

ಜಗಳೂರು: ಜನಸಂಖ್ಯೆ ಹೆಚ್ಚಳದಿಂದ ಉಂಟಾಗುವ ಬಡತನ, ನಿರುದ್ಯೋಗ, ಹಸಿವು ಮುಂತಾದ ಸಮಸ್ಯೆಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ವಿಶ್ವ ಜನಸಂಖ್ಯಾ ದಿನದ ಉದ್ದೇಶ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ತಾಲೂಕು ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವರ್ಷದಿಂದ ವರ್ಷಕ್ಕೆ ಭಾರತ ದೇಶದ ಜನಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಇದನ್ನು ನಿಯಂತ್ರಿಸುವುದು ಬಹುದೊಡ್ಡ ಸವಾಲು. ವಿಶ್ವದಲ್ಲಿ ಚೀನಾ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾದರೆ ಭಾರತ 2ನೇ ಸ್ಥಾನದಲ್ಲಿತ್ತು. ಆದರೆ, ಇದೀಗ ಮೊದಲ ಸ್ಥಾನಕ್ಕೆ ಬಂದಿದೆ. ಪ್ರಪಂಚದಾದ್ಯಂತ ಜನಸಂಖ್ಯೆ ಸಮಸ್ಯೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಜು. 11ರಂದು ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತದೆ ಎಂದರು.
ಸಿಡಿಪಿಓ ಬಿರೇಂದ್ರಕುಮಾರ್ ಮಾತನಾಡಿ, ಬಾಲ್ಯವಿವಾಹಕ್ಕೆ ಹೆಚ್ಚು ಹೆಚ್ಚು ಅಪ್ರಾಪ್ತ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಸಾರ್ವಜನಿಕರು ಇಲಾಖೆ ಜತೆ ಸಹಕರಿಸಬೇಕು. ಪ್ರತಿ ಹೆಣ್ಣು ಮಕ್ಕಳಿಗೂ ಶಿಕ್ಷಣ ಸಿಗಬೇಕು, ಜನಸಂಖ್ಯಾ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು. ಆಗ ಮಾತ್ರ ಜನಸಂಖ್ಯೆ ಇಳಿಮುಖವಾಗಲು ಸಾಧ್ಯ ಎಂದರು.
ಇದೇ ವೇಳೆ ಅಧಿಕಾರಿಗಳು, ಜನಸಂಖ್ಯಾ ನಿಯಂತ್ರಣದ ಭಿತ್ತಿ ಚಿತ್ರ ಬಿಡುಗಡೆಗೊಳಿಸಿದರು. ಗ್ರೇಡ್-2 ತಹಸೀಲ್ದಾರ್ ಮಂಜಾನಂದ, ಸಮಾಜ ಕಲ್ಯಾಣಾಧಿಕಾರಿ ಬಿ. ಮಹೇಶ್ವರಪ್ಪ, ಇಸಿಒ ಬಸವರಾಜ್, ಆರೋಗ್ಯ ಇಲಾಖೆ ಮೇಲ್ವಿಚಾರಕ ಪರಶುರಾಮ, ಮಂಜಪ್ಪ, ಸುಶೀಲಮ್ಮ, ರೇಷ್ಮಾ, ಆಶಾ, ಎಚ್. ರೂಪ, ಭಾರತಿ ಇದ್ದರು.