾರಿಗೆ 1874 ಅ.9ರಲ್ಲಿ ಸ್ವಿಟ್ಜರ್ಲೆಂಡ್ ಬರ್ನ್‌ನಲ್ಲಿ ಯುನಿವರ್ಸಲ್ ಪೋಸ್ಟಲ್ ಯೂನಿಯನ್ ವ್ಯವಸ್ಥೆ ಸ್ಥಾಪಿಸಲಾಯಿತು. ಇದರ ಸ್ಥಾಪನೆಯ ನೆನಪಿಗಾಗಿ 1969 ರಲ್ಲಿ ಜಪಾನಿನ ಟೋಕಿಯೋದಲ್ಲಿ ನಡೆದ ಪೋಸ್ಟಲ್ ಯೂನಿಯನ್ ಸಮ್ಮೇಳನದಲ್ಲಿ ಮೊದಲನೇ ಬಾರಿಗೆ ವಿಶ್ವ ಅಂಚೆ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಅ.9ರಂದು ವಿಶ್ವ ಅಂಚೆ ದಿನ ಆಚರಿಸುತ್ತಾ ಬರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಪ್ರತಿದಿನ ಒಂದೊಂದು ಅಭಿಯಾನವಿರಲಿದೆ. ಮೊದಲ ದಿನ ವಿಶ್ವ ಅಂಚೆ ದಿನ-ಜಾಗತಿಕ ಅಂಚೆ ವ್ಯವಸ್ಥೆಯ ಆಚರಣೆ, 2ನೇ ದಿನ ಉಳಿತಾಯ ಬ್ಯಾಂಕ್ ದಿನ-ಹಣಕಾಸು ಸೇವೆ ಉತ್ತೇಜಿಸುವುದು, 3ನೇ ದಿನ ಅಂಚೆ ಚೀಟಿಗಳ ಸಂಗ್ರಹ ದಿನದ ಅಂಗವಾಗಿ ಜಾಗೃತಿ ಮೂಡಿಸುವುದು. 4ನೇ ದಿನ ವ್ಯಾಪಾರ ಸಂಬಂಧಿತ ಅಂಚೆ ಸೇವೆ ಉತ್ತೇಜಿಸುವುದು, 5ನೇ ದಿನ ಮೇಲ್ ವಿತರಣೆಯ ಮುಖ್ಯ ಕಾರ್ಯವನ್ನು ಹೇಳುವುದು. 6ನೇ ದಿನ ಅಂತ್ಯೋದಯ ದಿನ ಆಚರಿಸಿ ಇಲಾಖೆಯಲ್ಲಿರುವ ಎಲ್ಲ ಯೋಜನೆ ಬಗ್ಗೆ ಮಾಹಿತಿ ನೀಡಲಾಗುವುದು. ಮಾತ್ರವಲ್ಲದೆ ಗಣನೀಯ ಸೇವೆ ಸಲ್ಲಿಸಿದವರಿಗೆ ಅಭಿನಂದಿಸಲಾಗುವುದು. ಸಾರ್ವಜನಿಕರು ಅಂಚೆ ಇಲಾಖೆಯಲ್ಲಿ ದೊರೆಯುವ ಯೋಜನೆಗಳು ಮತ್ತು ಸೌಲಭ್ಯ ಪಡೆಯಿರಿ. ಮುಖ್ಯವಾಗಿ ಕಡಿಮೆ ಮೊತ್ತದಲ್ಲಿರುವ ಅಂಚೆ ಜೀವ ವಿಮಾ ಮತ್ತು ಅಪಘಾತ ಅಂಚೆ ವಿಮೆಗಳನ್ನು ಮಾಡಿಸಿ ಎಂದು ಮನವಿ ಮಾಡಿದರು.

ಸಹಾಯಕ ಅಧೀಕ್ಷಕರಾದ ರಾಜು ಕಾಳೇಶ್ವರ್, ಪಿ.ಎಲ್.ನಾಗರಾಜು ಇತರರಿದ್ದರು. ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಸೌಲಭ್ಯಗಳ ನಾಮಫಲಕ ಹಿಡಿದು ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಅಭಿಯಾನ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net