

ಉಡುಪಿ: ಜನರ ಅರೋಗ್ಯ ಹಾಗೂ ಸಮಾಜದ ಸ್ವಾಸ್ಥ$್ಯ ಕಾಪಾಡುತ್ತಿರುವ ಔಷಧ ತಜ್ಞರ ಸೇವೆ ಶ್ಲಾಘನೀಯ ಎಂದು ಡಾ.ಎ.ವಿ ಬಾಳಿಗಾ ಆಸ್ಪತ್ರೆಯ ವೈದ್ಯಕಿಯ ನಿರ್ದೇಶಕ ಡಾ. ಪಿ. ವಿ ಭಂಡಾರಿ ಹೇಳಿದರು.
ದೊಡ್ಡಣಗುಡ್ಡೆ ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗಾ ಸಭಾಂಗಣದಲ್ಲಿ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ, ಸಹಾಯಕ ಔಷಧ ನಿಯಂತ್ರಕರ ಕಚೇರಿ, ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಹಾಗೂ ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಔಷಧ ತಜ್ಞರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಆರೋಗ್ಯ ರಕ್ಷಣಾ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡವಿದ್ದು, ವೈದ್ಯರುಗಳು ಹಾಗೂ ಔಷಧಿ ಪೂರೈಕೆದಾರರು ಇದನ್ನು ಸಮರ್ಥವಾಗಿ ಎದುರಿಸಬೇಕು. ಔಷಧಿ ಪೂರೈಕೆದಾರರು ತಮ್ಮಲ್ಲಿರುವ ಔಷಧಿಗಳ ಪೂರ್ವಾಪರಗಳ ಕುರಿತು ಹೆಚ್ಚಿನ ಮಾಹಿತಿಯನ್ನು ಹೊಂದಿರಬೇಕು. ಔಷಧಿ ತಜ್ಞರು ನೀಡಿದ ಔಷಧಿಗಳನ್ನು ರೋಗಿಗಳು ವೈದ್ಯರ ಬಳಿ ತೋರಿಸಿದ ಮೇಲೆಯೇ ತೆಗೆದುಕೊಳ್ಳಬೇಕು.
ಇಂದಿನ ಆಧುನಿಕ ಜೀವನಶೈಲಿ ಹಾಗೂ ಆಹಾರ ಪದ್ಧತಿಗಳು ದೈನಂದಿನ ಚಟುವಟಿಕೆಗಳ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತಿದ್ದು, ಪ್ರತಿಯೊಬ್ಬರೂ ತಮ್ಮ ಆರೋಗ್ಯವನ್ನು ಉತ್ತಮವಾಗಿರಿಸಿಕೊಳ್ಳಬೇಕು. ದಿನನಿತ್ಯ ವ್ಯಾಯಾಮ, ಕ್ರೀಡೆಯಲ್ಲಿ ಪಾಲ್ಗೊಳ್ಳುವಿಕೆ ಸೇರಿದಂತೆ ಮತ್ತಿತರ ದೈಹಿಕ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು. ದೇಹ ಸ್ವಸ್ಥವಾಗಿದ್ದಾಗ ಮನಸ್ಸೂ ಸ್ವಸ್ಥವಾಗಿದ್ದು, ಇದರಿಂದ ರೋಗ-ರುಜಿನ ಮುಕ್ತರಾಗಿ ಆರೋಗ್ಯಕರ ಜೀವನ ನಡೆಸಬಹುದು ಎಂದರು.
ಇದೇ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಿರಿಯ ಔಷಧ ತಜ್ಞರಾದ ಬಿ.ಗಣಪತಿ ಕಾಮತ್, ಪಿ.ರಮೇಶ್ ನಾಯಕ್, ಭೋಜರಾಜ ಶೆಟ್ಟಿ, ಮೋಹನ್ ಆಚಾರ್ಯ, ದಯಾನಂದ ಪ್ರಭು, ಟಿ.ಪ್ರೇಮಚಂದ್ರ ಪೈ, ದಿನಕರ ಪ್ರಭು, ಜಯಪ್ರಕಾಶ್ ಶೆಟ್ಟಿ ಹಾಗೂ ತ್ರಿವಿಕ್ರಮ್ ಶೆಣೈ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಜಿಪಂ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಸಹಾಯಕ ಔಷಧಿ ನಿಯಂತ್ರಕ ಶಂಕರ್ ನಾಯ್ಕ್, ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಮೇಶ್ ನಾಯಕ್, ಸಾಯಿರಾಧ ಮೆಡಿಕಲ್ಸ್ನ ಮನೋಹರ್ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷ ವಿ.ಜಿ.ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಶೆಟ್ಟಿ ಸ್ವಾಗತಿಸಿ, ಸತೀಶ್ ಚಂದ್ರ ನಾಯಕ್ ನಿರೂಪಿಸಿ, ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ರಾವ್ ವಂದಿಸಿದರು.