

ತುಮಕೂರು: ವಿಶ್ವ ಪೊಲೀಸ್ ಮತ್ತು ಫೈರ್ ಗೇಮ್ -2025 ಕ್ರೀಡಾಕೂಟದ ಗುಡ್ಡಗಾಡು ಓಟ ಸ್ಪರ್ಧೆಯಲ್ಲಿ ತುಮಕೂರಿನ ಗುರುಪ್ರಸಾದ್ ಎರಡು ಚಿನ್ನದ ಪದಕ ಹಾಗೂ 800 ಮೀ., ಓಟ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಅಮೆರಿಕಾದ ಬರ್ಮಿಂಗ್ಹ್ಯಾಮ್ ಆಲ್ಬಮದಲ್ಲಿ ನಡೆದ ವಿಶ್ವ ಪೊಲೀಸ್ ಮತ್ತು ಫೈರ್ ಗೇಮ್-2025ರ ಗುಡ್ಡಗಾಡು (ಕ್ರಾಸ್ ಕಂಟ್ರಿ) ಓಟ 10 ಕಿ.ಮೀ., ಹಾಗೂ 5 ಕಿ.ಮೀ., ಸ್ಪರ್ಧೆಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಗುರುಪ್ರಸಾದ್ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. 800 ಮೀ., ಓಟದಲ್ಲಿ ಕಂಚಿನ ಪದಕ ಪಡೆದಿದ್ದಾರೆ.
ತುಮಕೂರಿನ ತಿಲಕ್ ಪಾರ್ಕ್ ಠಾಣೆಯಲ್ಲಿ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗುರುಪ್ರಸಾದ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇತ್ತೀಚೆಗೆ ಗುಜರಾತಿನ ಗಾಂಧಿನಗರದಲ್ಲಿ ನಡೆದ ಅಖಿಲಭಾರತ ಪೊಲೀಸ್ ಕ್ರೀಡಾಕೂಟ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಪದಕ ವಿಜೇತರಾಗಿ
ವಿಶ್ವ ಪೊಲೀಸ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರು.
ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳಿಯ ಹೊಸೂರು ಗ್ರಾಮದ ಗುರುಪ್ರಸಾದ್ ಈ ಸಾಧನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಹಾಗೂ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಕಾರ್ಯದರ್ಶಿ ಎ.ಎನ್.ಪ್ರಭಾಕರ್ ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.