ದೇಶವನ್ನು ತಂಬಾಕು ಮುಕ್ತಗೊಳಿಸೋಣ: ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ.ಆನಂದ ಕರೆ

World No Tobacco Day Celebration at Mims mandya
Published on

ಮಂಡ್ಯ: ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಈ ಮೂಲಕ ಮೂಲಕ ದೇಶವನ್ನು ತಂಬಾಕು ಮುಕ್ತಗೊಳಿಸೋಣ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಂ.ಆನಂದ ಕರೆ ನೀಡಿದರು.

ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಇ.ಎನ್.ಟಿ ಸಭಾಂಗಣದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಮಕ್ಕಳೇ ನಾಳೆ ದೇಶದ ಪ್ರಜೆಗಳಾಗಿ ಅಭಿವೃದ್ಧಿಗೆ ಕೈಜೋಡಿಸುತ್ತಾರೆ. ಮಕ್ಕಳು ಆರೋಗ್ಯಯುತ ಪ್ರಜೆಗಳಾಗಬೇಕು. ತಂಬಾಕು ಶ್ವಾಸಕೋಶ ಸೇರಿದಂತೆ ಬಹಳಷ್ಟು ಅಂಗಗಳಿಗೆ ತೊಂದರೆ ಉಂಟುಮಾಡುತ್ತದೆ ಎಂಬ ವಿಷಯವನ್ನು ಮಕ್ಕಳಿಗೆ ಬಾಲ್ಯದಿಂದಲೇ ಮನದಟ್ಟು ಮಾಡಬೇಕು. ಈ ಕೆಲಸದಲ್ಲಿ ವೈದ್ಯರು ಹಾಗೂ ಶಿಕ್ಷಕರ ಕಾರ್ಯ ಮಹತ್ವದಾಗಿದ್ದು, ಪ್ರತಿಯೊಬ್ಬರು ತಮ್ಮ ಸುತ್ತಮುತ್ತಲಿನ ಪ್ರದೇಶವನ್ನು ತಂಬಾಕು ಮುಕ್ತಗೊಳಿಸಲು ಕೈಜೋಡಿಸಬೇಕು. ತಂಬಾಕಿಗೆ ಚಿಕ್ಕ ಮಕ್ಕಳೇ ಹೆಚ್ಚಾಗಿ ಅವಲಂಬಿತರಾಗಿದ್ದಾರೆ. ಇದರಿಂದ ಅವರನ್ನು ರಕ್ಷಿಸಬೇಕು ಎಂದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಲೋಕೇಶ್ ಮಾತನಾಡಿ, ತಂಬಾಕು ಮನುಷ್ಯನ ಜೀವನವನ್ನೇ ಹಾಳು ಮಾಡುವ ಮಾರಕವಾದ ವಸ್ತು. ಇದರಿಂದ ಪ್ರತಿಯೊಬ್ಬರು ಜಾಗರೂಕತೆಯಿಂದ ಇರಿ ತಂಬಾಕು ಎಂಬ ಚಟಕ್ಕೆ ಯಾರು ಕೂಡ ದಾಸರಾಗಬೇಡಿ. ಜೈಲಿನಲ್ಲಿ ಇರುವ ಕೈದಿಗಳಿಗೆ ತಂಬಾಕು ಸೇವನೆಯಿಂದ ದೂರವಿಡಲು ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರಾಗೃಹ ಇಂದು ತಂಬಾಕು ಮುಕ್ತ ವಲಯವಾಗಿದೆ. ಕೈದಿಗಳಿಗೆ ಚೂಯಿಂಗ್ ಗಮ್ ಕೊಟ್ಟು ಅಭ್ಯಾಸ ಮಾಡಿಸಿ ತಂಬಾಕು ಸೇವನೆ ನಿಲ್ಲಿಸಲಾಗಿದೆ ಎಂದರು.

ಮಿಮ್ಸ್‌ನ ಸಮುದಾಯ ಆರೋಗ್ಯಶಾಸ್ತ್ರ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಲಿಂಗಪ್ಪ ಹೂಗರ್ ಮಾತನಾಡಿ, ತಂಬಾಕನ್ನು ಮೊದಲಿಗೆ ಯಾರು ಕೂಡ ತಮ್ಮ ಸ್ವಂತ ಹಣದಿಂದ ಸೇವಿಸುವುದಿಲ್ಲ, ಯಾರೋ ಕೊಟ್ಟಂತದನ್ನು ಸೇವಿಸಿರುವವರೇ ಹೆಚ್ಚು. ತಂಬಾಕು ಸೇವನೆ ಸಹವಾಸದಿಂದ ಬರುತ್ತದೆ. ಇದರಿಂದ ಬಹಳಷ್ಟು ಜನ ಚಟಕ್ಕೆ ದಾಸರಾಗಿ ಹೋಗಿದ್ದಾರೆ. ಇತ್ತೀಚೆಗೆ ಬಂದ ವರದಿ ಪ್ರಕಾರ ತಂಬಾಕು ಎನ್ನುವುದು ಇಡೀ ದೇಹವನ್ನೇ ಆವರಿಸಿಕೊಳ್ಳುತ್ತಿದೆ. ಎಲ್ಲರೂ ತಮ್ಮ ಮನೆಯಲ್ಲಿರುವವರು ತಂಬಾಕು ಸೇವನೆ ಮಾಡುವಂತೆ ನೋಡಿಕೊಳ್ಳಿ. ಸೇವನೆ ಮಾಡುತ್ತಿರುವವರಿಗೂ ಕೂಡ ತಿಳಿಸಿ ಬುದ್ಧಿ ಹೇಳಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಮಿಮ್ಸ್ ನಿರ್ದೇಶಕ ಡಾ.ಪಿ.ನರಸಿಂಹಸ್ವಾಮಿ, ವೈದ್ಯಕೀಯ ಅಧೀಕ್ಷಕ ಡಾ.ಜಿ.ಶಿವಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ.ಗಾಯಿತ್ರಿ, ಜಿಲ್ಲಾ ತರಬೇತಿ ಕೇಂದ್ರ ಪ್ರಾಂಶುಪಾಲ ಡಾ.ಎಚ್.ಎಂ.ಮಮತಾ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಎಸ್.ಬೆಟ್ಟಸ್ವಾಮಿ, ಐ.ಎಂ.ಎ ಅಧ್ಯಕ್ಷ ಡಾ.ಮರೀಗೌಡ, ಸಮುದಾಯ ಆರೋಗ್ಯ ಶಾಸ್ತ್ರ ವಿಭಾಗದ ಡಾ.ಬಿ.ಆರ್.ಹರೀಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್ ಇದ್ದರು. ಇದೇ ವೇಳೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net