

ಮಂಡ್ಯ: ಓಜೋನ್ ಪದರ ಭೂಮಂಡಲದ ಜೀವರಾಶಿಗಳ ಸಂರಕ್ಷಣಾ ವಜ್ರಕವಚ ಎಂದು ಅಂತರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ ಹನುಮಂತು ಹೇಳಿದರು.
ನಗರದ ಬಾಲಭವನದ ಉದ್ಯಾನದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಹಾಗೂ ವಿವೇಕಾನಂದ ಅಲಯನ್ಸ್ ಸಂಸ್ಥೆ, ಆಲೆಪ್ಪಿ ಅಲಯನ್ಸ್ ಸಂಸ್ಥೆ, ಕಾಂಟ್ರಾಕ್ಟರ್ ಅಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ವಿಶ್ವ ಓಜೋನ್ ದಿನಾಚರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಓಜೋನ್ ಪದರ ವಾಯುಮಂಡಲದಲ್ಲಿನ ತೆಳುವಾದ ಪದರ. ಅದು ಸೂರ್ಯನ ನೆರಳಾತೀತ ಕಿರಣಗಳು ಭೂಮಿಗೆ ಬೀಳದಂತೆ ತಡೆದು ಜೀವರಾಶಿಯನ್ನು ರಕ್ಷಿಸುತ್ತಿದೆ ಎಂದರು.
2010ರ ವೇಳೆಗೆ ಪ್ರಪಂಚದಾದ್ಯಂತ ಓಜೋನ್ ಸ್ನೇಹಿ ವಾತಾವರಣವನ್ನು ಸೃಷ್ಟಿಸುವ ಗುರಿ ಹೊಂದಲಾಗಿತ್ತು. ಆದರೆ ಗುರಿಯನ್ನು ತಲುಪಲಾಗಿಲ್ಲವಾದರೂ ಓಜೋನ್ ಪದರವನ್ನು ಉಳಿಸುವಲ್ಲಿ ಜಗತ್ತು ಗಮನಾರ್ಹವಾದ ಕೆಲಸವನ್ನು ಮಾಡುತ್ತಿದೆ. ಈ ಪ್ರಯತ್ನದ ಫಲವೇ ಇಂದು ಓಜೋನ್ ಸ್ನೇಹಿ ಫ್ರಿಡ್ಜ್, ಕೂಲರ್ ಮಾರುಕಟ್ಟೆಗೆ ಬಂದಿವೆ. ಆದಾಗ್ಯೂ ಓಜೋನ್ ಪದರದಲ್ಲಿ ರಂಧ್ರ ಕಾಣಿಸಿಕೊಂಡು, ಅದು ಕ್ಷೀಣಿಸುತ್ತಿದೆ. ಈ ಪದರವು ಸಂಪೂರ್ಣವಾಗಿ ಕ್ಷೀಣಿಸಿದರೆ ಭೂಮಿಯಲ್ಲಿನ ಜೀವಿ ಮತ್ತು ಸಸ್ಯರಾಶಿಗಳ ಮೇಲೆ ಗಂಭೀರ ಪರಿಣಾಮ ಬೀರುವುದಲ್ಲದೆ, ಆರೋಗ್ಯ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಜಾಗೃತಿ ಮೂಡಿಸಬೇಕಿದೆ. ಭೂಮಿಯಲ್ಲಿ ಸಸ್ಯ ಸಂಪತ್ತು ಹೆಚ್ಚಾದರೆ ಜೀವರಕ್ಷಕ ಕವಚ ಆರೋಗ್ಯಕರವಾಗಿರುತ್ತದೆ ಎಂದರು.
ಪರಿಸರ ಮಾಲಿನ್ಯ ತಜ್ಞೆ ಪೊ.ಭವ್ಯಾ ಮಾತನಾಡಿ, ಮಾನವ ನಿರ್ಮಿತ ರಾಸಾಯನಿಕ, ಎಸಿ, ಸುಗಂಧ ದ್ರವ್ಯ, ವಿಷಕಾರಿ ಅನಿಲಗಳಿಂದ ಓಜೋನ್ ಪದರಕ್ಕೆ ಧಕ್ಕೆಯಾಗುತ್ತಿದೆ. ಪರಿಸರ ಸ್ನೇಹಿ ವಸ್ತುಗಳ ಬಳಕೆ ಹೆಚ್ಚಾಗಬೇಕು, ಆರೋಗ್ಯಕ ವಾತಾವರಣಕ್ಕಾಗಿ ಮರಗಳ ಸಂಖ್ಯೆ ಹೆಚ್ಚಾಗಬೇಕು. ವಿಜ್ಞಾನಿಗಳ ಪ್ರಕಾರ ಕ್ಲೋರಿನ್ ಅಣು ಓಜೋನ್‌ನ ಒಂದು ಲಕ್ಷ ಮಾಲಿಕ್ಯೂಲ್‌ಗಳನ್ನು ನಾಶ ಮಾಡಬಲ್ಲದು ಎಂದು ಆತಂಕ ವ್ಯಕ್ತಪಡಿಸಿದರು.
ಪ್ರತಿಭಾಂಜಲಿ ಸಂಸ್ಥೆ ಅಧ್ಯಕ್ಷ ಪ್ರೊ.ಡೇವಿಡ್, ಮಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ.ರಾಮಲಿಂಗಯ್ಯ, ಬಿಜೆಪಿ ನಗರ ಘಟಕದ ಅಧ್ಯಕ್ಷ ವಸಂತಕುಮಾರ್, ಕೃತಿಕ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಮಂಜುನಾಥ, ಆಲಪ್ಪಿ ಅಲಯನ್ಸ್ ಸಂಸ್ಥೆ ಅಧ್ಯಕ್ಷ ಶಂಕರಯ್ಯ, ಕಾರ್ಯದರ್ಶಿ ಉಮೇಶ್ ರಾಮಕೃಷ್ಣ, ಮುಖಂಡರಾದ ತಿಮ್ಮೇಗೌಡ, ಕುಮಾರಸ್ವಾಮಿ, ಪುಟ್ಟಲಿಂಗ, ಪ್ರಸಾದ್, ಲೋಕೇಶ್ ಇತರರಿದ್ದರು.