ಸಂಘಟಿತರಾಗಲಿ ವೃತ್ತಿಪರ ಫೋಟೋಗ್ರಾಫರ್ಸ್

30HBD01
ಹುಮನಾಬಾದ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮದಲ್ಲಿ ಡಿಜಿ ಇಮೇಜ್ ನಮ್ಮ ಇಮೇಜ್ ಕಾರ್ಯಕ್ರಮದ ಭಿತ್ತಿಪತ್ರವನ್ನು ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯ ಬಿಡುಗಡೆಗೊಳಿಸಿದರು. ಎಸ್.ಪರಮೇಶ್ವರ್, ಪವನಸಿಂಗ್ ಠಾಕೂರ್, ಇಮ್ರಾನ್ ಪಟೇಲ್, ಬಸವರಾಜ ತೋಟದ್, ದಿನೇಶ ಗೊಂಟಲ್, ಸಂಜೀವಕುಮಾರ, ಅಶೋಕ ಸಜ್ಜನಶೆಟ್ಟಿ, ರಮೇಶ ಸಜ್ಜನಶೆಟ್ಟಿ, ರೂಪೇಶ ಗೊಂಟಲ್ ಇತರರಿದ್ದರು.
Published on

ಹುಮನಾಬಾದ್: ವೃತ್ತಿಪರ ಛಾಯಾಗ್ರಾಹಕರು ಒಗ್ಗಟ್ಟಾಗುವ ಮೂಲಕ ಸಂಘಟನೆ ಬಲಿಷ್ಠಗೊಳಿಸಿ ಸರ್ಕಾರದ ಸೌಲಭ್ಯ ಪಡೆಯಬೇಕು ಎಂದು ಸ್ಥಳೀಯ ಹಿರೇಮಠದ ಶ್ರೀ ರೇಣುಕಾ ಗಂಗಾಧರ ಶಿವಾಚಾರ್ಯ ನುಡಿದರು.

ಛಾಯಾಗ್ರಾಹಕರ ಸಂಘ ಪಟ್ಟಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ೧೮೫ನೇ ವಿಶ್ವ ಛಾಯಾಗ್ರಹಣ ದಿನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಇಂದಿನ ಮೊಬೈಲ್, ತಂತ್ರಜ್ಞಾನ ಯುಗದಲ್ಲೂ ಫೋಟೋಗ್ರಾಫರ್‌ಗಳ ಸಂಖ್ಯೆ ಹೆಚ್ಚಾಗಿರುವುದೇ ವೃತ್ತಿಪರರ ಪ್ರಾಮುಖ್ಯ ಕಮ್ಮಿಯಾಗಿಲ್ಲ ಎಂಬುದನ್ನು ತೋರಿಸುತ್ತದೆ. ತಾಲೂಕಿನಲ್ಲಿ ಸಂಘ ಉತ್ತಮವಾಗಿ ಬೆಳೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಛಾಯಾಗ್ರಾಹಕರ ಸಂಘದ ಮಾಜಿ ಅಧ್ಯಕ್ಷ ಎಸ್. ಪರಮೇಶ್ವರ್ ಮಾತನಾಡಿ, ಸರ್ಕಾರದಿಂದ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ವೃತ್ತಿಪರ ಫೋಟೋಗ್ರಾಫರ್‌ಗಳು ಸಂಘದ ಸದಸ್ಯತ್ವ ಪಡೆದು ಸಂಘಟಿತರಾಗುವ ಅಗತ್ಯವಿದೆ. ರಾಜ್ಯದಲ್ಲಿ ಸುಮಾರು ಎರಡು ಲಕ್ಷ ಫೋಟೋಗ್ರಾಫರ್‌ಗಳಿದ್ದರೂ ೫೦-೬೦ ಸಾವಿರ ಮಾತ್ರ ಸದಸ್ಯತ್ವವಿದೆ. ಉಳಿದವರು ಸಹ ಸದಸ್ಯತ್ವ ಪಡೆಯುವಂತೆ ಸಂಘ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಪ್ರತಿಯೊಬ್ಬ ವೃತ್ತಿಪರ ಛಾಯಾಗ್ರಾಹಕ ಸಂಘದ ಸದಸ್ಯತ್ವ ಪಡೆದರೆ ಕಾರ್ಡ್ ನೀಡಲಾಗುವುದು. ಕಾರ್ಮಿಕ ಇಲಾಖೆಯಿಂದ ಸೌಲಭ್ಯ ದೊರಕಿಸಿಕೊಡಲು ಸಂಘ ಪ್ರಯತ್ನಿಸಲಿದೆ. ಸಂಘ ಬಲಿಷ್ಠವಾಗಿದ್ದಲ್ಲಿ ಹಾಗೂ ಸಂಘದ ಕಾರ್ಡ್ ಹಾಕಿಕೊಂಡು ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ಫೋಟೋಗ್ರಾಫರ್‌ಗಳಿಗೆ ಗೌರವ ಲಭಿಸಲಿದೆ ಎಂದು ಹೇಳಿದರು.

ಹವ್ಯಾಸಿ ಫೋಟೋಗ್ರಾಫರ್ ತೆಗೆದ ಚಿತ್ರಕ್ಕೂ ಮತ್ತು ವೃತ್ತಿಪರ ಫೋಟೋಗ್ರಾಫರ್ ತೆಗೆದ ಚಿತ್ರಕ್ಕೂ ವ್ಯತ್ಯಾಸವಿದೆ. ಎರಡರ ನಡುವೆ ತುಲನೆ ಮಾಡಲಾಗದು. ಛಾಯಾಚಿತ್ರ ಕಲಾವಿದರು ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಬಸವರಾಜ ತೋಟದ್, ಬೀದರ್ ಜಿಲ್ಲಾಧ್ಯಕ್ಷ ಪವನಸಿಂಗ್ ಠಾಕೂರ್ ಮಾತನಾಡಿದರು. ಬಸವಕಲ್ಯಾಣ ಅಧ್ಯಕ್ಷ ದಿನೇಶ ಗೊಂಟಲ್, ಚಿಂಚೋಳಿ ಅಧ್ಯಕ್ಷ ಸಂಜೀವಕುಮಾರ, ಹಿರಿಯ ಫೋಟೋಗ್ರಾಫರ್‌ಗಳಾದ ಅಶೋಕ ಸಜ್ಜನಶೆಟ್ಟಿ, ಮಾಣಿಕರೆಡ್ಡಿ, ರಮೇಶ ಸಜ್ಜನಶೆಟ್ಟಿ, ಸುರೇಶರೆಡ್ಡಿ, ರೂಪೇಶ ಗೊಂಟಲ್, ಚಂದುಪ್ರಿಯಾ ಇತರರಿದ್ದರು.

ನೂತನ ಪದಾಧಿಕಾರಿಗಳಿಗೆ ಸನ್ಮಾನ: ಹುಮನಾಬಾದ್ ತಾಲೂಕು ಛಾಯಾಗ್ರಾಹಕರ ಸಂಘದ ನೂತನ ಅಧ್ಯಕ್ಷ ಇಮ್ರಾನ್ ಪಟೇಲ್, ಉಪಾಧ್ಯಕ್ಷ ರಾಜುರೆಡ್ಡಿ, ಪ್ರಧಾನ ಕಾರ್ಯದರ್ಶಿ ಗುರುನಾಥ ಪಂಚಾಲ, ಖಜಾಂಚಿ ರಾಜಣ್ಣ ಮುಗುಳಿ ಹಾಗೂ ಸದಸ್ಯರು, ಹಿರಿಯ ಫೋಟೋಗ್ರಾಫರ್‌ಗಳನ್ನು ಸನ್ಮಾನಿಸಲಾಯಿತು.

ಛಾಯಾಚಿತ್ರ ಕಲಾವಿದರಲ್ಲಿ ಕೌಶಲ ಹೆಚ್ಚಿಸಲು ಸಂಘದ ರಾಜ್ಯ ಘಟಕ ಕೇಂದ್ರದ ಕೌಶಲಾಭಿವೃದ್ಧಿ ಇಲಾಖೆ ಸಹಯೋಗದಡಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಫೋಟೋಗ್ರಾಫಿ, ವಿಡಿಯೋಗ್ರಾಫಿ, ಎಡಿಟಿಂಗ್ ಮತ್ತು ಡಿಸೈನ್ ವಿಭಾಗದಲ್ಲಿ ತರಬೇತಿ ಜತೆಗೆ ಪ್ರಮಾಣಪತ್ರ ನೀಡಲಿದೆ. ಸಂಘದ ದಶಮಾನೋತ್ಸವ ನಿಮಿತ್ತ ಸೆ.೨೦ರಿಂದ ಮೂರು ದಿನ ಬೆಂಗಳೂರು ಅರಮನೆ ಮೈದಾನದಲ್ಲಿ ಡಿಜಿ ಇಮೇಜ್ ನಮ್ಮ ಇಮೇಜ್ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲರೂ ಭಾಗವಹಿಸಬೇಕು.
| ಎಸ್.ಪರಮೇಶ್ವರ್ ಕೆಪಿಎ ಮಾಜಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net