

ಬೆಂಗಳೂರು ರಾಮಯ್ಯ ಸ್ಮಾರಕ ಆಸ್ಪತ್ರೆ ವಿಶ್ವ ಪಾರ್ಕಿನ್ಸನ್ ದಿನದ ಪ್ರಯುಕ್ತ ‘ದಿ ಟುಪಿಲ್ಸ್ ಆೃಂಡ್ ಸ್ಪಾರ್ಕ್ ಪಿಡಿ ಕಾರ್ನಿವಾಲ್’ ಎಂಬ ಶೀರ್ಷಿಕೆಯ ಅಡಿ ಪಾರ್ಕಿನ್ಸನ್ ಕಾಯಿಲೆ ಕುರಿತು ಅರಿವು ಮೂಡಿಸಿತು.
ಕಾರ್ಯಕ್ರಮದಲ್ಲಿ ಹಾಲಿ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿರುವ ರೋಗಿಗಳು ಆಗಮಿಸಿ ತಮ್ಮ ಅನುಭವವನ್ನು ಹಂಚಿಕೊಳ್ಳುವ ಮೂಲಕ ಕಾಯಿಲೆಯ ಸ್ವರೂಪ ಮತ್ತು ಸಾರ್ವಜನಿಕರಲ್ಲಿ ಕಾಯಿಲೆಗೆ ಬಗ್ಗೆ ಜಾಗೃತಿ ಮೂಡಿಸಿದರು.
ಭಾರತದಲ್ಲಿ 7 ಮಿಲಿಯನ್ ಜನರು ಈ ಪಾರ್ಕಿನ್ಸನ್ ಕಾಯಿಲೆಗೆ ಒಳಗಾಗಿದ್ದಾರೆ. ರೋಗಿಗಳ ಗಮನವನ್ನು ಬೇರೆ ಕಡೆ ಸೆಳೆಯುವ ಉದ್ದೇಶದಿಂದ ಅವರಿಗೆ 10ಕ್ಕೂ ಹೆಚ್ಚಿನ ಆಟಗಳನ್ನು ಆಯೋಜನೆ ಮಾಡಿತ್ತು.
ಈ ಬಗ್ಗೆ ಮಾತನಾಡಿದ ರಾಮಯ್ಯ ಸ್ಮಾರಕ ಆಸ್ಪತ್ರೆ ಅಧ್ಯಕ್ಷ ಡಾ. ಎಸ್.ಸಿ. ನಾಗೇಂದ್ರ ಸ್ವಾಮಿ, ಈ ಪಾರ್ಕಿನ್ಸನ್ ಕಾಯಿಲೆಗೆ ಒಳಗಾಗಿರುವವರು ಜೀವನದಲ್ಲಿ ವಿಶ್ವಾಸವನ್ನು ಕಳೆದುಕೊಂಡಿರುತ್ತಾರೆ. ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ. ನಮ್ಮಲ್ಲಿರುವ ಈ ರೋಗಿಗಳಿಗೆ ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದು, ಕಾಲಕಾಲಕ್ಕೆ ಔಷಧಿ ನೀಡಿ ಅವರನ್ನು ಮತ್ತಷ್ಟು ಕಾಲ ಸುಖದಿಂದ ಬದುಕಲು ಸಹಾಯ ಮಾಡುತ್ತಾರೆ ಎಂದರು.
ರಾಮಯ್ಯ ಸ್ಮಾರಕ ಆಸ್ಪತ್ರೆ ನರಶಾಸ್ತ್ರ ವಿಭಾಗದ ಆಪ್ತ ಸಮಾಲೋಚಕ ಡಾ. ಅನಿಶ್ ಮೆಹ್ತಾ ಮಾತನಾಡಿ, ಈ ಕಾಯಿಲೆ ಸಾಮಾನ್ಯವಾಗಿ 50 ವರ್ಷ ದಾಟಿದ ಮೇಲೆ ಕಂಡು ಬರುತ್ತದೆ. ದೇಹದ
ಅಂಗಗಳು ಅಲುಗಾಡುವುದು, ಕೈ ನಡುಕ, ಕೋಪ, ಯೋಚನೆಗೆ ಒಳಗಾಗುವುದು ಇದೆಲ್ಲಾ ಈ ಕಾಯಿಲೆಯು ಲಕ್ಷಣಗಳಾಗಿವೆ. ಈ ರೀತಿ ಸಮಸ್ಯೆಗಳಿಂದ ಬಳುತ್ತಿರುವವರುನ್ನು ಗುರುತಿಸಿ ತಕ್ಷಣ ಚಿಕಿತ್ಸೆಗೆ ಒಳಪಡಿಸಬೇಕೆಂದರು.
ಈ ರೋಗಿಗಳು ಕಾಲ ಕಳೆದಂತೆ ಅವರು ಜೀವನದಲ್ಲಿ ತಮ್ಮ ಆತ್ಮವಿಶ್ವಾಸವನ್ನೇ ಕಳೆದುಕೊಂಡು ಬಿಡುತ್ತಾರೆ. ಇವರಿಗೆ ಸಮಯಕ್ಕೆ ತಕ್ಕಂತೆ ಚಿಕಿತ್ಸೆ ಮತ್ತು ವ್ಯಾಯಮ ಮಾಡುವುದು ಹೇಳಿಕೊಡಬೇಕು. ಇದಕ್ಕಾಗಿಯೇ ಕೆಲವು ಥೆರಪಿಗಳನ್ನೂ ನೀಡಬೇಕು ಎಂದರು.
ಈ ರೀತಿಯ ರೋಗಿಗಳಿಗಾಗಿ ರಾಮಯ್ಯ ಸ್ಮಾರಕ ಆಸ್ಪತ್ರೆ ಪ್ರತಿ ಬುಧವಾರ ಮಧ್ಯಾಹ್ನ 2 ಗಂಟೆಯಿಂದ 4 ಗಂಟೆಯವರೆಗೆ ವಿಶೇಷ ಕ್ಲಿನಿಕ್ ತೆರೆದಿರುತ್ತದೆ ಎಂದು ಹೇಳಿದರು.