ಛಾಯಾಗ್ರಾಹಕರಿಗೆ ಸರ್ಕಾರದಿಂದ ಸೌಲಭ್ಯ: ಸಚಿವ ಎನ್.ಚಲುವರಾಯಸ್ವಾಮಿ ಭರವಸೆ

World Photographer Day Mandya
Published on

ಮಂಡ್ಯ: ಛಾಯಾಗ್ರಾಹಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.

ನಗರದ ಕಾವೇರಿ ಕಲ್ಯಾಣ ಮಂಟಪದಲ್ಲಿ ಮಾಂಡವ್ಯ ವೃತ್ತಿಪರ ಛಾಯಾಚಿತ್ರಗ್ರಾಹಕರ ಸಂಘ, ಸ್ಪಂದನಾ ಆಸ್ಪತ್ರೆ ಸಹಯೋಗದಲ್ಲಿ 185ನೇ ವಿಶ್ವ ಛಾಯಾಗ್ರಾಹಕ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವೈದ್ಯಕೀಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಛಾಯಾಚಿತ್ರಕ್ಕೆ ಅದರದೇ ಆದ ಇತಿಹಾಸವಿದೆ. ಇದರಲ್ಲಿ ಹಲವು ಸಾಧಕರನ್ನು ನೋಡಿಕೊಂಡು ಬಂದಿದ್ದೇವೆ. ವೃತ್ತಿಪರ ಛಾಯಾಚಿತ್ರಗಾರರ ಸಮಸ್ಯೆಗಳನ್ನು ಹೇಳಿದ್ದೀರಿ. ಅದನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು ಎಂದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ವೃತ್ತಿಪರ ಛಾಯಾಚಿತ್ರಗಾರರಿಗೆ ನಿವೇಶನ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು. ಸರ್ಕಾರದಿಂದಲೂ ನಿವೇಶನ ಹಾಗೂ ವಸತಿ ಕಲ್ಪಿಸಲು ಮುಖ್ಯಮಂತ್ರಿ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಚಲನಚಿತ್ರ ನಟಿ ಭಾವನಾ, ಸಂಘದ ಅಧ್ಯಕ್ಷ ವಿನೋದ್ ಇತರರಿದ್ದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡದ ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಹಿರಿಯ ಛಾಯಾಗ್ರಾಹಕರಿಗೆ ಛಾಯಾ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net