

ಮಂಡ್ಯ: ಸಾರ್ವಜನಿಕರ ಸಹಕಾರದಿಂದಾಗಿ ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಆರ್‌ಸಿಎಚ್ ಅಧಿಕಾರಿ ಡಾ.ಅಶ್ವಥ್ ಹೇಳಿದರು.
ಇಲ್ಲಿನ ಅರ್ಕೇಶ್ವರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರೋಟರಿ ಸಂಸ್ಥೆ, ರೋಟರಿ ಸಕ್ಕರೆನಾಡು ಸಂಸ್ಥೆ, ಇನ್ನರ್ ವ್ಹೀಲ್ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅರ್ಕೇಶ್ವರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಅನನ್ಯ ಹಾರ್ಟ್ ಸಂಸ್ಥೆ, ಪ್ರಾಥಮಿಕ ಆರೋಗ್ಯ ಕೇಂದ್ರ ಗುತ್ತಲು ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಪೋಲಿಯೋ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜಾಗತಿಕವಾಗಿ ಪೋಲಿಯೋ ಅತ್ಯಂತ ಸಾಂಕ್ರಾಮಿಕ ವೈರಲ್ ಸೋಂಕು. ಇದು ಪಾರ್ಶ್ವವಾಯು ಮತ್ತು ಸಾವಿಗೆ ಕಾರಣವಾಗಬಹುದು. ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪಾಲಕರು ತಮ್ಮ ಜವಾಬ್ದಾರಿ ಮೆರೆದಿದ್ದಾರೆ ಎಂದರು.
2014ರಲ್ಲಿಯೇ ಭಾರತ ಪೋಲಿಯೋ ಮುಕ್ತಗೊಂಡಿದೆ. ಆದರೆ ಪ್ರಪಂಚದಲ್ಲಿ ಇನ್ನೂ 3 ದೇಶ ಪೋಲಿಯೋ ಮುಕ್ತವಾಗಿಲ್ಲ. ಅಫ್ಘಾನಿಸ್ಥಾನ, ನೈಜೀರಿಯಾ, ಪಾಕಿಸ್ಥಾನ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಹಿನ್ನೆಲೆಯಲ್ಲಿ ಅಲ್ಲಿಂದ ವಲಸೆ ಬರುವ ಜನರು ಅಥವಾ ಮಕ್ಕಳಿಂದ ಭಾರತದಲ್ಲಿಯೂ ಮತ್ತೆ ಸೊಂಕು ತಗಲುತ್ತದೆ ಎಂದು ಎಚ್ಚರಿಸಿದರು.
ರೋಟರಿ ಸಂಸ್ಥೆ ವಲಯಪಾಲಕ ಪ್ರಶಾಂತ್ ಮಾತನಾಡಿ, ರೋಟರಿಯು ಪೋಲಿಯೋ ವಿರುದ್ಧ 1979 ಸೆ.29ರಂದು ಫಿಲಿಪೈನ್‌ನ ಮಕಾಟಿಯಲ್ಲಿ ತನ್ನ ಯುದ್ಧ ಪ್ರಾರಂಭಿಸಿತು. ಆಗಿನ ರೋಟರಿ ಅಂತಾರಾಷ್ಟ್ರೀಯ ಅಧ್ಯಕ್ಷ ಜೇಮ್ಸ್ ಐ ಬೊಮರ್ ಪೋಲಿಯೋ ಲಸಿಕೆಯ ಮೊದಲ ಹನಿಯನ್ನು ಮಗುವಿನ ಬಾಯಿಗೆ ಹಾಕಿದರು. 1988ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯು ಜಾಗತಿಕ ಪೋಲಿಯೋ ನಿರ್ಮೂಲನೆಗಾಗಿ ಶ್ರಮಿಸುತ್ತಿದೆ. 122ಕ್ಕೂ ಹೆಚ್ಚು ದೇಶಗಳ ಮಕ್ಕಳನ್ನು ರಕ್ಷಿಸಲು ರೋಟರಿಯು 2.10 ಶತಕೋಟಿ ಡಾಲರ್‌ಗಳಿಗಿಂತ ಹೆಚ್ಚು ಮತ್ತು ಲೆಕ್ಕವಿಲ್ಲದಷ್ಟು ಸ್ವಯಂಸೇವಕ ಸಮಯವನ್ನು ವ್ಯಯಿಸುತ್ತಿದೆ ಎಂದು ಹೇಳಿದರು.
ರೋಟರಿ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ ಮಾತನಾಡಿ, ಪೋಲಿಯೋ ಮುಕ್ತ ಪ್ರಪಂಚವನ್ನಾಗಿ ಮಾಡಿಡುವುದು ಈ ಆಚರಣೆ ಮುಖ್ಯ ಧ್ಯೇಯ. ಇಂತಹ ಸಾಂಕ್ರಮಿಕ ರೋಗದಿಂದ ಯಾರೂ ಬಳಲಬಾರದು. ಎಲ್ಲರಿಗೂ ಸುಂದರ ಬದುಕು ದೊರಕಬೇಕು ಎನ್ನುವುದು ಜಾಗೃತಿಯ ಸಂದೇಶ ಎಂದರು.
ರೋಟರಿ ಸಕ್ಕರೆನಾಡು ಸಂಸ್ಥೆ ಅಧ್ಯಕ್ಷ ಸತೀಶ್, ಕಾರ್ಯದರ್ಶಿ ಚಂದ್ರಮೋಹನ್, ಅರ್ಕೇಶ್ವರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಹನುಮಂತಯ್ಯ, ಪ್ರಾಧ್ಯಾಪಕ ಡಾ.ಮನು ಗೊರವಾಲೆ, ನಗರ ಆರೋಗ್ಯ ನೋಡಲ್ ಅಧಿಕಾರಿ ಮನು, ಹಿರಿಯ ಆರೋಗ್ಯ ಪರಿವೀಕ್ಷಕ ರಾಜು ಇತರರಿದ್ದರು. ಇದೇ ಸಂದರ್ಭದಲ್ಲಿ ವಿಶ್ವ ಪೋಲಿಯೋ ದಿನದ ಆಚರಣೆ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಜಾಗೃತಿ ಜಾಥಾ ನಡೆಯಿತು.