ಪ್ರಪಂಚಕ್ಕೆ ಮಾದರಿಯಾಗಿದ್ದಾರೆ ಅಂಬೇಡ್ಕರ್

14 Sirwar 1
Published on

ಸಿರವಾರ: ಭೂಮಿಯ ಮೇಲೆ ಸೂರ್ಯ, ಚಂದ್ರ ಇರುವವರೆಗೂ ಅಚ್ಚಳಿಯದೆ ಉಳಿಯುವ ಕೊಡುಗೆ ನೀಡಿದ ಕೀರ್ತಿ ಡಾ.ಬಿ. ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.

ಪಟ್ಟಣದ ಚುಕ್ಕಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾ ಸಮಿತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಭಾನುವಾರ ಮಾತನಾಡಿದರು. ಕಡುಬಡತನಲ್ಲಿ ಹುಟ್ಟಿ ಬೆಳೆದು, ಕಷ್ಟದಿಂದ ಉನ್ನತ ವಿದ್ಯಾಭ್ಯಾಸ ಮಾಡಿ ದೇಶದ ಪ್ರತಿ ಪ್ರಜೆಗೂ ನ್ಯಾಯ ನೀಡುವಂತಹ ಮಹಾನ್ ಗ್ರಂಥ ನೀಡಿ ಇಡೀ ಪ್ರಪಂಚಕ್ಕೆ ಅಂಬೇಡ್ಕರ್ ಮಾದರಿಯಾಗಿದ್ದಾರೆ. ಅತ್ಯಂತ ಕ್ಲಿಷ್ಟಕರ ಸಂದರ್ಭದಲ್ಲೂ ಅಂಬೇಡ್ಕರ್ ಅವರು ನೊಂದ ದೀನ-ದಲಿತರಿಗೆ ದಾರಿ ದೀಪವಾಗುವಂತಹ ಮಾರ್ಗದರ್ಶನ ಹಾಕಿ ಕೊಟ್ಟಿದ್ದು, ಆ ದಾರಿಯಲ್ಲಿ ಸಾಗಬೇಕು ಎಂದು ಹೇಳಿದರು.

ಡಾ.ಬಿ.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಂಪತ್‌ರಾಜ್ ಮಾತನಾಡಿ, ಸರ್ಕಾರ ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಮಟ್ಟಕ್ಕೆ ಬೆಳೆಯಬೇಕು. ಛಲವಿದ್ದರೆ ಸಾಧನೆ ಮಾಡಲು ಸಾಧ್ಯ ಎನ್ನುವುದಕ್ಕೆ ಈ ಪ್ರತಿಭೆಗಳು ಸಾಕ್ಷಿ. ವಿದ್ಯಾರ್ಥಿ ಜೀವನದಲ್ಲಿ ಸಮಯ ವ್ಯರ್ಥ ಮಾಡದೆ ವಿದ್ಯಾಭ್ಯಾಸ ಮಾಡಿ ತಂದೆ, ತಾಯಿ ಹಾಗೂ ಹುಟ್ಟಿ ಬೆಳೆದ ಊರಿಗೆ ಕೀರ್ತಿ ತರಬೇಕೆಂದು ಹೇಳಿದರು.

ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರಾಯಚೂರು ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಮಲ್ಲೇಶ್ವರ ಕೊಲಿಮಿ, ನಗರಸಭೆ ಸದಸ್ಯ ಬಿ.ರಮೇಶ, ಶ್ರೀನಿವಾಸ ಕಗ್ಗಲ್, ಪ್ರಮುಖರಾದ ರಮೇಶ ದರ್ಶನಕರ್, ಗಣೇಕಲ್ ವೀರೇಶ ಸಾಹುಕಾರ್, ಶಿವಶರಣ ಅರಕೇರಿ, ರಾಜು ಕಾಂಬ್ಳೆ, ಮಲ್ಲೇಶಪ್ಪ ಕಲ್ಲೂರು, ಷಣ್ಮುಖಪ್ಪ, ಶಿವರಾಜ ಜಾನೇಕಲ್, ತಮ್ಮಣ್ಣ ವಕೀಲ, ಸಚ್ಚಿದಾನಂದ, ನರಸಿಂಹಲು ಶಿವರಾಜ ಹನುಮಾಪೂರ, ವೆಂಕಟೇಶ ದಿನ್ನಿ. ಬಾಲಪ್ಪ ಹಳ್ಳಿಹೊಸೂರು, ತಿಮ್ಮಣ್ಣ ಮರಾಠ, ಸಿ.ಹನುಮೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net