

ಚಿಕ್ಕಬಳ್ಳಾಪುರ: ಆಧ್ಯಾತ್ಮಿಕ ಭಕ್ತಿ ಮತ್ತು ಪ್ರಾಮಾಣಿಕ ಶ್ರದ್ಧೆ ಮೇಲುಗೈ ಸಾಧಿಸಿದಾಗ ವಿಶ್ವದಲ್ಲಿ ಶಾಂತಿ ಮೂಡುತ್ತದೆ ಎಂದು ಸಣ್ಣ ನೀರಾವರಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಖಾತೆ ಸಚಿವ ಎಸ್.ಎನ್.ಬೋಸರಾಜು ಅಭಿಪ್ರಾಯಪಟ್ಟರು.
ತಾಲೂಕಿನ ಮುದ್ದೇನಹಳ್ಳಿಯಲ್ಲಿ ಹಮ್ಮಿಕೊಂಡಿರುವ ದಸರಾ ಮಹೋತ್ಸವ, ನವರಾತ್ರಿ ಹೋಮ, ಮಹಾರುದ್ರ ಯಾಗ ವೇದಿಕೆಯಲ್ಲಿ ಬುಧವಾರ ಮೇಧಾ ದಕ್ಷಿಣಾಮೂರ್ತಿ ಮತ್ತು ಸರಸ್ವತಿ ಹೋಮದ ಪೂರ್ಣಾಹುತಿಯಲ್ಲಿ ಭಾಗವಹಿಸಿ ಮಾತನಾಡಿದರು.
ಪುರಾಣ ಇತಿಹಾಸಗಳು ಸಂಸ್ಕೃತಿ, ಆಚಾರ ವಿಚಾರಗಳು ಸಾಗಿ ಬಂದಿರುವುದರ ಬಗ್ಗೆ ಮಾರ್ಗದರ್ಶನ ನೀಡುತ್ತವೆ. ಇವುಗಳ ಆಧಾರದ ನಂಬಿಕೆ ಮತ್ತು ಆಚರಣೆಗಳು ಬಲಗೊಳ್ಳುತ್ತಾ ಹೋದಂತೆ ಸಾಮರಸ್ಯ ಮೂಡುತ್ತದೆ. ಹಾಗೆಯೇ ಶಾಂತಿ ನೆಲೆಸುತ್ತದೆ ಎಂದರು.
ಸಕರ್ಮಗಳೂ ದೊಡ್ಡ ಯಾಗದಂತೆ: ಯಜ್ಞಾಧ್ಯಕ್ಷತೆ ಮತ್ತು ಮಹಾ ರುದ್ರಯಾಗ ಸಾನಿಧ್ಯ ವಹಿಸಿದ್ದ ಸದ್ಗುರು ಶ್ರೀ ಮಧುಸೂದನ ಸಾಯಿ ಮಾತನಾಡಿ, ಭಕ್ತಿಯಿಂದ ಅರ್ಪಿಸಿದ ಪ್ರತಿಯೊಂದು ಸಕರ್ಮಗಳು ದೊಡ್ಡ ಯಾಗವೇ ಆಗಿರುತ್ತದೆ. ಒಳ್ಳೆಯ ಕಾರ್ಯಗಳು ಭಗವಂತನದ್ದಾಗಿರುತ್ತದೆ. ಇಂತಹ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದಾಗ ಜೀವನಕ್ಕೆ ಸಾರ್ಥಕತೆ ಬರುತ್ತದೆ ಎಂದರು. ಸಂಸ್ಕಾರ, ಸಂಸ್ಕೃತಿ, ಪರಂಪರೆಯನ್ನು ರಕ್ಷಿಸಿ ಪೋಷಿಸುವುದು ಕೂಡ ಧರ್ಮ. ತೋರಿಕೆಯ ಯಾವುದೇ ಕಾರ್ಯಗಳು ಸತ್ಫಲ ನೀಡುವುದಿಲ್ಲ. ಇನ್ನು ಆಚಾರ ವಿಚಾರಗಳು ನಿಂತ ನೀರಾಗದೇ ನಿರಂತರವಾಗಿ ಪ್ರವಹಿಸಬೇಕು ಎಂದರು.
ಸಚಿವ ಚಲುವರಾಯಸ್ವಾಮಿ, ಸತ್ಯಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ಕುಲಾಧಿಪತಿ ನರಸಿಂಹಮೂರ್ತಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಮತ್ತಿತರರು ಇದ್ದರು.
ಬಿ.ವೈ. ವಿಜಯೇಂದ್ರ ಭಾಗಿ
ವಸುಧೈವ ಕುಟುಂಬಕಂ ಧ್ಯೇಯದೊಂದಿಗೆ ‘ಸೇವೆ ಮತ್ತು ಆಧ್ಯಾತ್ಮಿಕತೆಯ’ ವಿಶಿಷ್ಟ ಜಾಗತಿಕ ಮಿಷನ್‌ನಡಿ ಪೌಷ್ಟಿಕತೆ, ಶಿಕ್ಷಣ, ಆರೋಗ್ಯ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳ ಸುಧಾರಣೆಗೆ ಸಮರ್ಪಿಸಿಕೊಂಡಿರುವ ಸದ್ಗುರುಗಳ ಸೇವೆ ಅನನ್ಯವಾದುದು ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಸತ್ಯಸಾಯಿ ಸಂಸ್ಥೆಯ ಸೇವಾ ಚಟುವಟಿಕೆಯು ಇಡೀ ಜಗತ್ತಿಗೆ ಮಾದರಿ. ಲೋಕ ಕಲ್ಯಾಣಾರ್ಥದ ನಿಜವಾದ ಮಹಾತ್ಕಾರ್ಯದ ಯಾಗ ನಡೆಯುತ್ತಿದೆ ಎಂದರು. ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಮತ್ತಿತರರು ಇದ್ದರು.
ವಿಶ್ವಶಾಂತಿಗಾಗಿ ಪ್ರಾರ್ಥನೆ
ನವರಾತ್ರಿ 7ನೇ ದಿನದಂದು ಜಗತ್ತಿನ ಶಾಂತಿ ಮತ್ತು ಕಲ್ಯಾಣವನ್ನು ಗುರಿಯಾಗಿಸಿಕೊಂಡು ಅಧಿದೇವತೆ ಮಾತೆ ಕಾಳರಾತ್ರಿಯನ್ನು ಆರಾಧಿಸಲಾಯಿತು. ವಿಜಯ ದಶಮಿಯವರೆಗೆ ಲೋಕ ಕಲ್ಯಾಣಾರ್ಥವಾಗಿ ನಡೆಯಲಿರುವ ಮಹಾರುದ್ರ ಯಾಗಕ್ಕೆ ಚಾಲನೆ ನೀಡಲಾಯಿತು.
ಇದು ಖುಷಿ ವಿಚಾರ
ಸತ್ಯಸಾಯಿ ಲೋಕಸೇವಾ ಸಂಸ್ಥೆಯು ಅನೇಕರಿಗೆ ಗುಣಮಟ್ಟದ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಶಕ್ತಿ ನೀಡಿದೆ. ಇದರಲ್ಲಿ ನಾನು ಒಬ್ಬನಾಗಿರುವುದು ಖುಷಿಯ ವಿಚಾರ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಸಂತಸ ವ್ಯಕ್ತಪಡಿಸಿದರು.
ಕೆಎಚ್‌ಎಂ ಪೂಜೆ
ವಿಶ್ವ ಶಾಂತಿ ಮತ್ತು ಆರೋಗ್ಯ ವರ್ಧನೆಗಾಗಿ ಕೈಗೊಂಡಿದ್ದ ಮಹಾ ಮೃತ್ಯುಂಜಯ ಹೋಮ ಮತ್ತು ಸಪ್ತ ದ್ರವ್ಯ ಹವನ ಯಜ್ಞ ಹೋಮಕ್ಕೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹವಿಸ್ಸು ಅರ್ಪಿಸಿದರು. ಭಾರತವು ಧರ್ಮಗಳ ಸಮನ್ವಯದ ಬೀಡು. ಇಲ್ಲಿ ಸಂಸ್ಕೃತಿಯು ಮಾನವ ಸಹಜ ಬಾಳ್ವೆ. ಸದಾ ಸಮಾಜ ಸುಧಾರಣೆಯ ಧ್ಯೇಯವನ್ನು ಹೊಂದಿರುವ ಸತ್ಯಸಾಯಿ ಸಂಸ್ಥೆಯು ಪ್ರಪಂಚಕ್ಕೆ ಮಾದರಿಯಾದ ಸೇವೆಯನ್ನು ಕೈಗೊಳ್ಳುತ್ತಿದೆ ಎಂದರು.