

ಮಂಡ್ಯ: ವಿದ್ಯಾರ್ಥಿಗಳು ದೇಶದ ಮುಂದಿನ ಅಭಿವೃದ್ಧಿಯ ಶಕ್ತಿ. ಆದ್ದರಿಂದ ಅವರನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಿ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಆನಂದ್ ಸಲಹೆ ನೀಡಿದರು.
ನಗರದ ಎಸ್‌ಬಿ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ವಾರ್ತಾ ಮತ್ತು ಪ್ರಚಾರ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಕಚೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಬಾಯಿ ಆರೋಗ್ಯ ಕಾರ್ಯಕ್ರಮದ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ನೋಡಿಕೊಳ್ಳುವುದು ಜಾಣತನ. ಆದ್ದರಿಂದ ತಂಬಾಕು ಸೇವನೆಯಿಂದ ದೂರವಿರಲು ಹಾಗೂ ಅದರಿಂದ ಉಂಟಾಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸಬೇಕು. ಸಮಾಜದಲ್ಲಿ ಪ್ರತಿ ದಿನ ವಿವಿಧ ರೀತಿಯ ಜನರನ್ನು ಭೇಟಿ ಮಾಡುತ್ತೇವೆ. ತಂಬಾಕು ಸೇವನೆಯಿಂದ ನಮ್ಮನ್ನು ನಾವು ಕಾಪಾಡಿಕೊಳ್ಳುವ ಸನ್ನಿವೇಶ ಎದುರಾಗುತ್ತದೆ. ಆದ್ದರಿಂದ ಸದಾ ಎಚ್ಚರದಿಂದ ತಂಬಾಕು ಉತ್ಪನ್ನಗಳಿಂದ ದೂರವಿರಿ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಒಳ್ಳೆಯ ಸಂಸ್ಕಾರ, ಆಚಾರ, ವಿಚಾರಗಳನ್ನು ಪಾಲಿಸಿ ದೇಶಕ್ಕೆ ಉತ್ತಮ ಕೊಡುಗೆ ಸಲ್ಲಿಸಿ. ಮಾದಕ ವ್ಯಸನಗಳಿಂದ ದೂರವಿರಿ. ಈ ವರ್ಷದ ವಿಶ್ವ ತಂಬಾಕು ರಹಿತ ದಿನಾಚರಣೆ ಅಂಗವಾಗಿ ಆಕರ್ಷಕ ಉತ್ಪನ್ನಗಳು ಕರಾಳ ಉದ್ದೇಶಗಳು ಎಂಬ ಧ್ಯೇಯ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಎಚ್.ಕುಮಾರ್ ಮಾತನಾಡಿ, ಸರ್ಕಾರದ ಆದೇಶದಂತೆ ಶಾಲೆಯ ಆವರಣದ 100 ಮೀಟರ್ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ಹಾಗೂ ತಂಬಾಕು ಸೇವನೆ ಮಾಡುವವರಿಗೆ 1000 ರೂ ದಂಡ ವಿಧಿಸಲು ಅವಕಾಧವಿದೆ. ಆದರೆ ಕೇವಲ ದಂಡ ವಿಧಿಸುವುದರಿಂದ ತಂಬಾಕುಗಳಂತಹ ಮಾದಕ ವಸ್ತುಗಳನ್ನು ತಡೆಗಟ್ಟಲು ಸಾಧ್ಯವಿಲ್ಲ. ಶಾಲಾ, ಕಾಲೇಜು ಮಕ್ಕಳಿಗೆ ಇದರ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಬೇಕು. ತಂಬಾಕು ನಿರಂತರ ಸೇವನೆಯಿಂದ ದೇಹದ ಎಲ್ಲ ಭಾಗಗಳು ಹಾಳಾಗುತ್ತವೆ. ಇದರ ಕುರಿತು ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಮಾತನಾಡಿ, ಮಕ್ಕಳು ಉತ್ತಮ ಮನಸ್ಸಿನ ಚೇತನರು. ಅವರ ಮನಸ್ಸಿನಲ್ಲಿ ಯಾವುದೇ ಕಲ್ಮಶ ಇರುವುದಿಲ್ಲ. ಆದರೆ ಅತ್ಯಂತ ಎಳೆಯ ವಯಸ್ಸಿನಲ್ಲೇ ಮಕ್ಕಳು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಎಂಬುದು ದುಃಖಕರ ಸಂಗತಿಯಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಮಾದಕ ವಸ್ತುಗಳಿಂದ ನಮ್ಮ ಯುವ ಜನತೆಯನ್ನು ಕಾಪಾಡಿಕೊಳ್ಳುವ ಸಂದರ್ಭ ಎದುರಾಗಿದೆ. ಸಾಧ್ಯವಾದಷ್ಟು ನಿಮ್ಮ ಮಕ್ಕಳ ಮೇಲೆ ನಿಗಾವಹಿಸಿ. ಮಕ್ಕಳಿಗೆ ಧ್ಯಾನವನ್ನು ಮಾಡಿಸಿ. ಅಂತೆಯೇ ವಿವಿಧ ಕ್ರಿಯಾಶೀಲ ಚಟುವಟಿಕೆಗಳಲ್ಲಿ ಅವರನ್ನು ಕಾರ್ಯಮಗ್ನರನ್ನಾಗಿಸಿ. ಆಗ ಏಕಾಗ್ರತೆ ಹೆಚ್ಚುತ್ತದೆ. ಮಕ್ಕಳಿಗೆ ತಾವು ಮಾಡುತ್ತಿರುವ ತಪ್ಪು ಸರಿಗಳನ್ನು ಗುರುತಿಸುವ ಸಾಮರ್ಥ್ಯ ವೃದ್ಧಿಸುತ್ತದೆ ಎಂದು ಕಿವಿಮಾತು ಹೇಳಿದರು.
ಮಿಮ್ಸ್‌ನ ಸಮುದಾಯ ಆರೋಗ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಲಿಂಗಪ್ಪ ಎಸ್.ಹೂಗಾರ್ ಮಾತನಾಡಿ, ತಂಬಾಕು ಉತ್ಪನ್ನಗಳಿಂದ ಮಾರಕ ರೋಗಗಳು ಉಂಟಾದರೂ ಸಹ ಬಳಕೆದಾರರ ಸಂಖ್ಯೆ ಕಡಿಮೆಯಾಗಿಲ್ಲ. ತಂಬಾಕು ನಮ್ಮ ದೇಹದ ಪ್ರತಿ ಭಾಗವನ್ನು ಸಹ ಹಾಳು ಮಾಡುವ ಸಾಮರ್ಥ್ಯ ಹೊಂದಿದೆ. ತಂಬಾಕು ಮಾರಾಟ ಕಂಪನಿಗಳು ಮಾರ್ಕೆಟಿಂಗ್ ತಂತ್ರ ಬಳಸಿ ನಿಮ್ಮ ಜೀವನದ ಜತೆ ಆಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್ ಮಾತನಾಡಿ, ಸಾಮಾನ್ಯವಾಗಿ 14ರಿಂದ 25 ವರ್ಷದ ಒಳಗಿನವರು ಹೆಚ್ಚಾಗಿ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ. ಶೇ.80ರಷ್ಟು ಜನ ಮಾದಕ ಸೇವನೆಯ ಸಮಯದಲ್ಲಿ ಪಾಪ ಕೃತ್ಯವ್ಯಸಗೆ ಜೈಲಿಗೆ ಬರುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ತಿಮ್ಮರಾಜು, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಅಶ್ವಥ್, ಜಿಲ್ಲಾ ದಂತ ಭಾಗ್ಯ ನೋಡಲ್ ಅಧಿಕಾರಿ ಡಾ.ಅರುಣಾನಂದ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ ಇತರರಿದ್ದರು.